Advertisement
ಕೂಡಲೇ ಸಭೆ ಸೇರಿದ ಐಸಿಸಿ, 4ನೇ ವಿಶ್ವಕಪ್ ಆಯೋಜಿಸುವ ಉತ್ಸುಕತೆ ತೋರುವ ರಾಷ್ಟ್ರಗಳು 1983ರ ಅಂತ್ಯದೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಸೂಚಿಸಿತು. ಇದಕ್ಕೆ ಉತ್ಸಾಹದಾಯಕ ಪ್ರತಿಕ್ರಿಯೆ ತೋರಿದ ರಾಷ್ಟ್ರಗಳೆಂದರೆ ಭಾರತ ಮತ್ತು ಪಾಕಿಸ್ಥಾನ. 18 ಲಕ್ಷ ಪೌಂಡ್ ಗ್ಯಾರಂಟಿ ಮೊತ್ತವನ್ನು ನೀಡಲು ಈ ರಾಷ್ಟ್ರಗಳು ಮುಂದೆ ಬಂದಿದ್ದವು. ಆದರೆ ಭಾರತ-ಪಾಕಿಸ್ಥಾನ ನಡುವೆ ಹದಗೆಟ್ಟ ರಾಜನೈತಿಕ ಸಂಬಂಧ ಈ ಪ್ರತಿಷ್ಠಿತ ಕೂಟಕ್ಕೆ ತೊಡರುಗಾಲಾಗುವ ಸಾಧ್ಯತೆ ಇತ್ತು.
“ರಿಲಯನ್ಸ್ ಇಂಡಸ್ಟ್ರೀಸ್ ಲಿಮಿ ಟೆಡ್’ಗೆ ಈ ಪಂದ್ಯಾವಳಿಯ ಪ್ರಾಯೋಜನೆ ಲಭಿಸಿದ್ದರಿಂದ ಇದು “ರಿಲಯನ್ಸ್ ವಿಶ್ವಕಪ್ ಕ್ರಿಕೆಟ್’ ಎನಿಸಿತು. 17 ಪಂದ್ಯಗಳನ್ನು ಭಾರತದಲ್ಲಿ, 10 ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಡಿಸಲು ನಿರ್ಧರಿಸ ಲಾಯಿತು. ಫೈನಲ್ ಆತಿಥ್ಯ ಪ್ರತಿಷ್ಠಿತ “ಈಡನ್ ಗಾರ್ಡನ್ಸ್’ ಪಾಲಾಯಿತು. ಬಹಳ ಬೇಗ ಸೂರ್ಯಾಸ್ತವಾಗುವುದರಿಂದ ಓವರ್‌ಗಳ ಸಂಖ್ಯೆ 60ರಿಂದ 50ಕ್ಕೆ ಇಳಿಯಿತು. ಒಟ್ಟು 8 ತಂಡಗಳ ಟೂರ್ನಿ ಇದಾಗಿತ್ತು. ಸತತ 2ನೇ ಸಲವೂ ಜಿಂಬಾಬ್ವೆಯೇ ಐಸಿಸಿ ಟ್ರೋಫಿ ಜಯಿಸಿದ್ದರಿಂದ ಇಲ್ಲಿ ಯಾವುದೇ ನೂತನ ತಂಡಗಳ ದರ್ಶನವಾಗಲಿಲ್ಲ.
Related Articles
ಮೊದಲ ಲೀಗ್ ಪಂದ್ಯದಲ್ಲೇ ಆಸ್ಟ್ರೇಲಿಯ ವಿರುದ್ಧ ಒಂದು ರನ್ ಸೋಲುಂಡ ಭಾರತಕ್ಕೆ ಈ ಬಾರಿ ಅದೃಷ್ಟ ಇಲ್ಲ ಎಂಬು ದರ ಸೂಚನೆ ಸಿಕ್ಕಿಬಿಟ್ಟಿತು. ಆದರೆ ಕಪಿಲ್ ಪಡೆಯ ಸೆಮಿಫೈನಲ್ ಪ್ರವೇಶಕ್ಕೇನೂ ಅಡ್ಡಿಯಾಗಲಿಲ್ಲ. ಆ ಒಂದು ರನ್ನಿನ ಸೋಲೊಂದನ್ನು ಹೊರತುಪಡಿಸಿ 2 ಸುತ್ತುಗಳ ಲೀಗ್ ಹಂತದಲ್ಲಿ ಭಾರತ ಮತ್ತೆಲ್ಲೂ ಎಡವಲಿಲ್ಲ.
Advertisement
ಸೇಡು ತೀರಿಸಿಕೊಂಡ ಇಂಗ್ಲೆಂಡ್ಆದರೆ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಭಾರತದ ಆಟ ನಡೆಯಲಿಲ್ಲ. ಕಳೆದ ತವರಿನ ವಿಶ್ವಕಪ್‌ನಲ್ಲಿ ಭಾರತದೆದುರು ಸೋತು ಸೆಮಿಫೈನಲ್‌ನಲ್ಲೇ ಹೊರಬಿದ್ದ ಇಂಗ್ಲೆಂಡ್, ಈ ಬಾರಿ ಇದೇ ಹಂತದಲ್ಲಿ ಆತಿಥೇಯ ಭಾರತವನ್ನು 35 ರನ್ನುಗಳಿಂದ ಮಣಿಸಿ ಸೇಡು ತೀರಿಸಿಕೊಂಡಿತು. ಭಾರತ ಮಾಜಿ ಆಯಿತು!
ಹಿಂದಿನ ದಿನ ಪಾಕಿಸ್ಥಾನದ ಸೆಮಿಫೈನಲ್ ಸೋಲಿನಿಂದ ಸಂಭ್ರಮಿಸಿದ್ದ ಭಾರತದ ಕ್ರಿಕೆಟ್ ಅಭಿಮಾನಿಗಳು ಒಂದೇ ದಿನದಲ್ಲಿ ನೆಲಕ್ಕೆ ಕುಸಿದರು. ಲಾಹೋರ್‌ನ “ಗದ್ದಾಫಿ ಸ್ಟೇಡಿಯಂ’ನಲ್ಲಿ ಸಾಗಿದ ಮೊದಲ ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯ 18 ರನ್ನುಗಳಿಂದ ಪಾಕಿಗೆ ಆಘಾತವಿಕ್ಕಿತ್ತು. ಗ್ರಹಾಂ ಗೂಚ್ ಅವರ ಶತಕದಾಟ (110), ಎಡ್ಡಿ ಹೆಮ್ಮಿಂಗ್ಸ್ ಅವರ ಸ್ಪಿನ್ ಆಕ್ರಮಣ (52ಕ್ಕೆ 4) ಇಂಗ್ಲೆಂಡಿನ ಫೈನಲ್ ಪ್ರವೇಶದಲ್ಲಿ ಮಹತ್ವದ ಪಾತ್ರ ವಹಿಸಿತು. ಭಾರತದ ಬ್ಯಾಟಿಂಗ್ ಸರದಿಯ ಏಕೈಕ ಅರ್ಧ ಶತಕ ಅಜರುದ್ದೀನ್ ಅವರಿಂದ ದಾಖಲಾಯಿತು (64). ಗ್ರೂಪ್ “ಎ’
ಭಾರತ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಜಿಂಬಾಬ್ವೆ ಗ್ರೂಪ್ “ಬಿ’
ಪಾಕಿಸ್ಥಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಭಾರತ ತಂಡ
ಕಪಿಲ್‌ದೇವ್ (ನಾಯಕ), ಸುನೀಲ್ ಗಾವಸ್ಕರ್, ಕೆ. ಶ್ರೀಕಾಂತ್, ನವಜೋತ್ ಸಿಂಗ್ ಸಿಧು, ಮೊಹಮ್ಮದ್ ಅಜರುದ್ದೀನ್, ದಿಲೀಪ್ ವೆಂಗ್‌ಸರ್ಕಾರ್, ಕಿರಣ್ ಮೋರೆ, ಚಂದ್ರಕಾಂತ್ ಪಂಡಿತ್, ರೋಜರ್ ಬಿನ್ನಿ, ಮನೋಜ್ ಪ್ರಭಾಕರ್, ರವಿಶಾಸಿ, ಚೇತನ್ ಶರ್ಮ, ಮಣಿಂದರ್ ಸಿಂಗ್, ಎಲ್. ಶಿವರಾಮಕೃಷ್ಣನ್. ಚೇತನ್ ಶರ್ಮ ಹ್ಯಾಟ್ರಿಕ್, ಸುನೀಲ್ ಗಾವಸ್ಕರ್ ಶತಕ
ಆರಂಭಕಾರ ಸುನೀಲ್ ಗಾವಸ್ಕರ್ ಮತ್ತು ಮಧ್ಯಮ ವೇಗಿ ಚೇತನ್ ಶರ್ಮ ಒಂದೇ ಪಂದ್ಯದಲ್ಲಿ ಅಮೋಘ ಸಾಧನೆಗೈದದ್ದು 1987ರ ವಿಶ್ವಕಪ್ ವಿಶೇಷ. ಅದು ನಾಗ್ಪುರದಲ್ಲಿ ನಡೆದ ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಸುತ್ತಿನ ಮುಖಾಮುಖೀ. ಇದು ಕಟ್ಟಕಡೆಯ ಲೀಗ್ ಪಂದ್ಯವೂ ಆಗಿತ್ತು. “ಎ’ ವಿಭಾಗದ ಅಗ್ರಸ್ಥಾನ ಅಲಂಕರಿಸಲು ಭಾರತಕ್ಕೆ ಇಲ್ಲಿ ಲೆಕ್ಕಾಚಾರದ ಗೆಲುವು ಅನಿವಾರ್ಯವಾಗಿತ್ತು. ಇವರಿಬ್ಬರ ಸಾಹಸದಿಂದ ಇದು ಸಾಧ್ಯವಾಯಿತು.
ಚೇತನ್ ಶರ್ಮ ಸತತ 3 ಎಸೆತಗಳಲ್ಲಿ ಕೆನ್ ರುದರ್‌ಫೋರ್ಡ್, ಇಯಾನ್ ಸ್ಮಿತ್ ಮತ್ತು ಇವೆನ್ ಚಾಟ್‌ಫೀಲ್ಡ್ ವಿಕೆಟ್ ಉಡಾಯಿಸಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಬೌಲರ್ ಎಂಬ ಹಿರಿಮೆಗಾ ಪಾತ್ರರಾದರು. ಇದು ಭಾರತದ ಏಕದಿನ ಇತಿಹಾಸದ ಮೊದಲ ಹ್ಯಾಟ್ರಿಕ್ ಕೂಡ ಹೌದು. ಮುಂದಿನದು ಸುನೀಲ್ ಗಾವಸ್ಕರ್ ಅವರ ಬ್ಯಾಟಿಂಗ್ ಆರ್ಭಟ. ಚೇಸಿಂಗ್ ವೇಳೆ ಅವರು 88 ಎಸೆತಗಳಿಂದ 103 ರನ್ ಸಿಡಿಸಿದರು (10 ಬೌಂಡರಿ, 3 ಸಿಕ್ಸರ್). ಇದು ಏಕದಿನದಲ್ಲಿ ಗಾವಸ್ಕರ್ ದಾಖಲಿಸಿದ ಏಕೈಕ ಶತಕವಾಗಿದೆ. ಈ ಪಂದ್ಯವನ್ನು ಭಾರತ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು. ಆಗಿನ್ನೂ 107 ಎಸೆತಗಳು ಬಾಕಿ ಇದ್ದವು. ಈಡನ್ ಫೈನಲ್‌ನಲ್ಲಿ ಕಾಂಗರೂ ಹಾರಾಟ
ಚೆನ್ನೈಯಲ್ಲಿ ನಡೆದ ಕೂಟದ ಮೊದಲ ಪಂದ್ಯದಲ್ಲೇ ಆತಿಥೇಯ ಭಾರತವನ್ನು ಒಂದು ರನ್ನಿನಿಂದ ಮಣಿಸಿ ರೋಚಕ ಆರಂಭ ಸಾರಿದ ಅಲನ್ ಬೋರ್ಡರ್ ನೇತೃತ್ವದ ಆಸ್ಟ್ರೇಲಿಯಕ್ಕೆ ಈ ಬಾರಿ ಲಕ್ ಇದೆ ಎಂಬುದು ಖಾತ್ರಿಯಾಗಿತ್ತು. ಇಂಗ್ಲೆಂಡ್ ಎದುರಿನ ಕೋಲ್ಕತಾದ ಫೈನಲ್ ಹಣಾಹಣಿಯಲ್ಲಿ ಇದು ಸಾಬೀತಾಯಿತು. ಈವರೆಗೆ ಕಪ್ ಎತ್ತದ ಈ ಎರಡೂ ತಂಡಗಳಿಗೆ ಇದು 2ನೇ ಫೈನಲ್ ಆಗಿತ್ತು. ಆಸ್ಟ್ರೇಲಿಯ 1975ರ ಫೈನಲ್‌ನಲ್ಲಿ, ಇಂಗ್ಲೆಂಡ್ 1979ರ ಪ್ರಶಸ್ತಿ ಸಮರದಲ್ಲಿ ವೆಸ್ಟ್ ಇಂಡೀಸಿಗೆ ಶರಣಾಗಿದ್ದವು. ಹೀಗಾಗಿ ಈ ಬಾರಿ ಯಾರೇ ಗೆದ್ದರೂ ನೂತನ ಚಾಂಪಿಯನ್ ತಂಡವೊಂದರ ಉದಯವಾಗುತ್ತಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಕ್ಕೆ ಡೇವಿಡ್ ಬೂನ್ (75) ಆಧಾರ ವಾದರು. ಮೈಕ್ ವೆಲೆಟ್ಟ ಕೊನೆಯ ಕ್ಷಣದಲ್ಲಿ ಸಿಡಿದುದರಿಂದ ಸ್ಕೋರ್ 250ರ ಗಡಿ ದಾಟಿತು (5ಕ್ಕೆ 253). ಇಂಗ್ಲೆಂಡ್ ಒಂದು ರನ್ ಮಾಡುವಷ್ಟರಲ್ಲಿ ರಾಬಿನ್ಸನ್ (0) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಆದರೆ ಗೂಚ್ (35), ಆ್ಯಥಿ (48), ಗ್ಯಾಟಿಂಗ್ (41), ಲ್ಯಾಂಬ್ (45) ದಿಟ್ಟ ಬ್ಯಾಟಿಂಗ್ ಹೋರಾಟ ಸಂಘಟಿಸಿದರು. ಗ್ಯಾಟಿಂಗ್ ಮಾಡಿಕೊಂಡ ಎಡವಟ್ಟು
ಆದರೆ ಎಡವಟ್ಟಾದದ್ದೇ ಇಲ್ಲಿ… ಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್ ತಮ್ಮ ಕ್ರಿಕೆಟ್ ಬಾಳ್ವೆಯಲ್ಲೇ ಮೊದಲ ತಪ್ಪೊಂದನ್ನು ಮಾಡಿದರು. ಪಾರ್ಟ್‌ಟೈಮ್ ಬೌಲರ್, ಆಸೀಸ್ ನಾಯಕ ಅಲನ್ ಬೋರ್ಡರ್ ಅವರ ಎಸೆತವೊಂದಕ್ಕೆ ರಿವರ್ಸ್ ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. 40ರ ಗಡಿ ದಾಟಿ ಕ್ರೀಸಿಗೆ ಅಂಟಿಕೊಂಡಿದ್ದ ಗ್ಯಾಟಿಂಗ್‌ಗೆ ಆ ಹೊತ್ತಿನಲ್ಲಿ ಇಂಥದೊಂದು ಹೊಡೆತದ ಅಗತ್ಯವೇ ಇರಲಿಲ್ಲ. ಇಂಗ್ಲೆಂಡ್ ಸೋಲಿಗೆ ಈ ಹೊಡೆತವೇ ಕಾರಣ ಎಂದು ಈಗಲೂ ವಿಶ್ಲೇಷಿಸಲಾಗುತ್ತಿದೆ! ಆದರೂ ಅಲನ್ ಲ್ಯಾಂಬ್ ಇರುವ ತನಕ ಇಂಗ್ಲೆಂಡಿನ ಕಪ್ ಕನಸು ಜೀವಂತವಾಗಿಯೇ ಇತ್ತು. ಆದರೆ ಕೆಳ ಕ್ರಮಾಂಕದ ಆಟಗಾರರನ್ನು ಕಟ್ಟಿಹಾಕುವ ಮೂಲಕ ಆಸ್ಟ್ರೇಲಿಯ ರೋಚಕ ಜಯವನ್ನು ದಾಖಲಿಸಿಯೇ ಬಿಟ್ಟಿತು. ಅಂತರ ಕೇವಲ 7 ರನ್. ಇದು ವಿಶ್ವಕಪ್ ಫೈನಲ್‌ನಲ್ಲಿ ದಾಖಲಾದ, ಅತ್ಯಂತ ಕಡಿಮೆ ರನ್ ಅಂತರದ ಗೆಲುವಾಗಿದೆ. ವಿಶ್ವಕಪ್ ಫೈನಲ್
ಆಸ್ಟ್ರೇಲಿಯ
ಡೇವಿಡ್ ಬೂನ್ ಸಿ ಡೌಂಟನ್ ಬಿ ಹೆಮ್ಮಿಂಗ್ಸ್ 75
ಜೆಫ್ ಮಾರ್ಷ್ ಬಿ ಫಾಸ್ಟರ್ 24
ಡೀನ್ ಜೋನ್ಸ್ ಸಿ ಆ್ಯಥಿ ಬಿ ಹೆಮ್ಮಿಂಗ್ಸ್ 33
ಕ್ರೆಗ್ ಮೆಕ್‌ಡರ್ಮಟ್ ಬಿ ಗೂಚ್ 14
ಅಲನ್ ಬೋರ್ಡರ್ ರನೌಟ್ 31
ಮೈಕ್ ವೆಲೆಟ್ಟ ಔಟಾಗದೆ 45
ಸ್ಟೀವ್ ವೋ ಔಟಾಗದೆ 5
ಇತರ 26
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 253
ವಿಕೆಟ್ ಪತನ: 1-75, 2-151, 3-166, 4-168, 5-241.
ಬೌಲಿಂಗ್: ಫಿಲ್ ಡಿಫ್ರೀಟಸ್ 6-1-34-0
ಗ್ಲ್ಯಾಡ್‌ಸ್ಟನ್ ಸ್ಮಾಲ್ 6-0-33-0
ನೀಲ್ ಫಾಸ್ಟರ್ 10-0-38-1
ಎಡ್ಡಿ ಹೆಮ್ಮಿಂಗ್ಸ್ 10-1-48-2
ಜಾನ್ ಎಂಬುರಿ 10-0-44-0
ಗ್ರಹಾಂ ಗೂಚ್ 8-1-42-1 ಇಂಗ್ಲೆಂಡ್
ಗ್ರಹಾಂ ಗೂಚ್ ಎಲ್‌ಬಿಡಬ್ಲ್ಯು ಒ’ಡೊನೆಲ್ 35
ಟಿಮ್ ರಾಬಿನ್ಸನ್ ಎಲ್‌ಬಿಡಬ್ಲ್ಯು ಮೆಕ್‌ಡರ್ಮಟ್ 0
ಬಿಲ್ ಆ್ಯಥಿ ರನೌಟ್ 58
ಮೈಕ್ ಗ್ಯಾಟಿಂಗ್ ಸಿ ಡೈರ್ ಬಿ ಬೋರ್ಡರ್ 41
ಅಲನ್ ಲ್ಯಾಂಬ್ ಬಿ ವೋ 45
ಪಾಲ್ ಡೌಂಟನ್ ಸಿ ಒ’ಡೊನೆಲ್ ಬಿ ಬೋರ್ಡರ್ 9
ಜಾನ್ ಎಂಬುರಿ ರನೌಟ್ 10
ಫಿಲ್ ಡಿಫ್ರೀಟಸ್ ಸಿ ರೀಡ್ ಬಿ ವೋ 17
ನೀಲ್ ಫಾಸ್ಟರ್ ಔಟಾಗದೆ 7
ಗ್ಲ್ಯಾಡ್‌ಸ್ಟನ್ ಸ್ಮಾಲ್ ಔಟಾಗದೆ 3
ಇತರ 21
ಒಟ್ಟು (50 ಓವರ್‌ಗಳಲ್ಲಿ 8 ವಿಕೆಟಿಗೆ) 246
ವಿಕೆಟ್ ಪತನ: 1-1, 2-66, 3-135, 4-170, 5-188, 6-218, 7-220, 8-235. ಬೌಲಿಂಗ್: ಕ್ರೆಗ್ ಮೆಕ್‌ಡರ್ಮಟ್ 10-1-51-1
ಬ್ರೂಸ್ ರೀಡ್ 10-0-43-0
ಸ್ಟೀವ್ ವೋ 9-0-37-2
ಸೈಮನ್ ಒ’ಡೊನೆಲ್ 10-1-35-1
ಟಿಮ್ ಮೇ 4-0-27-0
ಅಲನ್ ಬೋರ್ಡರ್ 7-0-38-2 ಪಂದ್ಯಶ್ರೇಷ್ಠ: ಡೇವಿಡ್ ಬೂನ್