ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಗರದೆಲ್ಲೆಡೆ ಗಿಡ ನೆಡುವುದು, ಸ್ವಚ್ಛಗೊಳಿಸುವ ಹಾಗೂ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳು ಜರುಗಿವೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಅಫ್ರಾನ್ಸ್ ಇನ್ಫ್ರಾಸ್ಟ್ರಕ್ಚರ್, ರಾಷ್ಟ್ರೀಯ ಮಿಲಿಟರಿ ಶಾಲೆ, ಸೇನಾ ಪೊಲೀಸ್ ಕೇಂದ್ರ ಮತ್ತು ಶಾಲೆ ಹಾಗೂ ರಾಷ್ಟ್ರೀಯ ಕೆಡೆಟ್ ಕಾರ್ಪಸ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದಂದು 60 ಸೆಕೆಂಡ್ಗಳಲ್ಲಿ ಒಂದು ಸಾವಿರ ಸಸಿಗಳನ್ನು ನೆಡುವ ಅಭಿಯಾನವನ್ನು ಕೈಗೊಂಡಿತ್ತು.
ಈ ಅಭಿಯಾನವನ್ನು “ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣ’ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು, ನಗರದ ವೆಲ್ಲರಾದ ರಾಷ್ಟ್ರೀಯ ಮಿಲಿಟರಿ ಶಾಲೆ ಹಾಗೂ ಕಾರ್ಪಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದರು.
ಈ ವೇಳೆ, ಯೋಜನೆಗಳ ನಿರ್ದೇಶಕ ಡಿ. ರಾಧಾಕೃಷ್ಣ ರೆಡ್ಡಿ, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಹೆಗರಡ್ಡಿ, ಆರ್ಎಂಎಸ್ನ ಆಡಳಿತಾಧಿಕಾರಿ ಮೇಜರ್ ವಿಕಾಸ್ ಸರೋಹ ಸೇರಿದಂತೆ ಕರ್ನಾಟಕ ಬೆಟಾಲಿಯನ್ನ ಎಲ್ಲಾ ಅಧಿಕಾರಿಗಳು, ಎನ್ಸಿಸಿ ಕೆಡೆಟ್ಗಳು ಹಾಜರಿದ್ದರು.
Related Articles
ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ ಎಸ್ ವತಿಯಿಂದ ಸೋಮವಾರ ಜ್ಞಾನಜ್ಯೋತಿ ಆವರಣದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆಯನ್ನು ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಶ್ರೀನಿವಾಸ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಪರಿಸರದ ಪ್ರಾಮುಖ್ಯತೆ, ಅದನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಎಚ್.ಆರ್. ರವೀಶ್, ಪ್ರೊ. ಎಲ್.ರಾಜಣ್ಣ, ಪ್ರೊ. ಜಿ.ಟಿ. ದೇವರಾಜ್ ಭಾಗವಹಿಸಿದ್ದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಬೆಂಗಳೂರು ನಗರ ವಿಶ್ವ ವಿದ್ಯಾಲನಿಲಯವು ಪರಿಸರ ವಿಜ್ಞಾನ ವಿಭಾಗ ಹಾಗೂ ಬ್ಯಾಂಕ್ ಆಫ್ ಬರೋಡ ಸಹಯೋಗದಲ್ಲಿ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಪ್ರಭಾರ ಕುಲಪತಿ ಪ್ರೊ.ಎನ್. ಹರಿಪ್ರಸಾದ್ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅರಣ್ಯ ನಾಶದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಭವಿಷ್ಯದ ಹಿತದೃಷ್ಟಿಯಿಂದ ಯುವ ಪೀಳಿಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕುಲಸಚಿವ ಸಿ.ಎನ್.ಶ್ರೀಧರ್, ಕುಲಸಚಿವ (ಮೌಲ್ಯ ಮಾಪನ) ಪ್ರೊ. ಲೋಕೇಶ, ವಿತ್ತಾಧಿಕಾರಿ ಎಸ್.ರಘು, ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿಗಳಾದ ಸಿ.ಎಸ್. ಶ್ರೀನಿವಾಸಲು, ಆಶಿಶ್ ಕುಮಾರ್ ಹಾಗೂ ಬಿಸಿಯು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.