ತಿರುಪತಿ: ಸಾಧನೆಗಳ ಮೇಲೆ ಸಾಧನೆ ಮಾಡುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇದೀಗ ಒಂದೇ ಯತ್ನದಲ್ಲಿ 103 ಉಪಗ್ರಹಗಳನ್ನು ಹಾರಿಬಿಡುವ ಬೃಹತ್ ಯೋಜನೆಗೆ ಸಜ್ಜಾಗಿದೆ.
ಇದುವರೆಗೆ ಒಮ್ಮೆಗೆ 22 ಉಪಗ್ರಹಗಳನ್ನು ಹಾರಿಬಿಟ್ಟಿದ್ದೇ ಇಸ್ರೋದ ದೊಡ್ಡ ಸಾಧನೆಯಾಗಿತ್ತು. ಇದೀಗ 5 ಪಟ್ಟು ಹೆಚ್ಚು ಉಪಗ್ರಹಗಳನ್ನು ಹಾರಿಬಿಡುವ ಯೋಜನೆ ರೂಪುಗೊಂಡಿದೆ. ಇದು ಯಶಸ್ವಿಯಾದಲ್ಲಿ ಅದು ಹೊಸ ವಿಶ್ವದಾಖಲೆಯಾಗಲಿದೆ.
ದೇಶದ ಹೆಮ್ಮೆಯ ಉಪಗ್ರಹ ಉಡ್ಡಯನ ವಾಹಕವಾದ ಪಿಎಸ್‌ಎಲ್‌ವಿ- ಸಿ37 ರಾಕೆಟ್ ಮೂಲಕ ಫೆಬ್ರುವರಿ ಮೊದಲ ವಾರದಲ್ಲಿ ಒಂದೇ ಯತ್ನದಲ್ಲಿ 103 ಉಪಗ್ರಹಗಳನ್ನು ಹಾರಿಬಿಡಲಾಗುವುದು ಎಂದು ಇಸ್ರೋ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಈ ಮೊದಲು 83 ಉಪಗ್ರಹಗಳನ್ನು ಹಾರಿಬಿಡಲು ನಿರ್ಧರಿಸಲಾಗಿತ್ತು. ಆದರೆ ಆ ಪಟ್ಟಿಗೆ ಇದೀಗ ಮತ್ತೂ 20 ಉಪಗ್ರಹಗಳು ಸೇರ್ಪಡೆಯಾಗಿವೆ. ಹೀಗಾಗಿ ಉಡ್ಡಯನ ಪ್ರಕ್ರಿಯೆಯನ್ನು ಜನವರಿ ಅಂತ್ಯದ ಬದಲಾಗಿ ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಲಾಗಿದೆ. ಈ ಪೈಕಿ 100 ಉಪಗ್ರಹಗಳು ವಿದೇಶಗಳಿಗೆ ಸೇರಿದ್ದಾಗಿವೆ ಎಂದು ಇಸ್ರೋದ ಲಿಕ್ವಿಡ್ ಪ್ರೊಪಲÒನ್ ಸಿಸ್ಟಮ್‌ನ ನಿರ್ದೇಶಕ ಎಸ್. ಸೋಮನಾಥ್ ತಿಳಿಸಿದ್ದಾರೆ.
ಒಟ್ಟಾರೆ ಉಡ್ಡಯನ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲಾ ಸಲಕರಣೆಗಳ ತೂಕ 1350 ಕೆಜಿಯಾಗಿದ್ದು, ಈ ಪೈಕಿ ಉಪಗ್ರಹಗಳ ತೂಕ 600 ಕೆಜಿಯಾಗಿರಲಿದೆ.
ಒಮ್ಮೆಗೆ ಅತಿ ಹೆಚ್ಚು ಅಂದರೆ 2014ರಲ್ಲಿ 37 ಉಪಗ್ರಹಗಳನ್ನು ಉಡ್ಡಯನ ಮಾಡಿದ ದಾಖಲೆ ಸದ್ಯ ರಷ್ಯಾ ಹೆಸರಲ್ಲಿದೆ. ನಂತರದ ಸ್ಥಾನದಲ್ಲಿ 27 ಉಪಗ್ರಹ ಉಡ್ಡಯನ ಮಾಡಿದ್ದ ಅಮೆರಿಕ ಇದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಎಲ್ಲಾ ಸಾರ್ಕ್ ರಾಷ್ಟ್ರಗಳಿಗೆ ನೆರವು ನೀಡುವ ಉದ್ದೇಶ ಹೊಂದಿರುವ ಉಪಗ್ರಹವನ್ನು ಮಾರ್ಚ್ ತಿಂಗಳಲ್ಲಿ ಉಡ್ಡಯನ ಮಾಡಲಾಗುವುದು ಎಂದು ಸೋಮನಾಥ್ ತಿಳಿಸಿದ್ದಾರೆ.