Advertisement

ಅಪ್ಪನೊಂದಿಗೂ ಭಾವನಾತ್ಮಕವಾಗಿ ಬೆರೆಯೋಣ : ಇಂದು ಅಪ್ಪಂದಿರ ದಿನಾಚರಣೆ

11:24 PM Jun 18, 2022 | Team Udayavani |

ತೀಕ್ಷ್ಣನೋಟ, ಬಾಣದಂತಹ ಬಿರುಸಿನ ಮಾತು, ಗಾಂಭೀರ್ಯದ ನಡೆಯನ್ನುಳ್ಳ ವ್ಯಕ್ತಿಯನ್ನು ಕಂಡಾಗ ತತ್‌ಕ್ಷಣ ಗೊತ್ತಾಗುತ್ತದೆ ಈತ ಮನೆಯ ಹಿರಿಯ ಎಂದು. ಮನೆಯ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು, ಮನೆಯ ಒಳಗೂ, ಹೊರಗೂ ಮನೆಯವರ ಸುರಕ್ಷತೆಗಾಗಿ ಈತ ಸದಾ ಸಿದ್ಧ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವ ಹಾಗೇ ಮನೆ, ಸಂಸಾರ ಸಾಗಬೇಕೆಂದಾಗ ತಾಯಿ ಎಷ್ಟು ಮುಖ್ಯವಾಗುತ್ತಾಳ್ಳೋ ತಂದೆಯೂ ಅಷ್ಟೇ ಮುಖ್ಯ. ಮನೆಯ ಒಳಿತಿಗಾಗಿ ಸದಾ ಶ್ರಮಿ ಸುವವರು ಇವರು. ತಾಯಿ ಅಂತ ಬಂದಾಗ ಆಕೆಯೊಂದಿಗೆ ಭಾವನಾತ್ಮಕ ವಾಗಿ ಬೆರೆಯುತ್ತೇವೆ. ತಾಯಿಯ ಪ್ರತಿಯೊಂದು ಮಾತಿಗೂ ನಮಗೆ “ಒಲ್ಲೆ’ ಎನ್ನಲಾಗದು. ಪ್ರತಿಯೊಂದು ಸುಖ, ದುಃಖ, ಖುಷಿ ಎಲ್ಲವನ್ನೂ ತಾಯಿ ಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳು ತ್ತೇವೆ. ಆದರೆ ಬೆಳೆಯುತ್ತಿರುವ ವಯಸ್ಸಿ ನಲ್ಲಿ ತಾಯಿಯೊಂದಿಗೆ ಇರುವಷ್ಟು ಒಡನಾಟ ಅಪ್ಪನ ಬಳಿ ಕಡಿಮೆಯೇ. ತಂದೆಯೆಂದರೆ ಅದೇನೋ ಅವ್ಯಕ್ತ ಭಯ ಚಿಕ್ಕಂದಿನಿಂದಲೂ ನಮ್ಮಲ್ಲಿ ಬೆಳೆದು ಬಂದಿರುತ್ತದೆ.

Advertisement

ತಂದೆಯೊಡನೆ ಮಾತಿಗಿಳಿಯುವಾಗ ಮನಸ್ಸಿನ ಮೂಲೆಯಲ್ಲಿ ಭಯವನ್ನಿರಿಸಿಕೊಂಡೇ ಮಾತನಾಡುತ್ತೇವೆ. ಅಪ್ಪ ಏನಾಂದಾರೋ? ಬೈದರೇ? ಈ ಎಲ್ಲ ಪ್ರಶ್ನೆಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ ಹಿಟ್ಲರ್‌ನಂತೆ ಕಾಣಿಸುತ್ತಾರೆ. ರಕ್ತ ಕುದಿಯುವ ಆ ವಯಸ್ಸಿನಲ್ಲಿ ತಂದೆಯನ್ನು ಎದುರು ಹಾಕಿಕೊಳ್ಳುವ ಭಂಡ ಧೈರ್ಯ ತೋರಿಸುತ್ತೇವೆ. ವಯಸ್ಸು ಚಿಗುರೊಡೆಯುವ ಆ ಸಮಯಲ್ಲಿ ತಂದೆಗೆ ಎದುರು ಮಾತಾಡಿ ನಮ್ಮ ವಾದವನ್ನು ಗೆದ್ದರೆ ಯುದ್ಧ ಗೆದ್ದ ಹಾಗೆ. ಆದರೆ ಪ್ರತಿಯೊಬ್ಬ ಮಗನು ತಂದೆಯಂತಾಗಲು ಪ್ರಯತ್ನಿಸುತ್ತಾನೆ. ಮಗನಿಗೆ ತಂದೆ ಆದರ್ಶ. ಅದೇ ಮಗಳು ತಾನು ವರಿಸುವ ವರನಲ್ಲಿ ತನ್ನ ತಂದೆಯನ್ನು ಕಾಣುತ್ತಾಳೆ. ಪ್ರತಿಯೊಬ್ಬರ ಜೀವನದ ರೂಪುವಿಕೆಯಲ್ಲಿ ತಂದೆಯೂ ಮಹತ್ವದ ಪಾತ್ರ ವಹಿಸಿರುತ್ತಾರೆ. ಕುಟುಂಬಕ್ಕಾಗಿ ಸದಾ ದುಡಿಯುವ ಅಪ್ಪಂದಿರನ್ನು ಸಂಭ್ರಮಿಸುವುದಕ್ಕಾಗಿ ಪ್ರತೀ ವರ್ಷ ಜೂನ್‌ ಮೂರನೇ ರವಿವಾರವನ್ನು ಅಪ್ಪಂದಿರ ದಿನವನ್ನಾಗಿ ಆಚರಿಸುತ್ತೇವೆ.

ಅಪ್ಪಂದಿರ ದಿನವನ್ನು ಆಚರಿಸಬೇಕೆಂಬ ಪರಿಕಲ್ಪನೆ ಮೊದಲು ಪ್ರಾರಂಭವಾಗಿ, ಆಚರಿಸಲ್ಪಟ್ಟದ್ದು ಅಮೆರಿಕದ ವಾಷಿಂಗ್ಟನ್‌ನಲ್ಲಿ. 1909ರಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ತಾಯಿಯನ್ನು ಅಭಿನಂದಿಸುವ ಸ್ಫೂರ್ತಿ ದಾಯಕ ಧರ್ಮೋಪದೇಶ ವಾಷಿಂಗ್ಟನ್‌ನ “ಎಪಿಸ್ಕೊಪಲ್‌ ಚರ್ಚ್‌’ನಲ್ಲಿ ನಡೆಯುತ್ತಿದ್ದ ವೇಳೆ ಭಾಷಣವನ್ನು ಕೇಳುತ್ತಿದ್ದ ಸೊನೋರಾ ಸ್ಮಾರ್ಟ್‌ ಡಾಡ್‌ ಎಂಬಾಕೆಗೆ ತನ್ನ ತಂದೆಯ ನೆನಪಾಗಿ, ತಂದೆಗೇಕೆ ಕೃತಜ್ಞತೆಯ ದಿನವಿಲ್ಲ ಎಂದು ಕೊಂಡು ಮರುಗುತ್ತಾಳೆ. 1910ರ ಜೂನ್‌ನ ಮೂರನೇ ರವಿವಾರದಂದು ತನ್ನ ತಂದೆಗೆ ಗೌರವ ಅರ್ಪಿಸುವ ಮೂಲಕ ಅಪ್ಪಂದಿರ ದಿನವನ್ನು ಆಚರಿಸುತ್ತಾಳೆ. ಇಡೀ ವಿಶ್ವದಲ್ಲಿ ತಂದೆಯಂದಿರ ದಿನ ಆಚರಿಸಿದ ಮೊದಲಿಗಳಾಗಿ ಆಕೆ ಗುರುತಿಸಿಕೊಳ್ಳುತ್ತಾಳೆ. ಹೀಗೆ ಆಚರಿಸಲ್ಪಟ್ಟ ಅಪ್ಪಂದಿರ ದಿನವನ್ನು ಇಂದಿಗೂ ಸುಮಾರು 52 ದೇಶಗಳು ಜೂನ್‌ ತಿಂಗಳ ಮೂರನೇ ರವಿವಾರದಂದು ಆಚರಿಸಿದರೆ, ಉಳಿದ ದೇಶಗಳು ವರ್ಷದ ಬೇರೆ ಬೇರೆ ದಿನಗಳಂದು ಆಚರಿಸುತ್ತಿವೆ.

ಪ್ರತೀ ಹಂತದಲ್ಲೂ ನಾವು ತಾಯಿಯನ್ನು ನೆನೆದಷ್ಟು, ತಂದೆಯ ಉಪಸ್ಥಿತಿಯನ್ನು ನೆನೆಯುವುದಿಲ್ಲ. ಅಪ್ಪ ತನ್ನ ಭಾವನೆಗಳನ್ನು ಹೊರಹಾಕುವುದು ಬಹಳ ವಿರಳ. ಹಾಗೆಂದು ಅವರಿಗೆ ಭಾವನೆಗಳೇ ಇಲ್ಲವೆಂದಲ್ಲ. ತಂದೆಯ ಸಿಟ್ಟಿನ ಹಿಂದಿರುವುದು ಪ್ರೀತಿಯೇ. ಇದು ನಮಗೆ ಆ ಕ್ಷಣದಲ್ಲಿ ಅರ್ಥವಾಗುವುದಿಲ್ಲ. ತಂದೆಯಾದವನು ಸದಾ ಬಯಸುವುದು ತನ್ನ ಮಕ್ಕಳ ಏಳಿಗೆಯನ್ನೇ. ತನಗಿಂತ ತನ್ನ ಮಕ್ಕಳು ಸುಖವಾಗಿ ಇರಬೇಕೆಂದು ಬಯಸುವವನು ಆತ. ತಂದೆಗೆ ತಂದೆಯೇ ಸಾಟಿ, ಅವನೆದುರು ಇನ್ಯಾರು ನಿಲ್ಲರಾರರು. ಅಪ್ಪನಿಗಾಗಿ ಇರುವ ಈ ದಿನವನ್ನು ಕೃತಜ್ಞತೆಯ ಭಾವದೊಂದಿಗೆ ಆಚರಿಸಬೇಕಿದೆ. ಭಾವನಾತ್ಮಕ ವಾಗಿ ತಂದೆಯೊಂದಿಗೆ ಬೆರೆತು, ಅವರೊಂದಿಗೆ ಕೂತು ಅವರ ಭಾವನೆಗಳಿಗೆ ಕಿವಿಯಾಗಿ, ಅವರ ಜತೆಗಿನ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸೋಣ.

-  ವಿಧಾತ್ರಿ ಭಟ್‌, ಉಪ್ಪುಂದ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next