Advertisement

ಆತ್ಮಶಕ್ತಿಯಿಂದ ಕಾಯಿಲೆ ಶೀಘ್ರ ಗುಣಮುಖ

02:53 PM Oct 18, 2021 | Team Udayavani |

ಹರಿಹರ: ರೋಗಿಗಳು ಶೀಘ್ರ ಗುಣಮುಖರಾಗಲು ವೈದ್ಯರು ನೀಡುವ ಔಷಧಗಳ ಜೊತೆಗೆ ಆತ್ಮಶಕ್ತಿಯೂ ಬೇಕಾಗುತ್ತದೆ ಎಂದು ಇಲ್ಲಿನ ಪ್ರಧಾನ ಸಿವಿಲ್‌ ನ್ಯಾಯಾಲಯದ ನ್ಯಾಯಾ ಧೀಶ ಯಶವಂತಕುಮಾರ್‌ ಆರ್‌. ಹೇಳಿದರು.

Advertisement

ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘದಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರು ರೋಗಿಗಳಿಗೆ ದೈಹಿಕ ಚಿಕಿತ್ಸೆ ನೀಡುವ ಜೊತೆ ಅವರಲ್ಲಿ ಆತ್ಮಶಕ್ತಿಯನ್ನೂ ಬೆಳೆಸಬೇಕಿದೆ ಎಂದರು.

ದೈಹಿಕ ಆರೋಗ್ಯದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಸಣ್ಣಪುಟ್ಟ ಮಾನಸಿಕ ಸಮಸ್ಯೆಗಳನ್ನು ಕಡೆಗಣಿಸಿದರೆ ದೈಹಿಕ ರೋಗಗಳಿಗೆ ದಾರಿಯಾಗುತ್ತದೆ. ಆದ್ದರಿಂದ ನಮ್ಮಲ್ಲಿ ಸಕಾರಾತ್ಮಕ ಆಲೋಚನೆಗಳಿರಬೇಕು, ಆತ್ಮವಿಶ್ವಾಸ ತುಂಬಿರಬೇಕು. ನೆರೆಹೊರೆಯವರನ್ನ ಸರಿಯಾಗಿ ಅರ್ಥ ಮಾಡಿಕೊಂಡು ಅನ್ಯೋನ್ಯವಾಗಿರಬೇಕೆಂದು ತಿಳಿಸಿದರು.

ನ್ಯಾಯವಾದಿ ಜಿ.ಎಚ್‌. ಭಾಗೀರಥಿ ಮಾತನಾಡಿ, ದೈಹಿಕವಾಗಿ ಸದೃಢವಾಗಿದ್ದು, ಆಲೋಚನೆಗಳು ಸರಿಯಿಲ್ಲ, ವರ್ತನೆಗಳು ಸಹಜವಾಗಿಲ್ಲವೆಂದರೆ ಮನೋವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಮಾನಸಿಕ ಸಮಸ್ಯೆಗಳಿಗೆ ಯಾವುದೋ ಆತ್ಮ, ದೆವ್ವ ಮೈಮೇಲೆ ಬಂದಿದೆ ಎನ್ನುವುದು ಮೂಢನಂಬಿಕೆಯಾಗಿದೆ. ಈಗ ಎಲ್ಲರ ಕೈಯ್ಯಲ್ಲೂ ಸ್ಮಾರ್ಟ್‌ ಫೋನ್‌, ಗಳಿಗೆಮೊಮ್ಮೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಮೆಸೆಂಜರ್‌ ನೋಡುತ್ತಿದ್ದರೆ ಒತ್ತಡಕ್ಕೊಳಗಾಗಿ ಖನ್ನತೆಗೆ ತುತ್ತಾಗಬೇಕಾಗುತ್ತದೆ. ತಂತ್ರಜ್ಞಾನವನ್ನು ಹಿತಮಿತವಾದ ಮನಸೋಲ್ಲಾಸ ಸೇರಿದಂತೆ ರಚನಾತ್ಮಕ ಉದ್ದೇಶಗಳಿಗೆ ಮಾತ್ರ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

Advertisement

ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ| ಗಂಗಂ ಸಿದ್ದಾರೆಡ್ಡಿ, ಮಾನಸಿಕ ಒತ್ತಡದಿಂದ ಹೃದಯ ಬಡಿತ ಹೆಚ್ಚಿ ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ತಲೆನೋವು, ಮೈಕೈ ನೋವು, ಬೆನ್ನು-ಕತ್ತು ನೋವು, ಮಲಬದ್ದತೆಗಳಿಗೆ ಒತ್ತಡವೂ ಕಾರಣ. ಮೆದುಳು ಮತ್ತು ಮನಸ್ಸಿನ ಮೇಲೆ ವಿಪರೀತ ಒತ್ತಡ ಬಿದ್ದಾಗ ಸಿಟ್ಟು, ಸೆಡವು, ಕಿರಿಕಿರಿ, ಏಕಾಗ್ರತೆ ಕೊರತೆ ಉಂಟಾಗುತ್ತದೆ ಎಂದರು.

ಆಡಳಿತ ವೈದ್ಯಾಧಿಕಾರಿ ಡಾ| ಹನುಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿ ಕಾರಿ ಡಾ| ಚಂದ್ರಮೋಹನ, ಎಪಿಪಿ ಪ್ರವೀಣ್‌ಕುಮಾರ್‌, ವಕೀಲ ಕೆ. ಚಂದ್ರಾಚಾರಿ ಮತ್ತಿತರರು ಇದ್ದರು.

ಜಗತ್ತಿನ ಜನರಲ್ಲಿ ಸ್ವಾಸ್ಥ ಮಾನಸಿಕತೆ ಕ್ಷೀಣಿಸಿದ್ದರಿಂದ 1992ರಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಮಾನಸಿಕ ವ್ಯಾಧಿಗಳಿಗೆ ದೆವ್ವ-ಭೂತಗಳ ಹಣೆಪಟ್ಟಿ ಕಟ್ಟುವುದರಿಂದ ಮಾನಸಿಕ ರೋಗ ವಾಸಿಯಾಗುವುದಿಲ್ಲ, ಚಿಕಿತ್ಸೆ ಫಲ ನೀಡುವುದಿಲ್ಲ ಎನ್ನುವ ತಪ್ಪು ಕಲ್ಪನೆ ಹೋಗಲಾಡಿಸಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆ ಉದ್ದೇಶ. ಜಿ.ಎಚ್‌. ಭಾಗೀರಥಿ, ನ್ಯಾಯವಾದಿ

Advertisement

Udayavani is now on Telegram. Click here to join our channel and stay updated with the latest news.

Next