ಹೊಸದಿಲ್ಲಿ: ಏಕದಿನ ವಿಶ್ವಕಪ್ ಕೂಟದಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಟೀಂ ಇಂಡಿಯಾ ಇಂದು ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಹೊಸದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ಥಾನ ತಂಡವನ್ನು ರೋಹಿತ್ ಶರ್ಮಾ ಬಳಗ ಎದುರಿಸುತ್ತಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಇಂದಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಅವರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇಂದಿನ ಪಂದ್ಯದಲ್ಲಿ ರವಿ ಅಶ್ವಿನ್ ಬದಲಿಗೆ ಶಾರ್ದೂಲ್ ಠಾಕೂರ್ ಅವಕಾಶ ಪಡೆದಿದ್ದಾರೆ.
ಅಫ್ಘಾನಿಸ್ಥಾನ ಕೆಳ ರ್‍ಯಾಂಕಿಂಗ್ ತಂಡವಾಗಿರಬಹುದು, ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿರಬಹುದು, ಆದರೆ ಅದು ಈ ಕೂಟದ ಅತ್ಯಂತ ಅಪಾಯಕಾರಿ ತಂಡ ಎಂಬುದನ್ನು ಮರೆಯಬಾರದು. ಇದಕ್ಕೆ ಕಳೆದ ವಿಶ್ವಕಪ್ ಪಂದ್ಯವೇ ಸಾಕ್ಷಿ. ಸೌತಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಂದಿನ ಗುಲ್ಬದಿನ್ ನೈಬ್ ಪಡೆ ಭಾರತವನ್ನು ಸೋಲಿಸುವ ಹಂತಕ್ಕೆ ಬಂದಿತ್ತು. ಆದರೆ ಕೊಹ್ಲಿ ಬಳಗದ ನಸೀಬು ಚೆನ್ನಾಗಿತ್ತು. ಅದು ದೊಡ್ಡ ಅವಮಾನದಿಂದ ಪಾರಾಯಿತು. ಭಾರತವನ್ನು 8ಕ್ಕೆ 224 ರನ್ನಿಗೆ ಹಿಡಿದು ನಿಲ್ಲಿಸಿದಾಗ ಎಲ್ಲರಲ್ಲೂ ಆತಂಕ ಮನೆಮಾಡಿತ್ತು. ಆದರೆ ನಮ್ಮ ಬೌಲರ್ ತಿರುಗೇಟು ನೀಡಲು ಯಶಸ್ವಿಯಾದರು. ಗೆಲುವಿನಿಂದ ಅಫ್ಘಾನ್ ಕೇವಲ 11 ರನ್ನುಗಳಿಂದ ಹಿಂದುಳಿಯಿತು.
ಇಂದು ಭಾರತ- ಅಫ್ಘಾನ್ ನಡುವಿನ ಪಂದ್ಯವಾದರೂ ಅಭಿಮಾನಿಗಳಿಗೆ ಮಾತ್ರ ಕೊಹ್ಲಿ- ನವೀನ್ ಉಲ್ ಹಕ್ ವಿರುದ್ಧ ಪಂದ್ಯದಂತಾಗಿದೆ. ಐಪಿಎಲ್ ಪಂದ್ಯದ ವೇಳೆ ಕೊಹ್ಲಿ- ನವೀನ್ ನಡುವೆ ಮಾತಿಕ ಚಕಮಕಿ ನಡೆದಿತ್ತು. ಬಳಿಕ ನವೀನ್ ಹೋದಲ್ಲೆಲ್ಲಾ ಅಭಿಮಾನಿಗಳು ಕೊಹ್ಲಿ ಹೆಸರು ಹೇಳೀ ರೇಗಿಸುತ್ತಾರೆ. ಇಂದು ಕೂಡಾ ಪಂದ್ಯ ಆರಂಭಕ್ಕೆ ಮೊದಲು ಅಭ್ಯಾಸ ನಡೆಸುತ್ತಿದ್ದ ನವೀನ್ ಗೆ ಇದೇ ಅನುಭವವಾಗಿದೆ.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಅಪ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾ), ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ