Advertisement

ನಗರದ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ

01:03 PM Jun 06, 2017 | Team Udayavani |

ಮೈಸೂರು: ಸಾರ್ವಜನಿಕರು, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಸಸಿ ನೆಡುವುದು, ವೃಕ್ಷಾಣುಗಳನ್ನು ಬಿತ್ತುವುದು ಸೇರಿದಂತೆ ಜಾಗೃತಿ ಜಾಥಾ ಇನ್ನಿತರ ಕಾರ್ಯಕ್ರಮಗಳ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

Advertisement

ಪಾಲಿಕೆಯಿಂದ ಪರಿಸರ ಜಾಗೃತಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಪಾಲಿಕೆ ವತಿಯಿಂದ ಸ್ವತ್ಛ ಭಾರತ ಅಭಿಯಾನದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ್ಯಾಜ್ಯ ವಿಂಗಡಣೆ ಕುರಿತ ಜಾಗೃತಿ ಜಾಥಾ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಮೈಸೂರು ಸ್ವತ್ಛ ಭಾರತ ಅಭಿಯಾನದ ನೂತನ ರಾಯಭಾರಿ ಹಾಗೂ ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಚಾಲನೆ ನೀಡಿ ಮಾತನಾಡಿದರು. 

ಮನೆಯ ಕಸವನ್ನು ಮೂಲದಲ್ಲೇ ಬೇರ್ಪಡಿಸಬೇಕು. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ನಗರವನ್ನು ಸ್ವತ್ಛವಾಗಿಟ್ಟುಕೊಂಡು ಸೌಂದರ್ಯ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ ಪ್ರತಿಯೊಬ್ಬರು ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.  ಜಿಲ್ಲಾಧಿಕಾರಿ ಡಿ.ರಂದೀಪ್‌, ಮೇಯರ್‌ ಎಂ.ಜೆ.ರವಿಕುಮಾರ್‌, ಪಾಲಿಕೆ ಆಯುಕ್ತ ಎಂ.ಜಗದೀಶ್‌ ಇನ್ನಿತರರು ಪಾಲ್ಗೊಂಡಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರ: ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಮುಡಾ ಕಚೇರಿ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಮುಡಾ ಆಯುಕ್ತ ಡಾ.ಎಂ.ಮಹೇಶ್‌, ಅಧೀಕ್ಷಕ ಎಂಜಿನಿಯರ್‌ ಶಿವಕುಮಾರ್‌, ನಗರ ಯೋಜನಾ ಸದಸ್ಯ ಗಿರೀಶ್‌, ಕಾರ್ಯದರ್ಶಿ ಎಂ.ಕೆ.ಸವಿತಾ, ವಿಶೇಷ ಭೂಸ್ವಾಧೀನಾಧಿಕಾರಿ ಚಂದ್ರಮ್ಮ, ಮುಖ್ಯ ಲೆಕ್ಕಾಧಿಕಾರಿ ಮುತ್ತ, ಪ್ರಾಧಿಕಾರದ ಸದಸ್ಯ ಸಂದೇಶ್‌ ಸ್ವಾಮಿ ಇನ್ನಿತರರು ಹಾಜರಿದ್ದರು.

ಜನಚೇತನ ಟ್ರಸ್ಟ್‌: ನಗರದ ಜನಚೇತನ ಟ್ರಸ್ಟ್‌ನಿಂದ ಚಾಮುಂಡಿಬೆಟ್ಟದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಟಿ ವೃಕ್ಷಾರೋಪಣ ಆಂದೋಲನ ಹಾಗೂ ಚಾಮುಂಡಿಬೆಟ್ಟವನ್ನು ಬೀಜದ ಉಂಡೆಗಳಿಂದ ಹಸಿರುಗೊಳಿಸುವ ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಸಿನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರದ ಸಂರಕ್ಷಣೆಗೆ ಸಂಬಂಧಿಸಿದಂತೆ ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡರೆ ಯಾವುದೇ ಪ್ರಯೋಜನವಿಲ್ಲ.

Advertisement

ಇದರ ನಿರ್ವಹಣೆ ಕಷ್ಟಕರವಾಗಿದ್ದು, ಇದರ ಬದಲಿಗೆ ಸಣ್ಣ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದಾಗಿದೆ ಎಂದು ಹೇಳಿದರು. ಆರ್‌ಎಸ್‌ಎಸ್‌ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಮ.ವೆಂಕಟರಾಮ್‌, ವಿಭಾಗ ಸಂಘ ಸಂಚಾಲಕ ಡಾ.ವಾಮನರಾವ್‌ ಬಾಪಟ್‌, ಸ್ವದೇಶಿ ಜಾಗರಣ ಮಂಚ್‌ ರಾಜ್ಯ ಸಹ ಸಂಯೋಜಕ ಮಂಜುನಾಥ್‌, ಜನಚೇತನ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಬಿ.ಗೌಡ ಇನ್ನಿತರರು ಹಾಜರಿದ್ದರು.

ಸಸಿ ನೆಡುವ ಕಾರ್ಯಕ್ರಮ: ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಚಾಮುಂಡಿಬೆಟ್ಟದ ದೇವಿವನದಲ್ಲಿ ನೀರಿಗಾಗಿ ಅರಣ್ಯ ಎಂಬ ಘೋಷಣೆಯೊಂದಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

20 ಸಾವಿರ ಸಸಿಗಳನ್ನು ನೆಡುವ ಉದ್ದೇಶದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳು ಸಾಂಕೇತಿಕವಾಗಿ 20 ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ನೀರಿಗಾಗಿ ಅರಣ್ಯ ಘೋಷಣೆಯ ಭಿತ್ತಿಚಿತ್ರಗಳನ್ನು ಸಂಸದ ಪ್ರತಾಪ ಸಿಂಹ ಬಿಡುಗಡೆ ಮಾಡಿದರು.

ಕೋಟಿ ವೃಕ್ಷಾರೋಪಣ ಆಂದೋಲನ ಹಾಗೂ ಬೀಜದ ಉಂಡೆಗಳನ್ನು ಖಾಲಿ ಜಾಗದಲ್ಲಿ ನೆಡಲಾಯಿತು. ಜಿಲ್ಲಾಧಿಕಾರಿ ಡಿ.ರಂದೀಪ್‌, ಪಾಲಿಕೆ ಆಯುಕ್ತ ಜಗದೀಶ್‌, ಡಿಸಿಎಪ್‌ ಡಾ.ವಿ.ಕರಿಕಾಳನ್‌ ಇನ್ನಿತರರು ಹಾಜರಿದ್ದರು. ಉಳಿದಂತೆ ಜೆಎಸ್‌ಎಸ್‌ ವಿವಿ ಪರಿಸರ ಅಧ್ಯಯನ ಶಾಖೆ, ಜೆಎಸ್‌ಎಸ್‌ ಪ್ರೌಢಶಾಲೆ, ನಟರಾಜ ಮಹಿಳಾ ಕಾಲೇಜು, ಆರ್‌ಎಲ್‌ಎಚ್‌ಪಿ ಸಂಸ್ಥೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next