Advertisement
ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಔದ್ಯೋಗಿಕ ಸಮಸ್ಯೆ, ಕೀಳರಿಮೆ, ಒಂಟಿತನ, ದುಶ್ಚಟಗಳು, ದುರಾಭ್ಯಾಸ, ಜೀವನ ಶೈಲಿಯಲ್ಲಿನ ದಿಢೀರ್ ಬದಲಾವಣೆ, ಅಂಗವೈಕಲ್ಯ ಇತ್ಯಾದಿಗಳಿಂದ ಮಾನಸಿಕ ಆರೋಗ್ಯವೂ ಕೆಡುವ ಸಾಧ್ಯತೆ ಹೆಚ್ಚಿರುತ್ತದೆ.
ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಉಡುಪಿಯ ಡಾ| ಎ.ವಿ.ಬಾಳಿಗಾ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿರುವ ಡಾ| ವಿರೂಪಾಕ್ಷ ದೇವರಮನೆ ಅವರು ಜನರಿಗೆ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.
Related Articles
– ದೈಹಿಕ ಆರೋಗ್ಯಕ್ಕೆ ನೀಡುವಷ್ಟೇ ಕಾಳಜಿಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ನಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ದಿನೇದಿನೆ ನಮ್ಮನ್ನು ನಾವೇ ಕೇಳಿಕೊಳ್ಳುತ್ತಿರಬೇಕು. ದೈಹಿಕ ಆರೋಗ್ಯದ ಕಾಳಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ಮಾದರಿಯಲ್ಲಿ ಮಾನಸಿಕ ಆರೋಗ್ಯದ ಕಾಳಜಿಯೂ ಹೆಚ್ಚಬೇಕು.
– ನಿತ್ಯದ ಬದುಕಿನಲ್ಲಿ ಕನಿಷ್ಠ ಅರ್ಧಗಂಟೆ ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ನಮ್ಮ ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ.
– ಮದ್ಯಪಾನ ಸಹಿತ ಎಲ್ಲ ತೆರನಾದ ದುಶ್ಚಟಗಳು ಹಾಗೂ ಮಾನಸಿಕ ಆರೋಗ್ಯ ಒಂದಕ್ಕೊಂದು ಕೊಂಡಿಯಿದ್ದಂತೆ. ಹೀಗಾಗಿ ಎಲ್ಲ ರೀತಿಯ ದುಶ್ಚಟಗಳು ಮತ್ತು ಮದ್ಯವ್ಯಸನದಿಂದ ದೂರವಿರಬೇಕು.
– ದೈಹಿಕ ಆರೋಗ್ಯದಷ್ಟೇ ವೈಜ್ಞಾನಿಕವಾದದ್ದು ಮಾನಸಿಕ ಆರೋಗ್ಯ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಕೆಲವೊಂದು ಅನಿಷ್ಟ ನಂಬಿಕೆಗಳನ್ನು ಜನರು ಹೊಂದಿದ್ದಾರೆ. ಅನೇಕ ಸಂದರ್ಭದಲ್ಲಿ ದುಷ್ಟಶಕ್ತಿಗಳ ಪ್ರಭಾವ ಅಥವಾ ಇನ್ಯಾವುದೋ ಅಗೋಚರ ಶಕ್ತಿಯಿಂದ ಸಮಸ್ಯೆಯಾಗಿದೆ ಎಂದು ನಂಬುವುದೇ ಹೆಚ್ಚು. ಮಾನಸಿಕ ಸಮಸ್ಯೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲೇ ನೋಡಬೇಕು.
– ನಮ್ಮಲ್ಲಿರುವ ವಸ್ತುಗಳಲ್ಲಿಯೇ ಖುಷಿಪಡಬೇಕು. ಇಲ್ಲದಿರುವ ವಸ್ತುಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು. ಹಾಗೆಯೇ ನಮ್ಮನ್ನು ಅಥವಾ ಮಕ್ಕಳನ್ನು ಇನ್ನೊಬ್ಬರಿಗೆ, ಅವರ ಜೀವನ ಶೈಲಿಗೆ ಹೋಲಿಸಬಾರದು.
– ಇತ್ತೀಚಿನ ದಿನಗಳಲ್ಲಿ ಒತ್ತಡದಿಂದ ತಲೆನೋವು, ಕತ್ತುನೋವು, ಸ್ನಾಯು ಸಳೆತ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಒತ್ತಡದ ಜೀವನದಿಂದ ದೂರ ಇರಲು ಪ್ರಯತ್ನಿಸಬೇಕು.
– ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ನಿರಂತರ ಎರಡು ವಾರಗಳ ವರೆಗೂ ಇದ್ದಲ್ಲಿ ಸಮೀಪದ ಮನೋವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಸಂಪರ್ಕಿಸಬೇಕು.
– ಕುಟುಂಬ, ಸ್ನೇಹಿತರು ಹಾಗೂ ಸಮಾಜದೊಂದಿಗೆ ಸದಾ ಸಕಾರಾತ್ಮಕ ಚಿಂತನೆಯೊಂದಿಗೆ ವ್ಯವಹರಿಸುವುದು ಬಲು ಅಗತ್ಯ.
– ಯಾವುದೇ ವಿಷಯದಲ್ಲೂ ಅನಗತ್ಯ ಸ್ಪರ್ಧೆ ಬೇಡ. ಎಲ್ಲರಿಗಿಂತಲೂ ಸದಾ ಮುಂದಿರಬೇಕು ಎನ್ನುವುದಕ್ಕಿಂತ ಪ್ರಗತಿಶೀಲರಾಗಬೇಕು ಎನ್ನುವ ಚಿಂತನೆಯಲ್ಲಿ ಮುನ್ನಡೆಯಬೇಕು.
ಯಾವುದೇ ಮಾನಸಿಕ ಸಮಸ್ಯೆಗಳು ಕಾಡಿದಾಗ ಧೃತಿಗೆಡದೆ ಧೈರ್ಯದಿಂದ ಈ ಎಲ್ಲ ಸಲಹೆ ಸೂಚನೆಗಳನ್ನು ಅನುಸರಿಸಿದಲ್ಲಿ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸ್ವಸ್ಥವಾಗಿರಲು ಸಾಧ್ಯ.
Advertisement
ನಿರ್ಲಕ್ಷ್ಯ ಸಲ್ಲದು ಈ ವರ್ಷ “ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ಒಂದು ಜಾಗತಿಕ ಆದ್ಯತೆ’ ಎಂಬ ಧ್ಯೇಯದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಬಹಳ ಜನರು ತಮ್ಮ ವರ್ತನೆಯನ್ನು ಸಾಮಾನ್ಯವೆಂದು ತಿರಸ್ಕರಿಸುತ್ತಾರೆ ಇಲ್ಲವೇ ಕಳಂಕವೆಂದು ಭಾವಿಸಿ ಹಿಂಜರಿಯುತ್ತಾರೆ. ಮಾನಸಿಕ ಸಮಸ್ಯೆಗಳು ಮತ್ತದರ ಪರಿಹಾರಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಅಲ್ಲದೆ ಬಹಳಷ್ಟು ಮಂದಿಗೆ ತಡವಾಗಿ ಚಿಕಿತ್ಸೆ ದೊರೆಯುವುದರಿಂದ ಕಾಯಿಲೆ ಉಲ್ಬಣವಾಗುತ್ತದೆ. ಹೀಗಾಗಿ ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದುವ ಅಗತ್ಯವಿದೆ.
– ಡಾ| ಸಮೀರ್ ಕುಮಾರ್ ಪ್ರಹರಾಜ್‌ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಮನೋವೈದ್ಯಶಾಸ್ತ್ರ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ
- ರಾಜು ಖಾರ್ವಿ ಕೊಡೇರಿ