ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಕಾರ್ಮಿಕನೊಬ್ಬ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಜೆಸಿಬಿ ಢಿಕ್ಕಿ ಹೊಡೆದು ಗಾಯಗೊಂಡು, ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜರುಗಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಶವ ಇರಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೃತನನ್ನು ವಿಜಯಪುರ ಮೂಲದ ರಮೇಶ ಉಳ್ಳಾಗಡ್ಡಿ (38) ಎಂದು ಗುರುತಿಸಲಾಗಿದೆ.
ಕೂಡಗಿ ಎನ್.ಟಿ.ಪಿ.ಸಿ. ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಗುತ್ತಿಗೆ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಮೃತನ ಸಂಬಂಧಿಕರು, ಗುತ್ತಿಗೆ ಕಾರ್ಮಿಕರು ಎನ್.ಟಿ.ಪಿ.ಸಿ ಘಟಕದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಳಗಾವಿ, ಬಸವಕಲ್ಯಾಣ ಉಪಚುನಾವಣೆ: ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ ಕಾಂಗ್ರೆಸ್
ಎನ್.ಟಿ.ಪಿ.ಸಿ. ಘಟಕದಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ಸಾಯಿ ಉರ್ಜಾ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ರಮೇಶ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ದ್ವಿಚಕ್ರ ವಾಹನದಲ್ಲಿ ಹೋಗುವ ವೇಳೆ ಎನ್.ಟಿ.ಪಿ.ಸಿ. ಘಟಕದಲ್ಲಿ ಕೆಲಸ ನಡಸಿದ್ದ ಜೆಸಿಬಿ ಕಾರ್ಮಿಕನ ನಿರ್ಲಕ್ಷದಿಂದ ರಮೇಶ ಹೊರಟಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿ, ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಮೇಶ ಮೃತಪಟ್ಟಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೂಡಗಿ ಎನ್ ಟಿ ಪಿಸಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.