ಮಂಡ್ಯ: ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು ಸಂಯೋಜಿತ) ಮಂಡ್ಯ ತಾಲೂಕು ಘಟಕ ಸದಸ್ಯರು ಸೋಮವಾರ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ನಗರದ ಜಿಪಂಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಾರ್ಮಿಕ ಇಲಾಖೆ ನಿಗದಿ ಪಡಿಸಿರುವಂತೆ ಬಿಲ್ ಕಲೆಕ್ಟರ್, ಗುಮಾಸ್ತ, ಕಂಪ್ಯೂ ಟರ್ ಆಪರೇಟರ್‌ಗಳಿಗೆ 13,815 ರೂ., ಪಂಪ್ ಆಪರೇಟರ್‌ಗೆ 12,281 ರೂ., ಜವಾನರಿಗೆ 11, 703 ರೂ., ಸ್ವತ್ಛತಾಗಾರರಿಗೆ 14,563 ರೂ. ವೇತನ ನೀಡಬೇಕು. ಹಳೆಯ ವೇತನ ತೆರಿಗೆ ಸಂಗ್ರಹದಲ್ಲಿ 14 ಹಾಗೂ 15ನೇ ಹಣಕಾಸು ಆಯೋಗದ ಹಣದಲ್ಲಿ ಬಾಕಿ ಪಾವತಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ ನೇಮಕಾತಿ ತಡೆಯಿರಿ: ಇಎಫ್ಎಂಎಸ್ ಬಾಕಿ ಉಳಿದ ಕಸಗೂಡಿಸುವ ಮತ್ತು ಪಂಪ್ ಆಪ ರೇಟರ್ ಹಾಗೂ ಇತರೆ ಸಿಬ್ಬಂದಿಯನ್ನು ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡಿಕೊಳ್ಳಬೇಕು. ಸೇವಾ ಪುಸ್ತಕ ತೆರೆಯಬೇಕು. ಪಂಪ್ ಆಪರೇಟರ್‌ಗಳಿಂದ ಕರ ವಸೂಲಿಗಾರರ ಹುದ್ದೆಗೆ ಬಡ್ತಿ ನೀಡಬೇಕು. ಸರ್ಕಾರದ ಆದೇಶದಂತೆ ಅನುಕಂಪದ ನೇಮಕಾತಿ ಮಾಡಲು ನಿರ್ದೇಶನ ನೀಡಬೇಕು. ಹೊಸದಾಗಿ ಕಾನೂನು ಬಾಹಿರವಾಗಿ ಅಕ್ರಮ ನೇಮಕಾತಿ ಮಾಡಿಕೊಳ್ಳುವುದನ್ನು ತಡೆಯಬೇಕು. ಈಗಾಗಲೇ ನೇಮಕ ಮಾಡಿಕೊಂಡವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ನೇಮಕಾತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಬ್ಬಂದಿಗೆ ಪಿಂಚಣಿ ನೀಡಿ: ಬಿಲ್ ಕಲೆಕ್ಟರ್‌ರಿಂದ ಗ್ರೇಡ್-2ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. ಸರ್ಕಾರದ ಆದೇಶ ಜಾರಿ ಮಾಡದ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳ ಬೇಕು. ಪಂಪ್ ಆಪರೇಟರ್ ಅರ್ಧ ಸಂಬಳ ನೀಡುವ ನೌಕರ ವಿರೋಧಿ ನೀತಿ ಕೈಬಿಡಬೇಕು. ಎಲ್ಲ ಸಿಬ್ಬಂದಿಗಳ ವೇತನಕ್ಕೆ ಕೊರತೆ ಇರುವ 382 ಕೋಟಿ ರೂ. ಹಣವನ್ನು ಬೇರೆ ಬೇರೆ ಯೋಜನೆಯಿಂದ ಕ್ರೋಢೀಕರಿಸಿ ಮಂಜೂರು ಮಾಡಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕು. ಅವರ ಹಿಂದಿನ ಸೇವೆಯನ್ನು ಪರಿಗಣಿಸಬೇಕು. ಎಲ್ಲ ಸಿಬ್ಬಂದಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿದಿನ ಒಂದು ತಾಲೂಕು ಘಟಕದವರು ಪ್ರತಿಭಟನೆ ನಡೆಸಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮೊದೂರು ನಾಗರಾಜು ತಿಳಿಸಿದರು.
ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ. ಎಂ.ಶಿವಕುಮಾರ್, ಖಜಾಂಚಿ ಬಸವರಾಜು, ಜಿ. ಆರ್. ರಾಮು, ಆನಂದ್, ಬಸವರಾಜು ನಾಗ ಮಂಗಲ, ಶಿವಕುಮಾರ್ ಕೆ.ಆರ್.ಪೇಟೆ, ರಾಜಣ್ಣ, ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.