ಕೋಟ: ಕುಂದಗನ್ನಡದ ಭಾಷೆ, ಸಂಸ್ಕೃತಿಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಇದನ್ನು ಮತ್ತಷ್ಟು ವ್ಯಾಪಕವಾಗಿ ಪಸರಿಸಬೇಕು ಹಾಗೂ ಕುಂದಗನ್ನಡಿಗರು ತಮ್ಮ ಭಾಷೆಯನ್ನು ಗೌರವಿಸುವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ವಿಶ್ವ ಕುಂದಾಪುರ ದಿನಾಚರಣೆಯನ್ನು ಆಚರಿಸಲು ಒಂದಷ್ಟು ಸಮಾನ ಮನಸ್ಕರು ಕರೆ ನೀಡಿದ್ದು ಇದೀಗ ಅಭಿಯಾನದಂತೆ ರೂಪುತಳೆದಿದೆ.
ವಿಶ್ವಾದ್ಯಂತ ಕುಂದಾಪುರ ಕನ್ನಡವನ್ನು ಮಾತನಾಡುವ ಜನರಿದ್ದಾರೆ. ಇವರೆಲ್ಲ ವರ್ಷದಲ್ಲಿ ಒಂದು ದಿನ ಕುಂದಗನ್ನಡದ ಭಾಷೆ, ಬದುಕು, ಸಂಸ್ಕೃತಿ, ವಿಶೇಷತೆಗಳನ್ನು ನೆನಪಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಿಗರು ಕುಂದಾಪ್ರ ಕನ್ನಡದ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಬೇಕು. ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕುಂದಗನ್ನಡ ಕುರಿತು ಮಾಹಿತಿ ನೀಡಬೇಕು. ಈ ಮೂಲಕ ಎಲ್ಲರೂ ನಮ್ಮ ಭಾಷೆ, ಬದುಕಿನ ಬಗ್ಗೆ ಪ್ರೀತಿ-ಅಭಿಮಾನ ಬೆಳೆಸಿಕೊಳ್ಳಬೇಕು ಎನ್ನುವುದು ಆಚರಣೆಯ ಹಿಂದಿನ ಉದ್ದೇಶವಾಗಿದೆ.
ವ್ಯಾಪಕ ಬೆಂಬಲ
ಒಂದಷ್ಟು ಸಮಾನ ಮನಸ್ಕ ಸ್ನೇಹಿತರು ಈ ಆಚರಣೆಯ ಕುರಿತು ವಾಟ್ಸ್ಯಾಪ್, ಫೇಸ್ಬುಕ್‌ಗಳಲ್ಲಿ ತಮ್ಮ ಆಶಯವನ್ನು ತಿಳಿಸಿದರು ಹಾಗೂ ಕುಂದಾಪ್ರ ಕನ್ನಡ ದಿನಾಚರಣೆ ಎನ್ನುವ ಗ್ರೂಪ್ ರಚಿಸಿಕೊಂಡು ಚರ್ಚೆ ನಡೆಸಿದರು. ಇದೀಗ ಫೇಸ್ಬುಕ್ ಹಾಗೂ ವಾಟ್ಸ್ಯಾಪ್‌ಗ್ಳಲ್ಲಿ ಇದೊಂದು ಅಭಿಯಾನವಾಗಿ ಮಾರ್ಪಟ್ಟಿದ್ದು ಆಚರಣೆಗೆ ಸಂಬಂಧಿಸಿದ ಪೋಸ್ಟ್‌ರ್,ಪ್ರೇಮ್‌ಗಳು ಹಾಗೂ ಬರಹಗಳು ವೈರಲ್ ಆಗುತ್ತಿದೆ.
Advertisement
ಆಚರಣೆಯ ಉದ್ದೇಶ
Related Articles
Advertisement
ಆಟಿ ಅಮಾವಾಸ್ಯೆಯಂದೇ ಯಾಕೆ?
ಕುಂದಗನ್ನಡ ಎನ್ನುವುದು ಬೈಂದೂರಿನಿಂದ- ಬ್ರಹ್ಮಾವರ ತನಕ ವ್ಯಾಪಿಸಿದೆ. ಇಲ್ಲಿನ ಬಹುತೇಕ ಪ್ರಾದೇಶಿಕ ಹಬ್ಬಹರಿದಿನಗಳು ಆಟಿ ಅಮಾವಾಸ್ಯೆ ಅನಂತರ ಆರಂಭಗೊಳ್ಳುತ್ತವೆೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಮುಗಿಸಿದವರು ಒಂದಷ್ಟು ಸಂಭ್ರಮಿಸುವ ಸಲುವಾಗಿ ಅಂದು ಆಷಾಢ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ಈ ಅಮಾವಾಸ್ಯೆ ಕುಂದಗನ್ನಡಿಗರ ಹಬ್ಬಗಳು ಪರ್ವ ಕಾಲ ಮತ್ತು ಬಿತ್ತಿದ ಬೆಳೆ ಸಮೃದ್ಧಿಯಾಗಲಿ ಎಂದು ಆಶಿಸುವ ಕಾಲ. ಹೀಗಾಗಿ ಅಂದೇ ಕುಂದಾಪ್ರ ಕನ್ನಡ ದಿನವೆಂದು ತೀರ್ಮಾನಿಸಲಾಗಿದೆ. ಎರಡೆರಡು ಅಮಾವಾಸ್ಯೆ ಬಂದಾಗ ಗೊಂದಲವಾಗಬಾರದೆಂದು ಮರವಂತೆ ಮಾರಸ್ವಾಮಿ ಹಬ್ಬದಂದು ಈ ಆಚರಣೆ ನಡೆಯಲಿದೆ. ಈ ಬಾರಿ ಆ.1ಕುಂದಾಪ್ರ ಕನ್ನಡ ದಿನ.
ಸಂಘ, ಸಂಸ್ಥೆ, ಶಾಲೆ-ಕಾಲೇಜುಗಳ ಸಹಕಾರಕ್ಕೆ ಕರೆ
ಆಟಿಡೊಂಜಿ ದಿನ, ಕೆಸರಲ್ಲೊಂದು ದಿನದ ರೀತಿ ಯಲ್ಲೇ ಕುಂದಗನ್ನಡ ಭಾಗದ ಸಂಘ-ಸಂಸ್ಥೆಗಳು ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಕುಂದಾಪ್ರ ದಿನವನ್ನು ಆಚರಿಸಿ ಕುಂದಗನ್ನಡಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಯುವುದು, ಶಾಲೆ-ಕಾಲೇಜುಗಳಲ್ಲೂ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕುಂದಗನ್ನಡದ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸುವಂತೆ ಕರೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರು, ಮುಂಬೈ ಸೇರಿದಂತೆ ವಿದೇಶಗಳಲ್ಲೂ ಆಚರಣೆಗೆ ಸಿದ್ಧತೆಗಳು ನಡೆದಿದೆ. ಕುಂದಾಪ್ರ ಕನ್ನಡದಕ್ಕೆ ಸಂಬಂಧಿಸಿದ ವಾಟ್ಸ್ಯಾಪ್ ಗ್ರೂಪ್‌ಗ್ಳು, ರೇಡಿಯೋಗಳಲ್ಲಿ ಅಂದು ವಿಶೇಷ ಕಾರ್ಯಕ್ರಮ ಆಯೋಜಿಸುವ ತಯಾರಿ ನಡೆದಿದೆ.
ಭಾಷೆ, ಸಂಸ್ಕೃತಿಯ ಪ್ರಚಾರದ ಉದ್ದೇಶ
ಸಮಾನ ಮನಸ್ಕ ಸ್ನೇಹಿತರು ಜತೆಯಾಗಿ ಕುಂದಾಪ್ರ ಕನ್ನಡ ದಿನಾಚರಣೆಗೆ ಕರೆ ನೀಡಿದೆವು. ಇದೀಗ ಈ ಕುರಿತು ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ದೇಶ-ವಿದೇಶಗಳಲ್ಲಿ ನೆಲೆಸಿರುವ ಕುಂದಗನ್ನಡಿಗರು ಅಭಿಯಾನದ ರೀತಿಯಲ್ಲಿ ಪ್ರಚಾರ ನೀಡಿದ್ದಾರೆ ಹಾಗೂ ಆಚರಣೆ ನಡೆಸುವ ಭರವಸೆ ನೀಡಿದ್ದಾರೆ. ಭಾಷೆ, ಸಂಸ್ಕೃತಿಯ ಪ್ರಚಾರ ಈ ಆಚರಣೆಯ ಉದ್ದೇಶವಾಗಿದೆ.
– ಉದಯ ಶೆಟ್ಟಿ ಪಡುಕರೆ,ಸಾಂಸ್ಕೃತಿಕ ಚಿಂತಕರು