ಕಲಬುರಗಿ: ಮುಂಬೈನಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ ಮಂಗಳವಾರ ಬೆಳಗಿನ ಜಾವ 2:30ಕ್ಕೆ ನಗರಕ್ಕೆ 1,251 ಮಂದಿ ವಲಸಿಗರು ಬಂದಿಳಿದರು. ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಕಾರ್ಮಿಕರು ತವರು ಸೇರಿದರು.
ಲಾಕ್‌ಡೌನ್‌ನಲ್ಲಿ ಸಿಲುಕಿರುವ ರಾಜ್ಯದ ವಲಸಿಗರ ಕರೆ ತರಲು ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಸೋಮವಾರ ಥಾಣೆಯಿಂದ ಸಂಜೆ 4:30ಕ್ಕೆ ರೈಲು ಪ್ರಯಾಣ ಆರಂಭಿಸಿದ್ದ ರೈಲು ರಾತ್ರಿ 11:40ಕ್ಕೆ ಆಗಮಿಸಬೇಕಿತ್ತು. ಮೂರು ಗಂಟೆ ತಡವಾಗಿ ತಡರಾತ್ರಿ 2:30ಕ್ಕೆ ನಿಲ್ದಾಣಕ್ಕೆ ರೈಲು ತಲುಪಿತು. ರೈಲಿನಲ್ಲಿ ಆಗಮಿಸಿದ ವಲಸಿಗರನ್ನು ಸಂಸದ ಡಾ| ಉಮೇಶ ಜಾಧವ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ| ರಾಜಾ ಪಿ., ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು ಹಾಗೂ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಬರ ಮಾಡಿಕೊಂಡರು.
ಸಂಸದ ಜಾಧವ ವಲಸಿಗರನ್ನು ಕಿಟಕಿ ಮೂಲಕ ಕಂಡು ಯೋಗ-ಕ್ಷೇಮ ವಿಚಾರಿಸಿದರು. ದೂರದಿಂದ ಬಂದಿದ್ದ ಕಾರ್ಮಿಕರಿಗೆ ನಾವು-ನಿಮ್ಮೊಂದಿಗಿದ್ದದೇವೆಎಂದು ಆತ್ಮಸ್ಥೈರ್ಯ ತುಂಬಿದರು. ರೈಲಿನಲ್ಲಿ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಮೂರು ಜಿಲ್ಲೆಗಳ ವಲಸಿಗರು ಆಗಮಿಸಿದರು. ಜಿಲ್ಲೆಯ ಚಿತ್ತಾಪುರ ತಾಲೂಕಿನ ಅತ್ಯಧಿಕ 676 ಜನ ವಲಸಿಗರು ಬಂದರು. ಕಮಲಾಪುರ ತಾಲೂಕಿನ 26 ಮಂದಿ, ಸೇಡಂ ಮತ್ತು ಶಹಾಬಾದನ ತಲಾ 6 ಮಂದಿ, ಕಲಬುರಗಿ ತಾಲೂಕಿನ ಒಬ್ಬರು ತವರಿಗೆ ಬಂದರು. ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಜನರನ್ನೂ ಆಯಾ ಜಿಲ್ಲೆಗಳಿಗೆ ರವಾನಿಸಲಾಯಿತು. ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಯಾರನ್ನೂ ಕೆಳಗಿಳಿಸದಂತೆ ಒಬ್ಬೊಬ್ಬರನ್ನೇ ಸರದಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಲಾಯಿತು. ಬಳಿಕ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಎನ್‌ಇಕೆಆರ್‌ಟಿಸಿ) ಬಸ್ ಮೂಲಕ ಆಯಾ ತಾಲೂಕಿನಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಯಿತು.
ವಲಸಿಗರಿಗೆ ಊಟ: ಜಿಲ್ಲಾಡಳಿತದ ಆಹಾರ ಸಮಿತಿ ವತಿಯಿಂದ ವಲಸಿಗರಿಗಾಗಿ 1,500 ಊಟದ ಪೊಟ್ಟಣ, 1,500 ಲೀಟರ್ ನೀರಿನ ಬಾಟಲ್, ಮಜ್ಜಿಗೆ, ಬಿಸ್ಕತ್, ಗ್ಲುಕೋಸ್-ಡಿ ಮುಂತಾದವುಗಳನ್ನು ಪೂರೈಕೆ ಮಾಡಲಾಗಿತ್ತು ಎಂದು ಸಮಿತಿ ಅಧ್ಯಕ್ಷೆ ಪ್ರವೀಣಪ್ರಿಯಾ ಡೇವಿಡ್ ಹೇಳಿದರು.
ಇಂದು ಮತ್ತೂಂದು ರೈಲು : ಮುಂಬೈನಿಂದ ಶ್ರಮಿಕ ವಿಶೇಷ ರೈಲಿನಲ್ಲಿ ಮಂಗಳವಾರ ಬೆಳಗಿನ ಜಾವ ಕಲಬುರಗಿಗೆ 1,251 ಮಂದಿ ವಲಸಿಗರು ಆಗಮಿಸಿದ್ದು, ಮೇ 13ರಂದು ಸಹ ಇನ್ನೊಂದು ಶ್ರಮಿಕ ವಿಶೇಷ ರೈಲು ಮುಂಬೈನಿಂದ ವಲಸಿಗರನ್ನು ಹೊತ್ತು ತರಲಿದೆ ಎಂದು ತಿಳಿಸಿದ್ದಾರೆ.
7,700 ಜನರ ನೋಂದಣಿ : ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಪ್ರಯಾಣಿಸಲು ಸೇವಾ ಸಿಂಧು ಆ್ಯಪ್‌ನಲ್ಲಿ ಇದುವರೆಗೆ ಜಿಲ್ಲೆಯಲ್ಲಿ 7,700 ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಮುಂಬೈನಿಂದ ರೈಲಿನಲ್ಲಿ ಬಂದವರ ಪೈಕಿ ಕೇವಲ 8 ಜನರು ನೋಂದಾಯಿಸಿಕೊಂಡಿದ್ದರು. ಹೊರರಾಜ್ಯದಿಂದ ಯಾರೇ ಬರಲಿ, ಆಯಾ ತಾಲೂಕಿನ ಕ್ವಾರಂಟೈನ್ ಸೆಂಟರ್‌ನಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಡಿಸಿ ಶರತ್ ಬಿ. ತಿಳಿಸಿದ್ದಾರೆ.