Advertisement

ವಿಶ್ವ ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌: ಸೌರಭ್‌ ವರ್ಮ ನಂ. 29

12:29 AM Dec 05, 2019 | Team Udayavani |

ಹೊಸದಿಲ್ಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ ಸೌರಭ್‌ ವರ್ಮ ನೂತನ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ 29ನೇ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದ್ದು, ಟಾಪ್‌-30 ಯಾದಿಯೊಳಗಿನ ಸ್ಥಾನ ಅಲಂಕರಿಸಿದ ಭಾರತದ 6ನೇ ಆಟಗಾರನೆಂಬ ಹಿರಿಮೆಗೂ ಪಾತ್ರರಾಗಿದ್ದಾರೆ.

Advertisement

ಮಧ್ಯಪ್ರದೇಶದ 26ರ ಹರೆಯದ ಸೌರಭ್‌ ವರ್ಮ ಮೊನ್ನೆಯಷ್ಟೇ ಮುಗಿದ “ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಟೂರ್ನಿ’ಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಇದು ಅವರ ಮೊದಲ “ಸೂಪರ್‌ 300′ ಪ್ರಶಸ್ತಿ ಸಮರ ವಾಗಿತ್ತು. ಈ ಸಾಧನೆಯಿಂದ ಒಮ್ಮೆಲೇ 7 ಸ್ಥಾನಗಳ ಪ್ರಗತಿ ಸಾಧಿಸಿದರು. 2012ರಲ್ಲಿ 30ನೇ ರ್‍ಯಾಂಕಿಂಗ್‌ ಪಡೆದದ್ದು ಸೌರಭ್‌ ಅವರ ಈವರೆಗಿನ ಉತ್ತಮ ಸಾಧನೆಯಾಗಿತ್ತು.

ಭಾರತಕ್ಕೆ ಅಗ್ರಸ್ಥಾನ
ಸೌರಭ್‌ ವರ್ಮ ಅವರ ಈ ಪ್ರಗತಿಯೊಂದಿಗೆ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಭಾರತ ಅಗ್ರ 30ರೊ ಳಗಿನ ರ್‍ಯಾಂಕಿಂಗ್‌ ಯಾದಿಯಲ್ಲಿ ಅತ್ಯಧಿಕ 6 ಆಟಗಾರರನ್ನು ಹೊಂದಿದ ದೇಶವೆನಿಸಿತು. ಚೀನ ದ್ವಿತೀಯ ಸ್ಥಾನಕ್ಕೆ ಇಳಿಯಿತು (5).

ವನಿತಾ ವಿಭಾಗದಲ್ಲಿ ಅಸ್ಸಾಮಿನ 20ರ ಹರೆಯದ ಆಟಗಾರ್ತಿ ಅಶ್ಮಿತಾ ಚಾಲಿಹಾ 18 ಸ್ಥಾನ ಮೇಲೇರಿದ್ದು, ಮೊದಲ ಸಲ ಅಗ್ರ ನೂರರಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಟಾಟಾ ಓಪನ್‌ ಮತ್ತು ದುಬಾೖ ಇಂಟರ್‌ನ್ಯಾಶನಲ್‌ ಚಾಲೆಂಜ್‌ ಪ್ರಶಸ್ತಿ ಗೆದ್ದ ಹಿರಿಮೆ ಅಶ್ಮಿತಾ ಅವರದಾಗಿತ್ತು. ಮೊನ್ನೆ ಮುಗಿದ ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌ ಟೂರ್ನಿ, ಇವರಾಡಿದ ಮೊದಲ “ಸೂಪರ್‌ 300′ ಸರಣಿಯಾಗಿತ್ತು. ಇದರಲ್ಲಿ ಅಶ್ಮಿತಾ ಪ್ರಿ-ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು.

ಭಾರತದ ಅಗ್ರ ಆಟಗಾರರ ರ್‍ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಪಿ.ವಿ. ಸಿಂಧು 6ನೇ, ಸೈನಾ ನೆಹ್ವಾಲ್‌ 10ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಕೆ. ಶ್ರೀಕಾಂತ್‌ (12) ಮತ್ತು ಬಿ. ಸಾಯಿಪ್ರಣೀತ್‌ (11) ಯಥಾಸ್ಥಾನದಲ್ಲಿ ಮುಂದುವರಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next