Advertisement

ಬಿಜೆಪಿ ಬೂತ್‌ ಮಟ್ಟದ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಿ

12:07 PM Mar 17, 2018 | Team Udayavani |

ತಿ.ನರಸೀಪುರ: ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅಧಿಕಾರ ನೀಡುವಂತಹ ಸಂಪ್ರದಾಯವಿರುವುದರಿಂದ ಬೂತ್‌ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮೂಲಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕೆಂದು ಚುನಾವಣಾ ವೀಕ್ಷಕ ಹಾಗೂ ಉತ್ತರ ಪ್ರದೇಶದ ಸಂಸದ ಡಾ.ರಾಮ್‌ಶಂಕರ್‌ ಕಢೇರಿಯಾ ಕರೆ ನೀಡಿದರು.

Advertisement

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿದ್ದುಕೊಂಡೇ ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದಾರೆ. ಸಂಘಟನೆಗೆ ದುಡಿದಂತಹ ಹಲವರು ಸಚಿವರಾಗಿರುವುದರಿಂದ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕಾರ್ಯಕರ್ತರೇ ಅಧಿಕಾರವನ್ನು ಅನುಭವಿಸಲು ಮುಕ್ತ ಅವಕಾಶವಿದೆ ಎಂದರು.

ಸರ್ಕಾರದ ವೈಫ‌ಲ್ಯ ತಿಳಿಸಿ: ರಾಜ್ಯ ವಿಧಾನಸಭೆಗೆ ಚುನಾವಣೆ ಸನಿಹವಾಗುತ್ತಿದ್ದು, ಬೂತ್‌ ಮಟ್ಟದಲ್ಲಿ ಚುನಾವಣ ರಣನೀತಿ ಅನುಷ್ಠಾನವಾಗಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್‌ ಸರ್ಕಾರದ ವೈಫ‌ಲ್ಯತೆಗಳನ್ನು ಕೂಡ ತಿಳಿಸಬೇಕು. ಬಿಜೆಪಿಗೆ ಮತ ಹಾಕುವಂತೆ ಸಾಮಾನ್ಯ ಜನರ ಮನವೊಲಿಸಿ ಸರ್ಕಾರವನ್ನು ರಚಿಸಲು ಬಹುಮತವನ್ನು ತಂದುಕೊಡಬೇಕು ಎಂದು ಕಢೇರಿಯಾ ಸಲಹೆ ನೀಡಿದರು.

ಅಭ್ಯರ್ಥಿ ಗೆಲುವಿಗೆ ನಿಷ್ಠೆ: ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಕಾಲ ಸನ್ನಿಹಿತವಾಗುತ್ತಿದ್ದು, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಆಂತರಿಕ ಶಿಸ್ತಿಗೆ ಧಕ್ಕೆಯಾಗಬಾರದು. ಗೊಂದಲಕ್ಕೆ ಅವಕಾಶ ಮಾಡಿದರೆ ಒಗ್ಗಟ್ಟು ಹಾಳಾಗಲಿದೆ. ಆದ್ದರಿಂದ ವರಿಷ್ಠರು ಸೂಚಿಸುವ ಅಭ್ಯರ್ಥಿ ಗೆಲುವಿಗೆ ನಿಷ್ಠೆಯಿಂದ ದುಡಿಯಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಡಾ.ಎನ್‌.ಎಲ್‌.ಭಾರತೀ ಶಂಕರ್‌, ಸಿ.ರಮೇಶ, ಬಿಜೆಪಿ ವಿಭಾಗೀಯ ಸುರೇಶ್‌ಬಾಬು, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ರಾಮಕೃಷ್ಣಪ್ಪ, ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಅಭ್ಯರ್ಥಿ ಎಸ್‌.ಶಂಕರ್‌, ಜಿಪಂ ಮಾಜಿ ಸದಸ್ಯರಾದ ಪುಟ್ಟಬಸವಯ್ಯ, ಎಂ.ಸುಧಾ ಮಹದೇವಯ್ಯ, ಕೆ.ಸಿ.ಲೋಕೇಶ, ಶಶಿಕಲಾ ನಾಗರಾಜು, ಕ್ಷೇತ್ರಾಧ್ಯಕ್ಷ ಹೆಚ್‌.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎನ್‌.ಸುರೇಶ್‌,

Advertisement

ಡಾ.ಟಿ.ಎಸ್‌.ಮಲ್ಲಿಕಾರ್ಜುನ ಸ್ವಾಮಿ, ಕಲ್ಮಳ್ಳಿ ವಿಜಯಕುಮಾರ್‌, ಮೈಮುಲ್‌ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಟಿ.ಬೆಟ್ಟಹಳ್ಳಿ ನಂಜಮ್ಮಣ್ಣಿ, ವೀಣಾ ಶಿವಕುಮಾರ್‌, ಯುವ ಮೋರ್ಚಾ ಅಧ್ಯಕ್ಷ ಮಣಿಕಂಠರಾಜ್‌ಗೌಡ, ವಿಜಯಕುಮಾರ್‌, ಹಿಂ.ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಮುಖಂಡರಾದ ಎನ್‌.ಎಂ.ರಾಮಚಂದ್ರ, ಎಸ್‌.ದಿಲೀಪ, ಚೌಹಳ್ಳಿ ಸಿದ್ದರಾಜು, ಕುಪ್ಪೆಗಾಲ ಶಿವಬಸಪ್ಪ, ಹೆಗ್ಗೂರು ರಂಗರಾಜು ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next