ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ 40ರಿಂದ 50 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಯಕೃತ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಶೇ.75ರಷ್ಟು ಹಾನಿಗೊಳಗಾದ ಯಕೃತ್ ಗೆ ಕಸಿಯೊಂದೇ ಪರ್ಯಾಯ ಮಾರ್ಗವಿದ್ದು, ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 25 ಮಂದಿಗೆ ಯಕೃತ್ (ಲಿವರ್) ಕಸಿ ಮಾಡಲಾಗಿದೆ.
ದೇಶದಲ್ಲಿ ಯಕೃತ್ ಸಮಸ್ಯೆಯಿಂದ ಬಳಲುತ್ತಿರುವವಲ್ಲಿ ಪ್ರತಿವರ್ಷ 2.64ಲಕ್ಷ ಮಂದಿ ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ ತೀವ್ರ ತರಹದ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 4,000 ರಿಂದ 6,000 ಮಂದಿ ಸರಿಯಾದ ಸಂದರ್ಭದಲ್ಲಿ ಲಿವರ್ ಕಸಿ ಹಾಗೂ ಚಿಕಿತ್ಸೆ ಪಡೆಯದೇ ಮೃತಪಡುತ್ತಿದ್ದಾರೆ.
ಮಾನವ ದೇಹದಲ್ಲಿ ಯಕೃತ್ ಅತಿದೊಡ್ಡ ಅಂಗ. ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆ, ರೋಗನಿರೋಧಕ ಶಕ್ತಿ ಹೆಚ್ಚುವ ನಿಟ್ಟಿನಲ್ಲಿ ಕೆಲಸ ಮಾಡುವ ಯಕೃತ್, ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಮತ್ತು ಇತರೆ ಪೌಷ್ಟಿಕಾಂಶಗಳನ್ನು ಸಂಗ್ರಹಿಸುತ್ತದೆ. ಅನಾರೋಗ್ಯ, ಶಸ್ತ್ರಚಿಕಿತ್ಸೆ ಮುಂತಾದ ಆಘಾತಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಯಕೃತ್‌ಗಿದೆ. ಶೇ.75ರಷ್ಟು ಯಕೃತ್ ಕೋಶ ಹಾನಿಯಾದರೆ ಕಷ್ಟವಾಗುತ್ತದೆ.
ಯಕೃತ್ತಿನ ಆರೋಗ್ಯ ಕೆಡಿಸುವಲ್ಲಿ ಮದ್ಯಪಾನಕ್ಕೆ ಮೊದಲ ಸ್ಥಾನ. ಉಳಿದಂತೆ, ವೈರಾಣು ಜ್ವರ, ಅತೀಯಾದ ಬೊಜ್ಜು, ವಿಷಕಾರಿ ಅಂಶ ಸೇವನೆ ಸೇರಿದಂತೆ ಇತರೆ ಯಕೃತ್ ಹಾನಿಗೆ ಕಾರಣವಾಗಲಿದೆ. ಯಕೃತ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯ ಚರ್ಮ ಹಾಗೂ ಉಗುರು ಹಳದಿ ಬಣ್ಣಕ್ಕೆ ಪರಿವರ್ತನೆ, ವಾಕರಿಕೆ, ಖನಿಜಾಂಶದ ಕೊರತೆ, ನಿಶ್ಶಕ್ತಿ, ಆಯಾಸ, ಅಜೀರ್ಣ ಪ್ರಕ್ರಿಯೆಗಳು ಯಕೃತ್ ವೈಫಲ್ಯದ ಲಕ್ಷಣಗಳಾಗಿವೆ ಎಂದು ವೈದ್ಯರು ಹೇಳುತ್ತಾರೆ.
ರಾಜ್ಯದಲ್ಲಿ 2007ರಿಂದ 2022ರ ಮಾರ್ಚ್ ವರೆಗೆ ಒಟ್ಟು 543 ಮಂದಿಗೆ ಲಿವರ್ ಕಸಿ ಮಾಡಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಪ್ರಸ್ತುತ ಅಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದು, ಜನರು ಮರಣಾನಂತರ ಅಂಗಗಳನ್ನು ದಾನ ಮಾಡಲು ಜನರು ಮುಂದಾಗುತ್ತಿದ್ದಾರೆ. ಇದರಿಂದಾಗಿ ಮುಂದೆ ಮೃತ ವ್ಯಕ್ತಿಯ ಯಕೃತ್ ಸೇರಿದಂತೆ ಇತರೆ ಉಪಯುಕ್ತದ ಅಂಗಗಳು ಅರ್ಹ ರೋಗಿಗಳ ಬಾಳಿಗೆ ಬೆಳಕಾಗಲಿದೆ.
ಅತಿಯಾದ ಮದ್ಯ ಸೇವನೆ, ಹೆಪಟೈಟಿಸ್-ಬಿ ಮತ್ತು ಸಿ ಯಕೃತ್‌ನ ಕಾಯಿಲೆಗೆ ಸಾಮಾನ್ಯ ಕಾರಣಗಳಾಗಿವೆ. ಜತೆಗೆ ಅಧಿಕ ತೂಕವಿರುವ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿರುವ 40ರಿಂದ 50ವರ್ಷದವಲ್ಲಿ ಹೆಚ್ಚಾಗಿ ಯಕೃತ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ.
ಡಾ. ಅತೀಫ್ ಅಹಮದ್
ಗ್ಯಾಸ್ಟ್ರೊ ಎಂಟರಾಲಜಿ ತಜ್ಞ, ಸ್ಪೆಶಲಿಸ್ಟ್ ಆಸ್ಪತ್ರೆ ಬೆಂಗಳೂರು.