ಚಿತ್ತಾಪುರ: ಮತಕ್ಷೇತ್ರದ ಅಭಿವೃದ್ಧಿಯ 70.50 ಕೋಟಿ ವೆಚ್ಚದ 115 ವಿವಿಧ ಕಾಮಗಾರಿಗಳಿಗೆ ಮಾ. 18ರಂದು ನಡೆಯುವ ಡಾ| ಬಿ.ಆರ್ ಅಂಬೇಡ್ಕರ್ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 115 ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು. ಜಿಲ್ಲೆಗೆ 2016-17ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ 38 ಕೋಟಿ ರೂ. ವೆಚ್ಚದ 26 ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ತಾಲೂಕಿನ ಮುಗಳಗಾಂವ ಗ್ರಾಮದ ಹತ್ತಿರದ ಮಹಾನಗರ ತಾಂಡಾದಲ್ಲಿ ಜೇಮ್‌ಸಿಂಗ್ ಮಹಾರಾಜ್ ಮಠದ ಯಾತ್ರಿ ನಿವಾಸಕ್ಕೆ 1 ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು. ಹೊನಗುಂಟಾ ಗ್ರಾಮದ ಚಂದ್ರಲಾ ದೇವಸ್ಥಾನದ ಬಳಿ ಪ್ರವಾಸಿ ಮೂಲಸೌಲಭ್ಯಗಳ ಅಭಿವೃದ್ಧಿ ಪಡಿಸಲು 1 ಕೋಟಿ ಮಂಜೂರಾಗಿದ್ದು, ಅದರಲ್ಲಿ 50 ಲಕ್ಷ ರೂ. ಬಿಡುಗಡೆಯಾಗಿದೆ.
ತೋನಸನಳ್ಳಿ ಗ್ರಾಮದಲ್ಲಿ ಪ್ರವಾಸಿ ಮೂಲಸೌಲಭ್ಯಗಳ ಅಭಿವೃದ್ಧಿಗಾಗಿ 1 ಕೋಟಿ ಮಂಜೂರಾಗಿದ್ದು, ಅದರಲ್ಲಿ 50 ಲಕ್ಷ ಬಿಡುಗಡೆಯಾಗಿದೆ. ಸನ್ನತಿ ಗ್ರಾಮದಿಂದ ನಾಲವಾರದ ಮುಖ್ಯ ರಸ್ತೆವರೆಗೆ 1.98 ಕೋಟಿ ಮಂಜೂರಾಗಿದ್ದು, ಅದರಲ್ಲಿ 1 ಕೋಟಿ ರೂ ಬಿಡುಗಡೆಯಾಗಿದೆ ಎಂದು ವಿವರಿಸಿದರು.
ರಾವೂರ್ ವಾಡಿ ಸನ್ನತಿ ಮುಖ್ಯ ರಸ್ತೆಯ 2 ಕಿ.ಮೀಯಿಂದ 3 ಕೀ.ಮಿ ವರೆಗೆ 1.64 ಕೋಟಿ ಮಂಜೂರಾಗಿದ್ದು, ಅದರಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದೆ. ರೆವಗ್ಗಿ ರೇವಣಸಿದ್ದೇಶ್ವರ ರಟಕಲ್‌ದೇವಾಸ್ಥಾನದ ಬಳಿ ಶೌಚಾಲಯ ಹಾಗೂ ರಸ್ತೆ ನಿರ್ಮಾಣ ಹಾಗೂ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮೊದಲನೇಯ ಮಹಡಿಯಲ್ಲಿನ ಸಭಾಂಗಣ ನಿರ್ಮಾಣಕ್ಕೆ 53 ಲಕ್ಷ ರೂ. ಬಿಡುಗಡೆಯಾಗಿದೆ.
ಅಲ್ಲದೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು. ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ಸೋಮಶೇಖರ ಪಾಟೀಲ, ಚಂದ್ರಶೇಖರ ಕಾಶಿ ಇದ್ದರು.