Advertisement

ವೈವಿಧ್ಯವನ್ನು ಉಳಿಸೋಣ ಪಾರಂಪರಿಕ ತಾಣಗಳ ರಕ್ಷಿಸೋಣ

12:25 AM Apr 18, 2022 | Team Udayavani |

ಪ್ರತೀವರ್ಷದಂತೆ ಈ ವರ್ಷವೂ ವಿಶ್ವ ಪಾರಂಪರಿಕ ದಿನವನ್ನು “ಪರಂಪರೆ ಮತ್ತು ಹವಾಮಾನ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಪರಂಪರೆಯಿಂದ ಬಂದಿರುವ ಈ ಸಂಪತ್ತನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಅವುಗಳನ್ನು ಜತನದಿಂದ ಕಾಪಾಡಿಕೊಳ್ಳೋಣ.

Advertisement

“ದೇಶ ಸುತ್ತಿ ನೋಡು ಕೋಶ ಓದಿ ನೋಡು’ ಎನ್ನುವಂತೆ ನಮ್ಮನ್ನು ನಾವು ಅರಿತುಕೊಳ್ಳಬೇಕಾದರೆ ನಾವು ಹುಟ್ಟಿ ಬೆಳೆದ ಊರು, ರಾಜ್ಯ, ದೇಶದ ಸಂಸ್ಕೃತಿ, ಪರಂಪರೆಯನ್ನು ಮೊದಲು ತಿಳಿದುಕೊಳ್ಳಬೇಕು. ಪ್ರತಿಯೊಂದು ಪ್ರದೇಶವನ್ನು ಗುರುತಿಸಲು ಅಲ್ಲಿನ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ, ವೈವಿಧ್ಯತೆ ಇವುಗಳನ್ನೆಲ್ಲವನ್ನು ತಕ್ಕಡಿಯಲ್ಲಿ ಹಾಕಿ ತೂಗಿ ಅಳೆಯುತ್ತೇವೆ. ಇಂತಹ ಪರಂಪರಾಗತವಾಗಿ ಬಂದ ಸಂಪತ್ತನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಕೂಡ ನಮ್ಮದೇ ಜವಾಬ್ದಾರಿ. ಹೀಗಾಗಿ ಹುಟ್ಟಿ ಬೆಳೆದ ಭೂಮಿಯ ಶ್ರೀಮಂತಿಕೆಯನ್ನು ಜತನವಾಗಿ ಕಾಪಾಡಿಕೊಳ್ಳಬೇಕಾಗಿದೆ.

ಈ ಉದ್ದೇಶದಿಂದಾಗಿ ವಿಶ್ವಸಂಸ್ಥೆಯು ವಿಶ್ವದ ಪ್ರತಿಯೊಂದು ದೇಶಗಳ ಪಾರಂಪರಿಕ ಸ್ಥಳಗಳನ್ನು ರಕ್ಷಿಸುವ ಪ್ರಯತ್ನವನ್ನು 1982ರಿಂದ ನಡೆಸುತ್ತಲೇ ಬಂದಿದೆ. ಈ ಮೂಲಕ ಅಳಿವಿನಂಚಿನಲ್ಲಿರುವ ತಾಣಗಳನ್ನು ಗುರುತಿಸಿ, ಆ ಸ್ಥಳಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೇ ಕಾರಣದಿಂದ ಇದರ ಉದ್ದೇಶ ಸಾರ್ಥಕಗೊಳಿಸಲು, ಜನಜಾಗೃತಿ ಮೂಡಿಸಲು ಪ್ರತೀ ವರ್ಷ ಎಪ್ರಿಲ್‌ 18ರಂದು “ವಿಶ್ವ ಪಾರಂಪರಿಕ ತಾಣ ದಿನ’ ವನ್ನು ಆಚರಿಸಲಾಗುತ್ತಿದೆ.

ಪರಂಪರೆ ಮತ್ತು ಹವಾಮಾನ’
ಈ ಬಾರಿ ವಿಶ್ವಸಂಸ್ಥೆ “ಪರಂಪರೆ ಮತ್ತು ಹವಾಮಾನ’ ಎಂದ ಧ್ಯೇಯವಾಕ್ಯದೊಂದಿಗೆ ವಿಶ್ವ ಪಾರಂಪರಿಕ ತಾಣ ದಿನವನ್ನು ಆಚರಿಸುತ್ತಿದೆ. ಪರಂಪರೆಯ ವೈವಿಧ್ಯತೆಯನ್ನು ಉಳಿಸುವ ದೃಷ್ಟಿಯಲ್ಲಿ ಹವಾಮಾನ ವೈಪರೀತ್ಯದಿಂದ ಪಾರಂಪರಿಕ ತಾಣಗಳಿಗೆ ಆಗಬಹುದಾದ ಹಾನಿಯ ಬಗ್ಗೆ ಚರ್ಚಿಸಿ, ಅದರ ಸಂರಕ್ಷಣೆಗೆ ಯೋಜನೆ ಹಾಗೂ ಪರಿಹಾರಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯು ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿ, ಅದರ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ. ತಾಣಗಳ ಗುರುತಿಸುವಿಕೆಯಲ್ಲಿ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಎಂದು ಎರಡು ವಿಭಾಗಗಳಲ್ಲಿ ಪ್ರತ್ಯೇಕ ಮಾನದಂಡಗಳನ್ನು ಇರಿಸಿಕೊಳ್ಳಲಾಗುತ್ತದೆ.

Advertisement

ಭಾರತದ ವಿಶ್ವ ಪಾರಂಪರಿಕ ತಾಣಗಳು
ಭಾರತದ 40 ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣವೆಂದು ಗುರುತಿಸಲಾಗಿದ್ದು, ಈ ಪೈಕಿ 32 ಸಾಂಸ್ಕೃತಿಕ , 7 ನೈಸರ್ಗಿಕ ಹಾಗೂ 1 ಸಾಂಸ್ಕೃತಿಕ ಹಾಗೂ ನೈಸರ್ಗಿಕ ತಾಣಗಳಾಗಿವೆ. ಕಳೆದ ವರ್ಷ ತೆಲಂಗಾಣದ ವಾರಂಗಲ್‌ನ “ಕಾಕತೀಯ ರುದ್ರೇಶ್ವರ (ರಾಮಪ್ಪ) ದೇಗುಲ’ ಹಾಗೂ ಗುಜರಾತ್‌ನಲ್ಲಿರುವ ಹರಪ್ಪ ನಾಗರಿಕತೆಯ ಕಾಲದ ದೋಲವೀರವನ್ನು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲಾಗಿತ್ತು.

ಆಗ್ರಾದ ಕೋಟೆ, ಮಹಾರಾಷ್ಟ್ರದ ಅಜಂತಾ, ಎಲ್ಲೋರಾ ಗುಹೆಗಳು, ಅಮೃತ ಶಿಲೆಯಿಂದ ನಿರ್ಮಿಸಲ್ಪಟ್ಟ ತಾಜ್‌ಮಹಲ್‌ 1983ರಲ್ಲಿ ವಿಶ್ವಸಂಸ್ಥೆಯಿಂದ ಘೋಷಣೆಯಾದ ಭಾರತದ ಮೊದಲ ವಿಶ್ವ ಪಾರಂಪರಿಕ ತಾಣಗಳು. ನೈಸರ್ಗಿಕ ತಾಣಗಳಲ್ಲಿ ಪಟ್ಟಿಯಲ್ಲಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು ಸೇರಿವೆ.

ಭಾರತಕ್ಕೆ 6ನೇ ಸ್ಥಾನ
ಜಾಗತಿಕ ಮಟ್ಟದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತ 40 ತಾಣಗಳೊಂದಿಗೆ 6ನೇ ಸ್ಥಾನದಲ್ಲಿದೆ. ಇಟಲಿ ದೇಶ 58 ಪಾರಂಪರಿಕ ತಾಣಗಳೊಂದಿಗೆ ಮೊದಲ ಸ್ಥಾನ ಹಾಗೂ ಚೀನದಲ್ಲಿ ಮತ್ತು ಜರ್ಮನಿಯಲ್ಲಿ 51 ತಾಣಗಳನ್ನು ಹೊಂದಿದ್ದು, ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಅಲಂಕರಿಸಿವೆ.

ಹಂಪಿ, ಪಟ್ಟದಕಲ್ಲಿಗೆ ವಿಶ್ವ ಪಾರಂಪರಿಕ ತಾಣದ ಗರಿ
-ತನ್ನ ವಿಶಿಷ್ಟ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಪ್ರಾಮುಖ್ಯತೆಯಿಂದ ಹೆಸರುವಾಸಿಯಾಗಿರುವ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ಹಂಪಿ ಹಾಗೂ ಅಲ್ಲಿನ ದೇವಾಲಯಗಳನ್ನು ವಿಶ್ವಸಂಸ್ಥೆ 1986ರಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ಹಂಪಿ (14 ರಿಂದ 16 ನೇ ಶತಮಾನ) ಶ್ರೀಮಂತ ವಿಜಯನಗರ ಸಾಮ್ರಾಜ್ಯದ ರಾಜಧಾನಿ. ವಿರೂಪಾಕ್ಷ ದೇವಾಲಯ ಹಾಗೂ ಕಲ್ಲಿನ ರಥ, ದ್ರಾವಿಡ, ಇಂಡೋ-ಇಸ್ಲಾಮಿಕ್‌ ಶೈಲಿಯಿಂದ ನಿರ್ಮಿಸಲ್ಪಟ್ಟ ವಾಸ್ತುಶಿಲ್ಪದಿಂದ ಸಹಸ್ರ ಸಹಸ್ರ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. 1999ರಿಂದ 2006ರ ನಡುವೆ ವಿಶ್ವಸಂಸ್ಥೆ ಇದನ್ನು ಅಳಿವಿನಂಚಿನಲ್ಲಿರುವ ಪ್ರದೇಶ ಎಂದು ಕೂಡ ಹೇಳಿದೆ.
– ದಕ್ಷಿಣ ಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿಗಳ ವಾಸ್ತುಶಿಲ್ಪಗಳಿಂದ ಕೂಡಿರುವ ಎಂಟನೇ ಶತಮಾನದಲ್ಲಿ ಚಾಲುಕ್ಯ ವಂಶದ ರಾಜಧಾನಿಯಾಗಿದ್ದ ಪಟ್ಟದಕಲ್ಲು ಇಲ್ಲಿನ ಒಂಬತ್ತು ದೇವಾಲಯಗಳು ಹಾಗೂ ಒಂದು ಜೈನ ಬಸದಿಯನ್ನು 1987ರಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಶ್ವಸಂಸ್ಥೆ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ.

ಹೊಯ್ಸಳ ದೇಗುಲಗಳಿಗೆ ಶಿಫಾರಸು
10- 14ನೇ ಶತಮಾನದ, ಕರ್ನಾಟಕದಲ್ಲಿ ತನ್ನ ಆಡಳಿತ, ವಿಶಿಷ್ಟ ಶಿಲ್ಪಕಲೆಯಿಂದ ಹೆಸುರುವಾಸಿಯಾಗಿರುವ ಹೊಯ್ಸಳ ಕಾಲದ ದೇಗುಲಗಳಾದ ಬೇಲೂರು, ಹಳೆಬೀಡು ಹಾಗೂ ಸೋಮನಾಥಪುರ ದೇಗುಲಗಳು 2022- 23ನೇ ಸಾಲಿನ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯ ಸೇರ್ಪಡೆಗೆ ಭಾರತದ ಅಧಿಕೃತ ಶಿಫಾರಸ್ಸಾಗಿದೆ.

– ವಿಧಾತ್ರಿ ಭಟ್‌ ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next