ಭುವನೇಶ್ವರ: ಭಾರತದ ಆತಿಥ್ಯದ ಸತತ 2ನೇ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ರವಿವಾರ ರಾತ್ರಿ ತೆರೆ ಬೀಳಲಿದೆ. ಒಲಿಂಪಿಕ್ ಹಾಗೂ ಹಾಲಿ ಚಾಂಪಿಯನ್ ಖ್ಯಾತಿಯ ಬೆಲ್ಜಿಯಂ ಮತ್ತು ಹೊತ್ತಿಗೆ ಸರಿಯಾಗಿ ಚೇತರಿಸಿ ಕೊಂಡ ಜರ್ಮನಿ ತಂಡಗಳು ಪ್ರಶಸ್ತಿ ಹೋರಾಟದಲ್ಲಿ ಕಾಣಿಸಿಕೊಳ್ಳಲಿವೆ.
ಇತ್ತಂಡಗಳಿಂದಲೂ ಜಬರ್ದಸ್ತ್ ಆಟ ವನ್ನು ನಿರೀಕ್ಷಿಸಲಾಗಿದೆ.ವಿಶ್ವಕಪ್ ಹಾಕಿ ಇತಿಹಾಸದಲ್ಲಿ ಈವರೆಗೆ ಪ್ರಶಸ್ತಿ ಉಳಿಸಿಕೊಂಡ ತಂಡಗಳು 3 ಮಾತ್ರ-ಪಾಕಿಸ್ಥಾನ, ಆಸ್ಟ್ರೇಲಿಯ ಮತ್ತು ಜರ್ಮನಿ. ಈ ಸಾಲಿನಲ್ಲಿ ಬೆಲ್ಜಿಯಂ ವಿರಾಜಮಾನ ವಾದೀತೇ ಎಂಬುದೊಂದು ಕುತೂ ಹಲ. ಬೆಲ್ಜಿಯಂ 4 ವರ್ಷಗಳ ಹಿಂದೆ ಇದೇ “ಕಳಿಂಗ ಸ್ಟೇಡಿಯಂ’ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಅಂದಿನ ಶೂಟೌಟ್‌ನಲ್ಲಿ ನೆದರ್ಲೆಂಡ್ಸ್ ತಂಡವನ್ನು ಕೆಡವಿ ನಲಿದಾಡಿತ್ತು.
ಅನುಭವಿ ಬೆಲ್ಜಿಯಂ
ಅನುಮಾನವೇ ಇಲ್ಲ, ಬೆಲ್ಜಿಯಂ ಈ ಕೂಟದ ಅತ್ಯಂತ ಅನುಭವಿ ಹಾಗೂ ನೆಚ್ಚಿನ ತಂಡ. ಇಲ್ಲಿನ 11 ಆಟಗಾರರ ವಯಸ್ಸು 30 ವರ್ಷ ದಾಟಿದೆ. ಇವರಲ್ಲಿ ಮೂವರು 35 ವರ್ಷ ಮೀರಿದ್ದಾರೆ. ಒಟ್ಟಾರೆ ಹೇಳುವುದಾದರೆ ಬೆಲ್ಜಿಯಂ ಹಾಕಿಗೆ ಇದು ಸುವರ್ಣ ಯುಗ. ಇದೇ ಆಟಗಾರರಿಂದ 2018ರ ವಿಶ್ವಕಪ್ ಹಾಗೂ ಟೋಕಿಯೊ ಒಲಿಂಪಿಕ್ಸ್ ಚಿನ್ನವನ್ನು ಗೆದ್ದ ಹಿರಿಮೆ ಬೆಲ್ಜಿಯಂ ತಂಡದ್ದು.
ಅತ್ಯಂತ ಆಕ್ರಮಣಕಾರಿ ಹಾಗೂ ಅಷ್ಟೇ ರಕ್ಷಣಾತ್ಮಕ ಆಟ ಬೆಲ್ಜಿಯಂ ವೈಶಿಷ್ಟé. ವಿಶ್ವದ ಶ್ರೇಷ್ಠ ದರ್ಜೆಯ ಅಟ್ಯಾಕಿಂಗ್ ಮತ್ತು ಡಿಫೆನ್ಸಿàವ್ ಆಟಗಾರರೆಲ್ಲ ಈ ತಂಡದಲ್ಲೇ ತುಂಬಿಕೊಂಡಿದ್ದಾರೆಯೇ ಎಂಬ ಅನುಮಾನ ಕಾಡದಿರದು. ಇವರೆಲ್ಲ ರೊಂದಿಗೆ ವಿನ್ಸೆಂಟ್ ವೇನಾಶ್ ಎಂಬ ಅತ್ಯುತ್ತಮ ಗೋಲ್‌ಕೀಪರ್ ಬೆಲ್ಜಿಯಂ ಆಸ್ತಿಯಾಗಿದ್ದಾರೆ.
Related Articles
ಈ ಕೂಟದಲ್ಲಿ ಬೆಲ್ಜಿಯಂ ಒಟ್ಟು 18 ಗೋಲು ಬಾರಿಸಿದೆ. ಇದರಲ್ಲಿ ಸ್ಟಾರ್ ಸ್ಟ್ರೈಕರ್ ಟಾಮ್ ಬೂನ್ ಕೊಡುಗೆಯೇ 7 ಗೋಲುಗಳು. ಬಿಟ್ಟುಕೊಟ್ಟದ್ದು 5 ಗೋಲು ಮಾತ್ರ.
ಗೆಲುವು ಕಸಿಯುವ ಜರ್ಮನಿ
ಎರಡು ಬಾರಿಯ ಚಾಂಪಿಯನ್ ಜರ್ಮನಿ (2002 ಮತ್ತು 2006) ನಾಕೌಟ್ ಪಂದ್ಯಗಳಲ್ಲಿ ಹಿನ್ನಡೆಯ ಬಳಿಕ ಎದುರಾಳಿಯ ಗೆಲುವನ್ನು ಕಸಿದ ತಂಡ. ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 0-2, ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧವೂ 0-2 ಹಿನ್ನಡೆ ಕಂಡ ಜರ್ಮನಿ ಜಯಭೇರಿ ಮೊಳಗಿಸಿದ್ದು ಈಗ ಇತಿಹಾಸ. ಆಂಗ್ಲರನ್ನು ಶೂಟೌಟ್‌ನಲ್ಲಿ, ಕಾಂಗರೂವನ್ನು 4-3ರಿಂದ ಉರುಳಿ ಸುವ ಮೂಲಕ ತನ್ನ “ನೆವರ್ ಸೇ ಡೈ’ ಪ್ರವೃತ್ತಿಯನ್ನು ಸಾಬೀತುಪಡಿಸಿದೆ. ಕಾಂಗರೂ ಪಡೆಗೆ ಆಕ್ರಮಣಕಾರಿ ಆಟವಾಡದಂತೆ ತಡೆದು ನಿಲ್ಲಿಸಿದ ಛಾತಿ ಜರ್ಮನ್ ಪಡೆಯದ್ದು.
ಪೆನಾಲ್ಟಿ ಕಾರ್ನರ್ ಸ್ಪೆಷಲಿಸ್ಟ್ ಗೊಂಝಾಲೊ ಪೈಲಟ್ ಜರ್ಮನ್ ಪಡೆಯ ಪ್ರಧಾನ ಆಟಗಾರ. ಆಸ್ಟ್ರೇ ಲಿಯ ವಿರುದ್ಧ ಇವರು ಸಾಧಿಸಿದ ಹ್ಯಾಟ್ರಿಕ್‌ನಿಂದಾಗಿ ಜರ್ಮನಿ ಜಯ ಭೇರಿ ಮೊಳಗಿಸಿದ್ದನ್ನು ಮರೆಯುವಂತಿಲ್ಲ. ಅಂದಹಾಗೆ ಪೈಲಟ್ 2016 ಒಲಿಂಪಿಕ್ಸ್ ಸ್ವರ್ಣ ವಿಜೇತ ಆರ್ಜೆಂಟೀನಾ ತಂಡದ ಸದಸ್ಯ ರಾಗಿದ್ದರು. ಈಗ ಜರ್ಮನಿ ತಂಡದ ಹೀರೋ ಆಗಿದ್ದಾರೆ.
ಭಾರತಕ್ಕೆ ಜಂಟಿ 9ನೇ ಸ್ಥಾನ
ದಕ್ಷಿಣ ಆಫ್ರಿಕಾವನ್ನು 5-2 ಗೋಲುಗಳಿಂದ ಸೋಲಿಸಿದ ಭಾರತ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಆರ್ಜೆಂಟೀನಾದೊಂದಿಗೆ ಜಂಟಿ 9ನೇ ಸ್ಥಾನಿಯಾಯಿತು. ಇನ್ನೊಂದು ಪಂದ್ಯದಲ್ಲಿ ಆರ್ಜೆಂಟೀನಾ ವೇಲ್ಸ್ ತಂಡವನ್ನು 6-0 ಆಂತರದಿಂದ ಪರಾಭವಗೊಳಿಸಿತು.
ಆರಂಭ: ರಾತ್ರಿ 7.00 ಪ್ರಸಾರ: ಸ್ಟಾರ್ ಸ್ಪೋರ್ಟ್ಸ್