ಬೆಂಗಳೂರು: ದೇಶದಲ್ಲಿ 0-18ವರ್ಷ ದೊಳಗಿನ ಮಕ್ಕಳಲ್ಲಿ ಕಂಡು ಬರುವ ಟೈಪ್ -1 ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದುಕೊಂಡಿದೆ. ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್‌ನಿಂದ ಬಾಧಿತರಾಗಿರುವುದು ಆತಂಕ ಮೂಡಿಸಿದೆ.
ಟೈಪ್ 1 ಮಧು ಮೇಹದಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ತಮಿಳುನಾಡು ಪ್ರಥಮ, ಕರ್ನಾಟಕ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ರಾಜ್ಯ ಆರೋಗ್ಯ ಇಲಾಖೆ 2022ರ ವರದಿ ಅನ್ವಯ ಟೈಪ್ -1 ಡಯಾಬಿಟಿಸ್‌ನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 1,884 ಇದೆ. ಇದರ ಹೊರತಾಗಿಯೂ ಕೇವಲ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ಎಂಡೋಕ್ರೈನಾಲಜಿ ಸಂಶೋಧನಾ ಕೇಂದ್ರದಲ್ಲಿ ಪ್ರಸ್ತುತ 1750 ಮಕ್ಕಳು ಟೈಪ್-1 ಡಯಾಬಿಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಸರಿಸುಮಾರು 63,66 ಮಕ್ಕಳು ಸೇರಿ 10,000 ಮಕ್ಕಳು ಈ ಖಾಯಿಲೆಯಿಂದ ಬಳಲುತ್ತಿದ್ದಾರೆ.
78.32 ಲಕ್ಷ ಮಕ್ಕಳ ಪರೀಕ್ಷೆ: ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯ ಕ್ರಮದಡಿಯಲ್ಲಿ ಅಂಗನವಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳಲ್ಲಿನ 18ವರ್ಷದೊಳಗಿನ ಮಕ್ಕಳನ್ನು ಆರೋಗ್ಯ ನಂದನ ವಿಶೇಷ ತಪಾಸಣೆಯಡಿ 78.32 ಲಕ್ಷ ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ.
ರಾಯಚೂರಿನಲ್ಲಿ ಅಧಿಕ: ರಾಜ್ಯದಲ್ಲಿ ಪತ್ತೆಯಾದ ಒಟ್ಟು ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75 ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ವರದಿಯಾಗಿದೆ. ಇದಕ್ಕೆ ಅಪೌಷ್ಠಿಕತೆ ಕಾರಣ ಎನ್ನಲಾಗುತ್ತಿದೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆ, ಬಿಬಿಎಂಪಿಯಲ್ಲಿ 20 ಪ್ರಕರಣ ವರದಿಯಾಗಿದೆ. ಯಾದಗಿರಿ , ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದ ಮಕ್ಕಳಲ್ಲಿ ಡಯಾಬಿಟಿಸ್ ಟೈಪ್-1 ವರದಿಯಾಗಿಲ್ಲ.
ಉಚಿತ ಚಿಕಿತ್ಸೆ: ತಾಲೂಕು ಮಟ್ಟದಲ್ಲಿ ಟೈಪ್-1 ಡಯಾ ಬಿಟಿಸ್ ಪತ್ತೆ ಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ಸುಲಿನ್, ಮಧುಮೇಹ ಸಂಬಂಧಿಸಿದ ಔಷಧಗಳನ್ನು ನೀಡಲಾಗುತ್ತಿದೆ. ಜತೆಗೆ ತಾಲೂಕು-ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲು ತ್ತಿರುವ ಮಕ್ಕಳಿಗೆ ಉಚಿತ ಔಷಧಗಳನ್ನು ವಿತರಿಸುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ತೃಪ್ತಿ ಕುಮ್ರಗೋಡು