Advertisement
ಯಕೃತ್ ತನ್ನೆಲ್ಲ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಾಗ ಅಥವಾ ಕಳೆದುಕೊಳ್ಳುತ್ತಿರುವಾಗ ಅದನ್ನು ಯಕೃತ್ ವೈಫಲ್ಯ ಎನ್ನುತ್ತಾರೆ. ಇದು ತತ್‌ಕ್ಷಣ ವೈದ್ಯಕೀಯ ಆರೈಕೆ ಅಗತ್ಯವಾದ, ಪ್ರಾಣಾಂತಿಕ ಸ್ಥಿತಿಯಾಗಿದೆ.
Related Articles
Advertisement
ಸಾಮಾನ್ಯವಾಗಿ ಮಿದುಳು ಮೃತ ದಾನಿಯಿಂದ ಆರೋಗ್ಯವಂತ ಯಕೃತ್ತನ್ನು ಪಡೆಯಲಾಗುತ್ತದೆ; ಕೆಲವೊಮ್ಮೆ ಆರೋಗ್ಯಯುತ ಜೀವಂತ ವ್ಯಕ್ತಿಯೂ ಯಕೃತ್ತನ್ನು ದಾನ ಮಾಡಬಹುದಾಗಿದೆ. ಯಕೃತ್ತಿನ ಪುನರುಜ್ಜೀವನ ಸಾಮರ್ಥ್ಯ ಅಪಾರವಾಗಿದ್ದು, ಯಕೃತ್ ಕಸಿಯ ಸಂದರ್ಭದಲ್ಲಿ ಆರೋಗ್ಯವಂತ ವ್ಯಕ್ತಿಯ ಯಕೃತ್ತಿನ ಭಾಗವೊಂದನ್ನು ಮಾತ್ರ ತೆಗೆಯಲಾಗುತ್ತದೆ. ಹೀಗಾಗಿ ಕಸಿ ಮಾಡಲಾದ ಆರೋಗ್ಯವಂತ ಯಕೃತ್ತಿನ ಭಾಗವು ಕೆಲವು ವಾರಗಳಲ್ಲಿ ಪರಿಪೂರ್ಣ ಯಕೃತ್ ಆಗಿ ಬೆಳವಣಿಗೆ ಹೊಂದುತ್ತದೆ. ಆದ್ದರಿಂದ ರೋಗಿ ಮತ್ತು ಜೀವಂತ ದಾನಿ – ಇಬ್ಬರೂ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
ಹೆಪಾಟಿಕ್ ಎನ್‌ಸೆಫಲೋಪಥಿ, ವೇರಿಸೆಲ್ ಹ್ಯಾಮರೇಜ್ ಅಥವಾ ಎಸಿಟಿಸ್‌ನಂತಹ ಹೆಪೆಟಿಕ್ ಡಿಕಂಪೆನ್‌ಸೇಶನ್‌ಗೆ ಈಡಾದ ರೋಗಿಗಳಿಗೆ ಆರಂಭದಲ್ಲಿ ಔಷಧ ಚಿಕಿತ್ಸೆಯನ್ನು ಒದಗಿಸಬೇಕು ಮತ್ತು ಸಂಭಾವ್ಯ ಯಕೃತ್ ಕಸಿ ಹೊಂದಬಲ್ಲಂಥವರಿಗೆ ಸಮಗ್ರ ಯಕೃತ್ ಕಸಿ ವಿಶ್ಲೇಷಣೆಯನ್ನು ಆರಂಭಿಸಬೇಕು. ಯಕೃತ್ ಕಸಿಗಳಲ್ಲಿ ಶೇ. 80ರಷ್ಟು ಡಿಕಂಪೆನ್‌ಸೇಶನ್‌ನಿಂದ ಉಂಟಾಗಿರುವ ದೀರ್ಘಕಾಲೀನ ಯಕೃತ್ ಕಾಯಿಲೆಗಳಿಂದ ಆಗಿರುತ್ತವೆ. ದೀರ್ಘಕಾಲೀನ ಮತ್ತು ಅಲ್ಪಕಾಲೀನ ಅಂತಿಮ ಹಂತದ ಯಕೃತ್ ಕಾಯಿಲೆಯನ್ನು ಹೊಂದಿರುವವರಲ್ಲಿ ಜೀವ ಉಳಿಸುವ ಕೊಡುಗೆಯಾಗಿ ಯಕೃತ್ ಕಸಿ ಶಸ್ತ್ರಚಿಕಿತ್ಸೆ ಮಾನ್ಯತೆ ಹೊಂದಿದೆ. ಇದು ಸಹಜ ಆರೋಗ್ಯ, ಜೀವನಶೈಲಿಯನ್ನು ಪುನರ್ ಸ್ಥಾಪಿಸುತ್ತದೆಯಲ್ಲದೆ ಜೀವಿತಾವಧಿಯನ್ನು 15 ವರ್ಷಗಳಷ್ಟು ವಿಸ್ತರಿಸುತ್ತದೆ. ಇತರ ಎಲ್ಲ ವೈದ್ಯಕೀಯ ಚಿಕಿತ್ಸಾ ಆಯ್ಕೆಗಳು ವಿಫಲವಾದ ಸಂದರ್ಭದಲ್ಲಿ ವಿವಿಧ ಯಕೃತ್ ಕಾಯಿಲೆಗಳಿಗೆ ಚಿಕಿತ್ಸೆ ಆಯ್ಕೆಯಾಗಿ ಯಕೃತ್ ಕಸಿ ಚಿಕಿತ್ಸೆಯು ಸುರಕ್ಷಿತ ಆಯ್ಕೆಯಾಗಿ ಗುರುತಿಸಿಕೊಂಡಿದೆ.
ಟ್ರಾನ್ಸ್‌ಪ್ಲಾಂಟ್ ರಿಸೀಪಿಯೆಂಟ್‌ಗಳ ಸೈಂಟಿ ಕ್ ರಿಜಿಸ್ಟ್ರಿಯ ಅಂಕಿ ಅಂಶಗಳ ಪ್ರಕಾರ ರೋಗಿ ಬದುಕುಳಿಯುವ ಒಟ್ಟಾರೆ ದರವು ಉತ್ತಮವಾಗಿದ್ದು, ಮೃತ ವ್ಯಕ್ತಿಯಿಂದ ದಾನ ಪಡೆದ 1 ವರ್ಷದ ಬಳಿಕ ಶೇ. 90ರಷ್ಟು ಮತ್ತು 5 ವರ್ಷಗಳ ಬಳಿಕ ಶೇ. 77ರಷ್ಟು ಇದೆ. ಅತ್ಯುತ್ತಮವಾದ ರೋಗಿ ಆರೈಕೆ ಒದಗಿಸುವುದು ಸಾಧ್ಯವಾಗುವುದಕ್ಕೆ ಬಹು ವಿಭಾಗೀಯ ತಂಡ ವಿಧಾನವನ್ನು ಅನಸರಿಸಬೇಕಾಗಿರುತ್ತದೆ.
ಯಕೃತ್ ಕಸಿಗೆ ಮುನ್ನ ಹೆಪಟಾಲಜಿಸ್ಟ್, ಕಸಿ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಕಸಿ ಸಂಯೋಜಕರು ರೋಗಿಯ ವಿಶ್ಲೇಷಣೆ ನಡೆಸುವುದು, ಎಲ್ಲ ಔಷಧ ಚಿಕಿತ್ಸೆಗಳ ಬಗ್ಗೆ, ಜೀವನ ಶೈಲಿ ಬದಲಾವಣೆಗಳ ಬಗ್ಗೆ, ನಡೆಸಬೇಕಾದ ಶಸ್ತ್ರಚಿಕಿತ್ಸೆಗಳ ವಿಧಗಳ ಬಗ್ಗೆ ಸಮಾಲೋಚಿಸುವುದು, ಕಸಿ ನಡೆಸಿದ ಬಳಿಕದ ಹಂತದ ಬಗ್ಗೆ – ಇಮ್ಯುನೋಸಪ್ರಶನ್ ಮತ್ತು ಸಂಭಾವ್ಯ ಸಂಕೀರ್ಣ ಸ್ಥಿತಿಗಳು ಹಾಗೂ ಫಲಿತಾಂಶಗಳ ಬಗ್ಗೆ ವಿಸ್ತೃತ ಸಮಾಲೋಚನೆಯನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.
ಮದ್ಯಪಾನ ಅಥವಾ ಮಾದಕದ್ರವ್ಯ ವ್ಯಸನ ವಿಚಾರ ಇದ್ದಲ್ಲಿ ಅವುಗಳನ್ನು ಪರಿಹರಿಸಲು ವಿಶೇಷ ಕಸಿ ಮನಶಾಸ್ತ್ರಜ್ಞರಿಂದ ಮನಶಾಸ್ತ್ರೀಯ ವಿಶ್ಲೇಷಣೆ ನಡೆಸಿ ರೋಗಿಯು ಶಸ್ತ್ರಚಿಕಿತ್ಸೆ ಮತ್ತು ಅದರ ಸಂಭಾವ್ಯ ಫಲಿತಾಂಶಗಳ ಬಗ್ಗೆ ಅರಿವು ಹೊಂದುವಂತೆ ಮಾಡುವುದು ಅಗತ್ಯವಾಗಿರುತ್ತದೆ. ಯಕೃತ್ ಕಸಿ ಶಸ್ತ್ರಚಿಕಿತ್ಸೆಯ ವಿಮಾ ಕವರೇಜ್ ಮತ್ತು ಇಮ್ಯುನೊಸಪ್ರಸಿವ್ ಔಷಧಗಳ ಬಗ್ಗೆ ವಿಶೇಷ ತಂಡವೊಂದು ವಿಶ್ಲೇಷಣೆ ನಡೆಸುತ್ತದೆ.
ಕಸಿಗೆ ಮೊದಲಿನ ಮತ್ತು ಕಸಿಯ ಬಳಿಕದ ಹಂತಗಳಲ್ಲಿ ಸಮರ್ಪಕ ಪೌಷ್ಟಿಕತೆಯನ್ನು ಕಾಯ್ದುಕೊಳ್ಳುವಲ್ಲಿ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೈಪರ್ ಲಿಪಿಡೇಮಿಯಾದಂತಹ ಅನಾರೋಗ್ಯಗಳು ಇದ್ದ ಸಂದರ್ಭದಲ್ಲಿ ಅಗತ್ಯ ಆಹಾರ ಶೈಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಪೌಷ್ಟಿಕಾಂಶ ತಜ್ಞರು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ.
ಡಾ| ವಿದ್ಯಾ ಎಸ್. ಭಟ್ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಜಿಸ್ಟ್
ಕೆಎಂಸಿ ಆಸ್ಪತ್ರೆ, ಮಂಗಳೂರು