ಬೆಂಗಳೂರು: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯು ನೀತಿ ಶಿಕ್ಷಣದ ಬಗ್ಗೆ ಸದ್ಯದಲ್ಲೇ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಧರ್ಮ ಹಾಗೂ ಧಾರ್ಮಿಕತೆಯಲ್ಲಿ ಹೆಚ್ಚು ಪ್ರಚಲಿತವಾಗಿರುವವರಿಂದ ಈ ಬಗ್ಗೆ ಸಲಹೆ ಪಡೆಯಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇವಲ ಭಗವದ್ಗೀತೆ ಮಾತ್ರವಲ್ಲದೇ ಇತರೆ ಧರ್ಮ ಗುರುಗಳು ವ್ಯಕ್ತಪಡಿಸುವ ಒಳ್ಳೆಯ ಅಂಶಗಳನ್ನು ನಾವು ಸ್ವೀಕರಿಸುತ್ತೇವೆ. ಇಲ್ಲಿ ಹೇಳುವ ಎಲ್ಲ ಅಂಶಗಳನ್ನು ಸಂಗ್ರಹಿಸಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡುಗಡೆ ಮಾಡಲಾಗುವುದು.
ಎಲ್ಲ ಧರ್ಮಗಳ ನಾಯಕರನ್ನು ಈ ಸಭೆಗೆ ಆಹ್ವಾನಿಸುತ್ತೇವೆ. ಅವರಿಗೆ ತಮ್ಮ ಸಲಹೆ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಲಾಗುವುದು. ಸ್ಥಳ ಹಾಗೂ ದಿನಾಂಕಗಳನ್ನು ಸದ್ಯದಲ್ಲೇ ಹೇಳುತ್ತೇವೆ ಎಂದು ತಿಳಿಸಿದರು.