ಬೆಂಗಳೂರು: ಇತ್ತೀಚೆಗೆ ಬೆಟ್ಟದಾಸನಪುರ ಸಮೀಪದ ಪ್ರಭಾಕರ್ ರೆಡ್ಡಿ ಲೇಔಟ್‌ನ ಮನೆಯಲ್ಲಿ ಒಂಟಿಯಾಗಿದ್ದ ನೀಲಂ ಎಂಬಾಕೆಯನ್ನು ಕೊಲೆಗೈದಿದ್ದ “ಕೆಲಸಗಾರ’ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಜನೀಶ್ ಕುಮಾರ್(28) ಬಂಧಿತ. ಆರೋಪಿ ಜ.4ರಂದು ತನ್ನ ಮಾಲೀಕ ಪ್ರದ್ಯುನ್ಮ ಎಂಬುವರ ಪತ್ನಿ ನೀಲಂ(30) ಎಂಬಾಕೆಯನ್ನು ಕುತ್ತಿಗೆ ಬಿಗಿದು ಕೊಲೆಗೈದು, 8 ಸಾವಿರ ರೂ. ನಗದು, ಕಿವಿಯೊಲೆ ದೋಚಿ ಪರಾರಿಯಾಗಿದ್ದ. ಅದೇ ದಿನ ಸಂಜೆ ನೀಲಂ ಮಗ ಶಾಲೆಯಿಂದ ಮನೆಗೆ ಬಂದಾಗ ಕೊಲೆ ವಿಚಾರ ಹೊತ್ತಾಗಿದೆ. ಆರೋಪಿ ಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಉತ್ತರ ಪ್ರದೇಶದ ಅಮರ ಗ್ರಾಮದ ನಿವಾಸಿ ರಜನೀಶ್ ಕುಮಾರ್ 5 ವರ್ಷಗಳ ಹಿಂದೆ ಬೆಂಗ ಳೂರಿಗೆ ಬಂದಿದ್ದು, ಪೇಂಟಿಂಗ್ ಕೆಲಸ ಮಾಡು ತ್ತಿದ್ದ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇದೇ ವೇಳೆ 2 ವರ್ಷದಿಂದ ಪ್ರಭಾಕರ್ ರೆಡ್ಡಿ ಲೇಔಟ್‌ನಲ್ಲಿ ವಾಸವಾಗಿದ್ದ ತಮ್ಮ ಊರಿನವರಾದ ಪೇಂಟಿಂಗ್ ಗುತ್ತಿಗೆದಾರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಾರ್ಡ್‌ವೇರ್ ಶಾಪ್ ಹೊಂದಿರುವ ಪ್ರದ್ಯುನ್ಮ ಎಂಬಾತನ ಪರಿಚಯವಾಗಿತ್ತು. ಹೀಗಾಗಿ ಕುಟುಂಬ ಸದಸ್ಯರಿಗೂ ಆರೋಪಿ ಪರಿಚಯಸ್ಥನಾಗಿದ್ದಾನೆ.
ಹಾರ್ಡ್‌ವೇರ್ ಶಾಪ್ ಅನ್ನು ಕೊಲೆಯಾದ ನೀಲಂ ಸಹೋದರ ಪಂಕಜ್ ನೋಡಿಕೊಳ್ಳುತ್ತಿದ್ದು, ಜತೆಗೆ ಪ್ರತಿಷ್ಠಿತ ಪೇಂಟ್ ಕಂಪನಿಯ ಡೀಲರ್ ಕೂಡ ಆಗಿದ್ದರು. ಹೀಗಾಗಿ ಗ್ರಾಹಕರ ಬೇಡಿಕೆಯಂತೆ ಹೆಚ್ಚಿನ ಪೇಂಟ್ ಬಾಕ್ಸ್‌ಗಳನ್ನು ಡೆಲಿವರಿಗೆ ಪಂಕಜ್ ಹೋಗುತ್ತಿದ್ದರು. ಆಗ ಆರೋಪಿಯೇ ಹಾರ್ಡ್‌ವೇರ್ ಶಾಪ್ ನೋಡಿಕೊಳ್ಳುತ್ತಿದ್ದ. ಈ ವೇಳೆ ಶಾಪ್‌ನಲ್ಲಿ ನಡೆಯುವ ಲಕ್ಷಾಂತರ ರೂ. ವ್ಯವಹಾರದ ಬಗ್ಗೆ ತಿಳಿದುಕೊಂಡು, ಮನೆಯಲ್ಲೂ ಭಾರೀ ಪ್ರಮಾಣದಲ್ಲಿ ನಗದು, ಚಿನ್ನಾಭರಣ ಇಟ್ಟಿರುತ್ತಾರೆ ಎಂದು ಭಾವಿಸಿ, ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಟವೆಲ್‌ನಲ್ಲಿ ಕುತ್ತಿಗೆ ಬಿಗಿದು ಕೊಲೆ: ಆರೋಪಿ ಕೊಲೆಗೂ ಮೊದಲ ನಾಲ್ಕೈದು ದಿನಗಳ ಕಾಲ ಪ್ರದ್ಯುನ್ಮನ ಮನೆ ಬಳಿ ಬಂದು ಯಾವ ಭಾಗದಲ್ಲಿ ಸಿಸಿ ಕ್ಯಾಮೆರಾಗಳಿವೆ, ಯಾವ ಮಾರ್ಗದಲ್ಲಿ ಬರಬೇಕು, ಮಾಲೀಕ ಯಾವ ವೇಳೆಯಲ್ಲಿ ಮನೆಯಲ್ಲಿ ಇರುತ್ತಾರೆ ಎಂಬೆಲ್ಲ ಮಾಹಿತಿ ತಿಳಿದುಕೊಂಡಿದ್ದ. ಆ ಬಳಿಕ ಜ.4ರಂದು ಅಪರಾಹ್ನ 12 ಗಂಟೆ ಸುಮಾರಿಗೆ ಮನೆಗೆ ಬಂದ ಆರೋಪಿಯನ್ನು ನೀಲಂ, ಅವರೇ ಒಳಗೆ ಕರೆದಿದ್ದಾರೆ. ಬಳಿಕ ಊಟ ಮಾಡಿದ್ದಿಯಾ? ಎಂದ ನೀಲಂ ಪ್ರಶ್ನೆಗೆ, ಆರೋಪಿ ಇಲ್ಲ ಎಂದಿದ್ದಾನೆ. ಆದರಿಂದ ಆಕೆ ಊಟ ತರಲು ಅಡುಗೆ ಮನೆಗೆ ಹೋದಾಗ, ಹಿಂದಿನಿಂದ ಬಂದು ಟವೆಲ್‌ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಕಬೋರ್ಡ್‌ನಲ್ಲಿದ್ದ 8 ಸಾವಿರ ರೂ. ದೋಚಿದ್ದಾನೆ. ಆದರೆ, ನಿರೀಕ್ಷಿಸಿದಷ್ಟು ಹಣ ಸಿಗದಿದ್ದಾಗ ಮೃತದೇಹದ ಮೈಮೇಲಿದ್ದ ಕಿವಿಯೊಳೆ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.