Advertisement

ರಕ್ತದಾನ ಮಾನವೀಯತೆ ಬೆಳೆಸುತ್ತದೆ: ಮಠಂದೂರು

02:19 PM Jun 15, 2018 | |

ನಗರ: ರಕ್ತದಾನ ವ್ಯಕ್ತಿಯೊಬ್ಬನ ಆರೋಗ್ಯ ವೃದ್ಧಿಸುವ ಜತೆಗೆ ಸಮಾಜದ ಸ್ವಾಸ್ಥ್ಯ, ಮಾನವೀಯತೆಯನ್ನು ಬೆಳೆಸುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ನಗರದ ರೋಟರಿ ಟ್ರಸ್ಟ್‌ ಸಭಾಂಗಣದಲ್ಲಿ ರೋಟರಿ ಕ್ಲಬ್‌ ಪುತ್ತೂರು, ರೋಟರಿ ಕ್ಲಬ್‌ ಪುತ್ತೂರು ಯುವ, ರೋಟರಿ ಕ್ಲಬ್‌ ಪುತ್ತೂರು ಸ್ವರ್ಣ, ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಪುತ್ತೂರು, ಇನ್ನರ್‌ವೀಲ್‌ ಕ್ಲಬ್‌ ಪುತ್ತೂರು, ಹವ್ಯಕ ಮಂಡಲ ಪುತ್ತೂರು ಸಹಯೋಗದಲ್ಲಿ ರೋಟರಿ ಬ್ಲಿಡ್‌ ಬ್ಯಾಂಕ್‌ ಪುತ್ತೂರು ಆಯೋಜಿಸಿದ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿದರು.

ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ ಪುಣ್ಯ ಕಾರ್ಯಕ್ಕೆ ನಾವು ಭಾಜನರಾಗುತ್ತೇವೆ. ಮತ್ತೂಬ್ಬರ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡುವ ಒಳ್ಳೆಯ ಮನಸ್ಸು ನಮ್ಮದಾಗಬೇಕಿದೆ. ರೋಟರಿ ಸಂಸ್ಥೆಗಳು ದುರ್ಬಲರಿಗೆ, ಅಶಕ್ತರಿಗೆ ಜೀವ ಉಳಿಸುವ ಕೆಲಸವನ್ನು ಮಾಡುತ್ತಾ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. 

ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವವನ್ನೂ ಉಳಿಸುವ ಸೇವೆ ನಮ್ಮದಾಗ ಬೇಕು. ಸ್ವಾಭಿಮಾನಿ, ಸ್ವಾವಲಂಬಿ ಸಮಾಜದ ನಿರ್ಮಾಣವಾಗಬೇಕು. ಮೂಲ ಸೌಕರ್ಯಗಳನ್ನು ನೀಡುವತ್ತ ನನ್ನ ಗಮನವನ್ನು ಹರಿಸುತ್ತಾ ಈ ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.

ಅಮೂಲ್ಯ ಕೈಂಕರ್ಯ
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಎಸ್‌.ಕೆ. ಆನಂದ್‌ ಮಾತನಾಡಿ, ವಸ್ತು ಕೈಗೆಟುಕದಿದ್ದಾಗ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ. ರಕ್ತದಾನದಂತಹ ಅಮೂಲ್ಯ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವುದು ದೇವರು ಮೆಚ್ಚುವ ಕೆಲಸವಾಗಿದೆ. ನಾವು ಮಾಡುವ ಕೆಲಸದಲ್ಲಿ ತೃಪ್ತಿ, ಸಂತೋಷವಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Advertisement

ಯುವಕರು ಬರಬೇಕು
ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಚೇರ್‌ಮನ್‌ ಆಸ್ಕರ್‌ ಆನಂದ್‌ ಮಾತನಾಡಿ, ವ್ಯಕ್ತಿಯ ಜೀವ ಉಳಿಸುವ ಕಾಯಕದಲ್ಲಿ ರಕ್ತದಾನಿಗಳು ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಪ್ರಸ್ತುತ ಇಲ್ಲಿ ರಕ್ತದ ಬೇಡಿಕೆ ಶೇ. 100ರಷ್ಟಿದ್ದರೂ ದಾನಿಗಳ ಸಂಖ್ಯೆ ಕಡಿಮೆಯಿದೆ. ರಕ್ತದಾನ ಮಾಡಲು ಯುವ ಜನತೆ ಮುಂದಾಗಬೇಕು ಎಂದು ಹೇಳಿದರು.

ಬ್ಲಡ್‌ ಬ್ಯಾಂಕ್‌ನಿಂದ ಪ್ರಯೋಜನ
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್‌ ಪುತ್ತೂರು ಅಧ್ಯಕ್ಷ ಎ.ಜೆ. ರೈ ಮಾತನಾಡಿ, ಬ್ಲಡ್‌ ಬ್ಯಾಂಕ್‌ ಮೇಲ್ದರ್ಜೆಗೇರಿದ ಬಳಿಕ ರಕ್ತ ಪೂರೈಕೆಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ರಕ್ತ ಕಣದಲ್ಲಿನ ಪ್ಲೇಟ್‌ ಲೆಟ್‌ ವಿಂಗಡಿಸಿ ಅಗತ್ಯವಿರುವ ರಕ್ತದ ಪೂರೈಕೆಯಾಗುತ್ತಿದೆ. ಡೆಂಗ್ಯೂ ಪೀಡಿತ ರೋಗಿಗಳಿಗೂ ಅಗತ್ಯವಿದ್ದ ರಕ್ತವನ್ನು ಇಲ್ಲೇ ನೀಡಲು ಸಹಾಯಕವಾಗಿದೆ ಎಂದು ಹೇಳಿದರು.

ರೋಟರಿ ಕ್ಲಬ್‌ ಪುತ್ತೂರು ಯುವ ಅಧ್ಯಕ್ಷ ಉಮೇಶ್‌ ನಾಯಕ್‌, ರೋಟರಿ ಕ್ಲಬ್‌ ಪುತ್ತೂರು ಸ್ವರ್ಣ ನಿಯೋಜಿತ ಅಧ್ಯಕ್ಷ ಮನೋಹರ್‌, ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷೆ ಲಲಿತಾ ಭಟ್‌, ಬ್ಲಿಡ್‌ ಬ್ಯಾಂಕ್‌ ವೈದ್ಯಾಧಿಕಾರಿ ಡಾ| ರಾಮಚಂದ್ರ ಭಟ್‌ ಉಪಸ್ಥಿತರಿದ್ದರು. ರೋಟರಿ ಕ್ಲಬ್‌ ಪುತ್ತೂರು ಅಧ್ಯಕ್ಷ ಎ. ಜೆ. ರೈ ಸ್ವಾಗತಿಸಿ, ಬ್ಲಿಡ್‌ ಬ್ಯಾಂಕ್‌ ಕಾರ್ಯದರ್ಶಿ ಪ್ರೊ| ಝೇವಿಯರ್‌ ಡಿ’ಸೋಜಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next