Advertisement

ಜೈನ ಧರ್ಮದಿಂದ ವಿಶ್ವ ಶಾಂತಿ

11:37 AM Mar 30, 2018 | |

ಬೆಂಗಳೂರು: ಸಮಾಜದಲ್ಲಿ ಅಶಾಂತಿ ಮತ್ತು ಎಲ್ಲೆಡೆ ಸಂಘರ್ಷದ ವಾತಾವರಣ ಇರುವಾಗ ಜೈನ ಧರ್ಮ ನಿರಂತರವಾಗಿ ವಿಶ್ವದಲ್ಲಿ ಶಾಂತಿಯ ಸಂದೇಶ ಸಾರುತ್ತಿದೆ ಎಂದು ಧರ್ಮಸ್ಥಳ ಸುರೇಂದ್ರ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ಭಗವಾನ್‌ ಮಹಾವೀರ್‌ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿಗೆ ಮೌಲ್ಯಗಳನ್ನು ಮನವರಿಕೆ ಮಾಡಿಕೊಟ್ಟು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಮಹಾಪುರುಷರ ಜಯಂತಿಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ಶಾಂತಿದೂತ ಮಹಾವೀರರ ಜಯಂತಿ ಸಹ ಆಚರಿಸಲಾಗುತ್ತದೆ. ಪ್ರತಿ ವರ್ಷ ಜಯಂತಿ ಆಚರಿಸುವುದರ ಉದ್ದೇಶ ಮಹಾವೀರರ ವಿಚಾರಗಳನ್ನು ಪುನರ್‌ಮನನ ಮಾಡಿಕೊಳ್ಳುವುದಾಗಿದೆ ಎಂದು ಹೇಳಿದರು.

ಸಾಹಿತಿ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಸಮಕಾಲೀನ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳ ವಾಸ್ತುಶಿಲ್ಪ, ಸಿದ್ಧಾಂತಗಳಲ್ಲಿ ಅಹಿಂಸೆಯ ವಿಚಾರಗಳಲ್ಲಿ ಬಹಳಷ್ಟು ಹೊಂದಾಣಿಕೆ ಇದೆಯಾದರೂ, ಕೆಲವು ವಿಚಾರಗಳಲ್ಲಿ ವ್ಯತ್ಯಾಸಗಳೂ ಇವೆ. ಆದರೆ, ಅಹಿಂಸೆಯೇ ಎರಡೂ ಧರ್ಮಗಳ ಪರಮ ಸಿದ್ಧಾಂತ. ಅಹಿಂಸೆಯೇ ಪರಮ ಧರ್ಮ’, “ನೀವು ಬದುಕಿ ಇತರರನ್ನು ಬದುಕಲು ಬಿಡಿ’ ಎಂಬ ಮಹಾವೀರರ ತತ್ವ ಸಿದ್ಧಾಂತಗಳನ್ನು ಸ್ಮರಿಸುವ ಹಾಗೂ ಅನುಸರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು. 

ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌. ಜಿತೇಂದ್ರಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಮಾತನಾಡಿ, 2017ನೇ ಸಾಲಿನ “ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ’ಗೆ ಶ್ರವಣಬೆಳಗೋಳ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಪ್ರಶಸ್ತಿ ಪ್ರದಾನ ಸಾಧ್ಯವಾಗಿಲ್ಲ ಎಂದರು. ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next