Advertisement

ಜಾವೆಲಿನ್‌: ಅನ್ನು ರಾಣಿಗೆ 7ನೇ ಸ್ಥಾನ: ಇಂದು ನೀರಜ್‌, ರೋಹಿತ್‌ ಫೈನಲ್‌

10:55 PM Jul 23, 2022 | Team Udayavani |

ಯೂಜೀನ್‌ (ಯುಎಸ್‌ಎ): ವಿಶ್ವ ಆ್ಯತ್ಲೆಟಿಕ್ಸ್‌ ವನಿತಾ ಜಾವೆಲಿನ್‌ ಸ್ಪರ್ಧೆಯಲ್ಲಿ ಭಾರತದ ಅನ್ನು ರಾಣಿ 7ನೇ ಸ್ಥಾನಕ್ಕೆ ಕುಸಿದು ನಿರಾಸೆ ಮೂಡಿಸಿದರು. ಅವರಿಂದ 61.12 ಮೀ. ದೂರವಷ್ಟೇ ದಾಖಲಾಯಿತು. ಇದು ಅವರ ಪ್ರಸಕ್ತ ಋತುವಿನ ಅತ್ಯುತ್ತಮ ಸಾಧನೆಗಿಂತಲೂ (63.82 ಮೀ.) ಕಳಪೆ ಪ್ರದರ್ಶನವಾಗಿದೆ.

Advertisement

ಇನ್ನೀಗ ಭಾರತೀಯರೆಲ್ಲರ ದೃಷ್ಟಿ ರವಿವಾರ ಬೆಳಗ್ಗೆ ನಡೆಯುವ ಪುರುಷರ ಜಾವೆಲಿನ್‌ ಫೈನಲ್‌ನತ್ತ ನೆಟ್ಟಿದೆ. ಇಲ್ಲಿ ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌ ಚೋಪ್ರಾ, ಮತ್ತೋರ್ವ ಆ್ಯತ್ಲೀಟ್‌ ರೋಹಿತ್‌ ಯಾದವ್‌ ಸ್ಪರ್ಧಿಸಲಿದ್ದಾರೆ. ಬೆಳಗ್ಗೆ 7.05ರಿಂದ ಫೈನಲ್‌ ಆರಂಭವಾಗಲಿದೆ.

ನೀರಜ್‌ ಚೋಪ್ರಾ ಇಲ್ಲಿ ಚಿನ್ನ ಗೆದ್ದರೆ ಒಲಿಂಪಿಕ್ಸ್‌ ಚಾಂಪಿಯನ್‌ ಎನಿಸಿಕೊಂಡು ವಿಶ್ವ ಆ್ಯತ್ಲೆಟಿಕ್ಸ್‌
ನಲ್ಲೂ ಬಂಗಾರ ಗೆದ್ದ ವಿಶ್ವದ ಕೇವಲ 3ನೇ ಜಾವೆಲಿನ್‌ ಎಸೆತಗಾರನಾಗಲಿ ದ್ದಾರೆ. ನಾರ್ವೆಯ ಆ್ಯಂಡ್ರಿಯಾಸ್‌ ತೊರ್ಕಿಲ್ಡ್‌ಸೆನ್‌ (2008-09) ಮತ್ತು ಜೆಕ್‌ ಗಣರಾಜ್ಯದ ಜಾನ್‌ ಝೆಲೆನಿ (1992-93 ಮತ್ತು 2000-01) ಉಳಿದಿಬ್ಬರು.

ಜಾವೆಲಿನ್‌ ಫೈನಲ್‌ ಮುನ್ನ ಟ್ರಿಪಲ್‌ ಜಂಪ್‌ ಫೈನಲ್‌ ನಡೆಯಲಿದೆ (ಬೆ. 6.30). ಇಲ್ಲಿ ಭಾರತದ ಎಲ್ಡೋಸ್ ಪೌಲ್ ಸ್ಪರ್ಧೆಯಲ್ಲಿದ್ದಾರೆ. ಅವರಿಗೆ ಇದು ಮೊದಲ ವಿಶ್ವ ಆ್ಯತ್ಲೆಟಿಕ್ಸ್‌ ಫೈನಲ್‌ ಆಗಿದೆ. ಹಾಗೆಯೇ ಪುರುಷರ 4/400 ಮೀ. ರಿಲೇ ಹೀಟ್‌ ರೇಸ್‌ ಆರಂಭವಾಗಲಿದೆ (ಬೆ. 6.10). ಭಾರತ ತಂಡವಿಲ್ಲಿ ಸ್ಪರ್ಧೆ ನಡೆಸಲಿದೆ.

ಸತತ ಎರಡನೇ ಫೈನಲ್‌
ಸತತ ಎರಡನೇ ವಿಶ್ವ ಆ್ಯತ್ಲೆಟಿಕ್ಸ್‌ ಫೈನಲ್‌ನಲ್ಲಿ ಸ್ಪರ್ಧೆಗಿಳಿದ ಅನ್ನು ರಾಣಿ ದ್ವಿತೀಯ ಪ್ರಯತ್ನದಲ್ಲಿ ಈ ದೂರ ದಾಖಲಿಸಿದರು. ಉಳಿದ ಐದೂ ಯತ್ನಗಳಲ್ಲಿ 60 ಮೀ. ಗಡಿ ದಾಟಲು ವಿಫ‌ಲರಾದರು.

Advertisement

ಅರ್ಹತಾ ಸುತ್ತಿನಲ್ಲಿ ಅನ್ನು ರಾಣಿ ಪ್ರದರ್ಶನ ಇದಕ್ಕಿಂತ ಉತ್ತಮವಿತ್ತು. ಅಲ್ಲಿ 59.60 ಮೀ. ಸಾಧನೆಯೊಂದಿಗೆ 8ನೇ ಸ್ಥಾನಿಯಾಗಿದ್ದರು.

ಅನ್ನು ರಾಣಿ 2019ರ ದೋಹಾ ವಿಶ್ವ ಆ್ಯತ್ಲೆಟಿಕ್ಸ್‌ ಕೂಟದಲ್ಲಿ 8ನೇ ಸ್ಥಾನಿಯಾಗಿದ್ದರು (61.12 ಮೀ.). 2017ರ ಲಂಡನ್‌ ಕೂಟದಲ್ಲಿ ಫೈನಲ್‌ ತಲುಪಿರಲಿಲ್ಲ.

ಆಸ್ಟ್ರೇಲಿಯದ ಹಾಲಿ ಚಾಂಪಿಯನ್‌ ಕೆಲ್ಸಿ ಲೀ ಬಾರ್ಬರ್‌ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇವರದು 66.91 ಮೀ. ದೂರದ ಸಾಧನೆಯಾಗಿತ್ತು. ಅಮೆರಿಕದ ಕಾರಾ ವಿಂಗರ್‌ 64.05 ಮೀ. ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದರು. ಜಪಾನಿನ ಹರುಕಾ ಕಿಟಗುಚಿ ಕಂಚನ್ನು ತಮ್ಮದಾಗಿಸಿಕೊಂಡರು (63.27 ಮೀ.). ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಚೀನದ ಶಿಯಿಂಗ್‌ ಲ್ಯೂ 4ನೇ ಸ್ಥಾನಕ್ಕೆ ಕುಸಿದರು (63.25 ಮೀ.).

Advertisement

Udayavani is now on Telegram. Click here to join our channel and stay updated with the latest news.

Next