Advertisement

ವಿಶ್ವ ಜೇನು ದಿನಾಚರಣೆ: ತಾರಸಿ ತೋಟದಲ್ಲಿ ದುಂಬಿಗಳ ಗುಂಗು

10:39 AM May 20, 2023 | Team Udayavani |

ಬೆಂಗಳೂರು: ನಗರದಲ್ಲಿ ತಾರಸಿ ತೋಟ “ಟ್ರೆಂಡ್‌’ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಪೂರಕವಾಗಿ ಈಗ ಜೇನುಕೃಷಿ ಅದರಲ್ಲೂ ಮುಜಂಟಿ ಜೇನು ಸಾಕಾಣಿಕೆ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಈ ಸಂಬಂಧ ತಿಂಗಳಿಗೆ ಕನಿಷ್ಠ 10 ಕರೆಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗಕ್ಕೆ ಬರುತ್ತಿವೆ.

Advertisement

ಅಪ್ಪಟ “ನಗರ ಸ್ನೇಹಿ’ಯಾದ ಮುಜಂಟಿ ಜೇನು, ಅತ್ಯಂತ ಕಡಿಮೆ ಹೂಗಳ ಮೇಲೆ ಅವಲಂಬಿತವಾಗಿದೆ. ತನ್ನ ಕುಟುಂಬದಲ್ಲಿ ಕೂಡ ಬೆಂಗಳೂರು ವಾಸಿಗಳಂತೆಯೇ ಅತ್ಯಂತ ಕಡಿಮೆ ಸದಸ್ಯರನ್ನು ಹೊಂದಿದ್ದು, ಶೂನ್ಯ ನಿರ್ವ ಹಣೆಯೊಂದಿಗೆ ತಾರಸಿ ಮೇಲಿರುವ ತರಕಾರಿಗಳಲ್ಲೇ ಪರಾಗ ಸ್ಪರ್ಶ ಮಾಡಿ, ಔಷಧೀಯ ಗುಣವುಳ್ಳ ಜೇನುತುಪ್ಪ ನೀಡುತ್ತದೆ. ತಾರಸಿ ತೋಟದಲ್ಲಿ ಪರಾಗಸ್ಪರ್ಶ ಮಾಡಿ ಅಲ್ಲಿನ ಇಳುವರಿ ಹೆಚ್ಚಿಸುವಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಇದಕ್ಕೆ ಬೇಡಿಕೆ ಕೇಳಿಬರುತ್ತಿದೆ.

ಸಾಂಪ್ರದಾಯಿಕವಾಗಿ ಗೋಡೆ ಅಥವಾ ಬಿದರಿನ ಬಂಬೂಗಳಲ್ಲಿ ಗೂಡುಕಟ್ಟುವ ಈ ಪ್ರಬೇಧಕ್ಕೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳು, ವಿವಿಧ ಪ್ರಕಾರದ ಸಾಕಾಣಿಕೆ ಪೆಟ್ಟಿಗೆಗಳನ್ನು ಅಭಿವೃದ್ಧಿಪಡಿಸಿ, ಸಾಕಾಣಿಕೆಗೆ ಕೆಲವು ಶಿಷ್ಟಾಚಾರ ಗಳನ್ನೂ ರೂಪಿಸಿದ್ದಾರೆ. ಇದರ ಫ‌ಲವಾಗಿ ನಗರದಲ್ಲಿ “ಟೆರೇಸ್‌ ಗಾರ್ಡನ್‌’ ಮಾಡುತ್ತಿರುವವರು ಅದಕ್ಕೆ ಪೂರಕವಾಗಿ ಮುಜಂಟಿ ಜೇನು ಸಾಕಾಣಿಕೆಗೆ ಆಸಕ್ತಿ ತೋರಿಸುತ್ತಿರುವುದು ಇತ್ತೀಚೆಗೆ ಕಂಡುಬರುತ್ತಿದೆ.

“ತಾರಸಿ ತೋಟದಲ್ಲಿ ಹೆಚ್ಚು ಇಳುವರಿ: “ಮುಜಂಟಿ ಅಥವಾ ನಸರು ಜೇನು ತುಂಬಾ ವಿಶಿಷ್ಟ ಪ್ರಬೇಧವಾಗಿದೆ. ಸಾಮಾನ್ಯವಾಗಿ ಒಂದು ಜೇನು ಕುಟುಂಬದಲ್ಲಿ 15ರಿಂದ 20 ಸಾವಿರ ಸದಸ್ಯರಿರುತ್ತಾರೆ. ಇದರಲ್ಲಿ ಕೇವಲ 1,500ರಿಂದ 2,000 ಸದಸ್ಯರು. ಉಳಿದವುಗಳಿಗೆ ಹೋಲಿಸಿದರೆ, ಗಾತ್ರದಲ್ಲೂ ತೀರಾ ಚಿಕ್ಕದು. ಸಾಮಾನ್ಯ ಜೇನುನೊಣದ ಗಾತ್ರ 11- 14 ಮಿಲಿಮೀಟರ್‌ ಇದ್ದರೆ, ಮುಜಂಟಿ ಗಾತ್ರ 5- 8 ಮಿಲಿಮೀಟರ್‌. ಇದರಿಂದ ತುಳಸಿ, ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊ ಸೇರಿದಂತೆ ಸಣ್ಣ ಹೂವುಗಳಿಂದಲೂ ಜೇನು ಹೀರುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ಹೂವುಗಳನ್ನು ಅವಲಂಬಿಸಿವೆ. ಕಚ್ಚುವುದಾಗಲಿ ಅಥವಾ ಬೆನ್ನಟ್ಟುವುದಾಗಲಿ ಮಾಡುವುದಿಲ್ಲ. ಈ ಎಲ್ಲ ಗುಣಗಳಿಂದ ನಗರ ಪ್ರದೇಶಗಳಿಗೆ ಹೇಳಿಮಾಡಿಸಿದ್ದಾಗಿದೆ. ಇದೇ ಕಾರಣಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನುಕೃಷಿ ವಿಭಾಗದ ವಿಜ್ಞಾನಿ ಡಾ.ಕೆ.ಟಿ. ವಿಜಯಕುಮಾರ್‌ ತಿಳಿಸುತ್ತಾರೆ.

“ನಗರದಲ್ಲಿ ಎಷ್ಟು ಜನ ಈ ಮುಜಂಟಿ ಜೇನು ಕೃಷಿ ಮಾಡುತ್ತಿದ್ದಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಆದರೆ, ಟೆರೇಸ್‌ ಗಾರ್ಡನ್‌ ನಂತೆ ಇದರಲ್ಲೂ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಮಾತ್ರ ಕಂಡುಬರುತ್ತಿದೆ. ಯಾಕೆಂದರೆ, ಜೇನು ಸಾಕಾಣಿಕೆಯಿಂದ ಇಳುವರಿ ಕೂಡ ಸಹಜವಾಗಿ ಹೆಚ್ಚಾಗುತ್ತದೆ. ತಿಂಗಳಿಗೆ ಕನಿಷ್ಠ ಹತ್ತು ಕರೆಗಳು ಈ ಜೇನುಕೃಷಿಗೆ ಸಂಬಂಧಿಸಿದಂತೆ ನಮ್ಮ ವಿಭಾಗಕ್ಕೆ ಬರುತ್ತವೆ. ಅದರಲ್ಲಿ ಬಹುತೇಕರು ತಾರಸಿ ತೋಟ ಹೊಂದಿದವರೇ ಆಗಿರುತ್ತಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

Advertisement

ಮುಜಂಟಿ ಜೇನು ಮತ್ತು ಸಾಕಾಣಿಕೆ ಪೆಟ್ಟಿಗೆ ಸೇರಿ 2ರಿಂದ 3 ಸಾವಿರ ರೂ. ಆಗುತ್ತದೆ. ಒಂದು ಕುಟುಂಬದಿಂದ 200ರಿಂದ 500 ಗ್ರಾಂ ಜೇನುತುಪ್ಪ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಕೆ.ಜಿ.ಗೆ 2,500ರಿಂದ 3,000 ರೂ. ಆಗಿದೆ. ಜನರಿಗೆ ಇದರ ಸಾಕಾಣಿಕೆ ಬಗ್ಗೆ ಆಸಕ್ತಿ ಬರಲು ಟೆರೇಸ್‌ ಗಾರ್ಡನಿಂಗ್‌ ಪದ್ಧತಿ ಹೆಚ್ಚಾಗುತ್ತಿರುವುದು, ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಜತೆಗೆ ಜೇನುನೊಣಗಳ ಗುಣಲಕ್ಷಣಗಳು ಕಾರಣವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.

“ಬೆಳೆಗಳಿಗೆ ಪರಾಗಸ್ಪರ್ಶ ಅಗತ್ಯ ಮತ್ತು ಅನಿವಾರ್ಯ ಎಂಬುದು ಮನಗಂಡವರು ನಮ್ಮ ಬಳಿ ಬಂದು ಮುಜಂಟಿ ಜೇನುನೊಣಗಳನ್ನು ತೆಗೆದುಕೊಂಡು ಹೋಗುತ್ತಾರೆ. ನೆಲಮಂಗಲ, ಹೆಸರಘಟ್ಟ ಸೇರಿದಂತೆ ವಿವಿಧೆಡೆಯಿಂದ ಜನ ಬರುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹತ್ತಾರು ಜನರಿಗೆ ಜೇನು ಕುಟುಂಬಗಳನ್ನು ಮಾರಾಟ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಜನರಲ್ಲಿ ಆಸಕ್ತಿ ಕಂಡುಬರುತ್ತಿದೆ’ ಎಂದು ಲಕ್ಷ್ಮೀಪುರ ಕ್ರಾಸ್‌ನ ಎ.ಕೆ. ಅಲೆಕ್ಸಾಂಡರ್‌ ಹೇಳಿದರು.

5 ಪ್ರಬೇಧಗಳು: ಜೇನುನೊಣಗಳಲ್ಲಿ ಐದು ಪ್ರಬೇಧಗಳಿದ್ದು, ತುಡವೆ, ಇಟಲಿಯಿಂದ ತಂದು ಸಾಕಾಣಿಕೆ ಮಾಡು ತ್ತಿರುವ ಮಿಲಿಫ‌ರಾ ಸಾಕಾಣಿಕೆ ಮಾಡಲಾಗುತ್ತದೆ. ಹೆಜ್ಜೇನು, ಕಡ್ಡಿಜೇನು ಸಾಕಾಣಿಕೆ ಸಾಧ್ಯವಿಲ್ಲ. ಮುಜಂಟಿ ನಗರ ಪ್ರದೇಶಕ್ಕೆ ಹೇಳಿಮಾಡಿಸಿದ್ದಾಗಿದೆ.

ಗುಣಲಕ್ಷಣಗಳು:

 ಕಡಿಮೆ ಹೂವುಗಳ ಅವಲಂಬನೆ

 ಔಷಧೀಯ ಗುಣವುಳ್ಳ ಜೇನುತುಪ್ಪ

 ಚಿಕ್ಕ ಮತ್ತು ಚೊಕ್ಕ ಕುಟುಂಬ

 ಗಾತ್ರ ಸಣ್ಣದಾಗಿರುವುದರಿಂದ ಸಣ್ಣ ಹೂವಿನಿಂದಲೂ ಜೇನು ಹೀರುವ ಸಾಮರ್ಥ್ಯ

 ಶೂನ್ಯ ನಿರ್ವಹಣೆ

-ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next