ಬೆಂಗಳೂರು: “ರಾಜ್ಯದ ಅಭಿವೃದ್ಧಿ ಬಗ್ಗೆ ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಕಾಳಜಿ ಇರುತ್ತದೆ. ಹಾಗಾಗಿ ಕಾಮಗಾರಿ ಗಳಲ್ಲಿ ರಾಜ್ಯದವರಿಗೆ ಹೆಚ್ಚು ಗುತ್ತಿಗೆ ಸಿಗುವಂತಾಗಲು ಕಾನೂನು ಚೌಕಟ್ಟಿ ನೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳ ಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಂಗಳವಾರ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ರಾಜ್ಯದ ಗುತ್ತಿಗೆ ಕಾಮಗಾರಿ ಗಳಲ್ಲಿ ನಮ್ಮವರಿಗೇ ಹೆಚ್ಚು ಸಿಗಬೇಕು ಅನ್ನುವುದು ಸಹಜ ಮತ್ತು ನ್ಯಾಯಯುತ ಬೇಡಿಕೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಪ್ಯಾಕೇಜ್ ಗುತ್ತಿಗೆ ಪದ್ದತಿ ಬಗ್ಗೆಯೂ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಆ ಬಗ್ಗೆಯೂ ಕಾನೂನು ರೀತಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡುವ ವೇಳೆ “ರಾಜ್ಯ ದಲ್ಲಿ ಹೊರ ರಾಜ್ಯದವರೇ ಹೆಚ್ಚು ಗುತ್ತಿಗೆ ಪಡೆದುಕೊಳ್ಳುತ್ತಿರುವುದರಿಂದ ನಮ್ಮವರಿಗೆ ಅನ್ಯಾಯವಾಗುತ್ತಿದೆ. ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅಪಾರ ಕಾಳಜಿ ಇರುವ ಮುಖ್ಯಮಂತ್ರಿಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾನು ಗಮನಿಸಿದಂತೆ ಹೊರ ರಾಜ್ಯದವರು ಗುತ್ತಿಗೆ ಪಡೆದುಕೊಂಡು ನಮ್ಮವರಿಗೆ ಉಪಗುತ್ತಿಗೆ ನೀಡುತ್ತಾರೆ. ಇದರಿಂದ ಹೊರರಾಜ್ಯ ದವರಿಗೆ ಹೆಚ್ಚು ಲಾಭ ಸಿಗುತ್ತದೆ. ನಮ್ಮ ರಾಜ್ಯದವರಿಗೆ ಹೆಚ್ಚು ಗುತ್ತಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಕಾನೂನು ರೀತಿ ಪರಿಶೀಲನೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.
ದೇಶ ಕಟ್ಟುವ ಪ್ರಕ್ರಿಯೆ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಗುತ್ತಿಗೆದಾರರ ಪಾತ್ರ ಮಹತ್ವದ್ದಾಗಿದೆ. ಸರ್ಕಾರದಿಂದ ಮಾತ್ರ ಎಲ್ಲವನ್ನೂ ಮಾಡಲಿಕ್ಕಾಗುವುದಿಲ್ಲ. ಸರ್ಕಾರ ಯೋಜನೆ ರೂಪಿಸಿ, ಅದಕ್ಕೆ ಹಣ ಕೊಡು ತ್ತದೆ. ಆ ಯೋಜನೆಯನ್ನು ಕಾರ್ಯಗತಗೊಳಿ ಸುವ ಜವಾಬ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲಿರುತ್ತದೆ ಎಂದರು. ಎಲ್ಲ ಗುತ್ತಿಗೆದಾರರು ಕೆಟ್ಟವರು ಎಂದು ಹೇಳುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಗುತ್ತಿಗೆ ವೃತ್ತಿಯಲ್ಲೂ ಕೆಟ್ಟವರು ಇರಬಹುದು. ಕಾಮಗಾರಿಗಳಿಗೆ ಸರ್ಕಾರ ನೀಡುವ ಹಣ ಜನರ ಹಣ. ಹಾಗಾಗಿ, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಗಂತ ನಷ್ಟ ಮಾಡಿಕೊಳ್ಳಿ ಎಂದು ನಾನು ಹೇಳಲ್ಲ. ಮಾಡಿದ ಕೆಲಸಕ್ಕೆ ನ್ಯಾಯ ಯುತ ಲಾಭ ಪಡೆದುಕೊಳ್ಳಿ. ನೀವು ನ್ಯಾಯಯುತವಾಗಿದ್ದರೆ, ಸರ್ಕಾರವೂ ನಿಮ್ಮೊಂದಿಗೆ ಅದೇ ರೀತಿ ಸ್ಪಂದಿಸುತ್ತದೆ ಎಂದು ಸಿದ್ದರಾಮಯ್ಯ ಗುತ್ತಿಗೆದಾರರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ರಾಜ್ಯ ಗುತ್ತಿಗೆ
ದಾರರ ಸಂಘದ ಅಧ್ಯಕ್ಷ ಬಿ.ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆಂಪಣ್ಣ ಮತ್ತಿತರರು ಇದ್ದರು.
ಶೇ.12ರಷ್ಟು ಜಿಎಸ್‌ಟಿ ಇರುವುದರಿಂದ ಗುತ್ತಿಗೆದಾರರಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಸಂಘದವರು ಹೇಳಿದ್ದಾರೆ. ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತರುತ್ತೇನೆ. ಉಳಿದಂತೆ 18ಕ್ಕೂ ಹೆಚ್ಚು ಪ್ರಮುಖ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗಿದೆ. ಇವುಗಳ ಬಗ್ಗೆ ಸಂಘದ ಪದಾಧಿಕಾರಿಗಳ ಸಭೆ ಕರೆದು, ಕಾನೂನಿನ ಇತಿಮಿತಿಯೊಳಗೆ ಕ್ರಮ ಕೈಗೊಳ್ಳುಲಾಗುವುದು.
●ಸಿದ್ದರಾಮಯ್ಯ, ಮುಖ್ಯಮಂತ್ರಿ