Advertisement

ಸ್ಥಳೀಯರಿಗೆ ಟಿಕೆಟ್‌ ಕೊಟ್ರೆ ಒಗ್ಗಟ್ಟಿನಿಂದ ಕೆಲಸ

06:39 PM Sep 27, 2022 | Team Udayavani |

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಅನ್ನು ಸ್ಥಳೀಯರಿಗೇ ನೀಡಬೇಕು. ಹೊರಗಿನಿಂದ ಬಂದವರಿಗೆ ನೀಡಬಾ ರದು. ನಮ್ಮಲ್ಲಿ ಯಾರಿಗೇ ಕೊಟ್ಟರೂ ಅವರ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮಲ್ಲೇಶ್‌, ನಿಜಗುಣರಾಜು, ಎಂ. ರಾಮಚಂದ್ರ, ಡಾ. ಎ.ಆರ್‌. ಬಾಬು ಹೇಳಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಭೂಸೇನಾ ನಿಗಮದ ಅಧ್ಯಕ್ಷ ರುದ್ರೇಶ್‌ ಅವರು ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿ ಆಕಾಂಕ್ಷಿ ಎಂದು ಹೇಳಿಕೆ ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರ ಬಳಿ ಇಂತಹ ಹೇಳಿಕೆ ನೀಡುತ್ತಿರುವುದು ಖಂಡನೀ ಯ ಈ ಸಂಬಂಧ ಪಕ್ಷದ ವರಿಷ್ಠರನ್ನು ಭೇಟಿಯಾಗಿ ದೂರು ನೀಡಲಾಗುವುದು ಎಂದರು.

ಸ್ಥಳೀಯವಾಗಿ ಟಿಕೆಟ್‌ ನೀಡಿ: ಸ್ಥಳೀಯವಾಗಿ 6-7 ಆಕಾಂಕ್ಷಿಗಳಿದ್ದು ಇವರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಶಾಸಕರು ಸ್ಥಳೀಯರಿದ್ದರೆ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ರುದ್ರೇಶ್‌ ಅವರು ರಾಮನಗರದವರಾಗಿದ್ದು ಆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ. ಹಣ ಬಲದಿಂದ ಸ್ಪರ್ಧಿಸಿ ಗೆಲ್ಲುತ್ತೇನೆ ಎಂಬ ಮನಸ್ಥಿತಿ ಇದ್ದರೆ ಅದನ್ನು ಬಿಡಬೇಕು ಎಂದರು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭೇಟಿಯಾಗಿ ರುದ್ರೇಶ್‌ ವಿರುದ್ಧ ಶಿಸು ¤ಕ್ರಮಕ್ಕೆ ಆಗ್ರಹಿಸಲಾಗುವುದು. ರುದ್ರೇಶ್‌ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಅವರನ್ನು ನಿಗಮ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಹೇಳಿದರು.

ರುದ್ರೇಶ್‌ ವಿರುದ್ಧ ಕ್ರಮ ಜರುಗಿಸಬೇಕು: ಕಾಡಾ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ರುದ್ರೇಶ್‌ ಕಳೆದ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ. ಠೇವಣಿ ಉಳಿಸಿಕೊಂಡು ಆ ನಂತರ ಬೇರೆ ಕ್ಷೇತ್ರಗಳಿಗೆ ಹೋಗಿ ಸ್ಪರ್ಧಿಸಲಿ. ಈ ಸಂಬಂಧ ಈಗಾಗಲೇ ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದು ಕೂಡಲೇ ಪಕ್ಷದ ವರಿಷ್ಠರು ರುದ್ರೇಶ್‌ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಯಾರೋ ಎಲ್ಲಿಗೋ ಬಂದು ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಪಕ್ಷದ ಮುಖಂಡರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಬೇಕು. ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರನ್ನು ಭೇಟಿಯಾಗಬೇಕು. ಪಕ್ಷದ ಸಂಘಟನೆ ಬಗ್ಗೆ ಚರ್ಚಿಸಬೇಕು ಎಂದರು.

Advertisement

ಆಯಿಷ್‌ ಆಡಳಿತ ಮಂಡಳಿ ಸದಸ್ಯ ಡಾ. ಎ.ಆರ್‌. ಬಾಬು ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡಿದ್ದೇವೆ. ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದೇವೆ. ನಮ್ಮಲ್ಲಿ ಯಾರಿಗೇ ಟಿಕೆಟ್‌ ಕೊಟ್ಟರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಸಿ.ಎನ್‌.ಬಾಲರಾಜ್‌ ಇದ್ದರು.

ಸಭೆಗೆ ಮಲ್ಲಿಕಾರ್ಜುನಪ್ಪ, ನಾಗಶ್ರೀ ಗೈರು ಸೋಮವಾರ, ನಗರದಲ್ಲಿ ಬಿಜೆಪಿಯ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳು ಕರೆದಿದ್ದ ಸುದ್ದಿಗೋಷ್ಠಿಯ ಆಹ್ವಾನದಲ್ಲಿ ಮುಖಂಡರಾದ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ ಹಾಗೂ ನಾಗಶ್ರೀ ಪ್ರತಾಪ್‌ ಅವರ ಹೆಸರಿತ್ತು. ಆದರೆ ಅವರಿಬ್ಬರೂ ಗೈರು ಹಾಜರಾಗಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ಇಬ್ಬರೂ ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಇಬ್ಬರೂ ಊರಿನಲ್ಲಿಲ್ಲ. ಹಾಗಾಗಿ ಬಂದಿಲ್ಲ. ಸುದ್ದಿಗೋಷ್ಠಿಗೆ ತಮ್ಮ ಸಹಮತವಿದೆ ಎಂದು ತಿಳಿಸಿದ್ದಾರೆ ಎಂದು ನಿಜಗುಣರಾಜು ಹೇಳಿದರು.

ಈಗ ಹೊರಗಿನವರಿಗೆ ಟಿಕೆಟ್‌ ನೀಡುತ್ತಾರೆಂದು ಒಂದಾಗಿದ್ದೇವೆ ಎನ್ನುತ್ತಿದ್ದೀರಿ. ನಾಳೆ ನಿಮ್ಮಲ್ಲೇ ಒಬ್ಬರಿಗೆ ಟಿಕೆಟ್‌ ನೀಡಿದರೂ ನೀವು ಅವರ ಪರವಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪಗಳಿವೆಯಲ್ಲ? ಎಂದು ಪ್ರಶ್ನಿಸಿದಾಗ, ಪ್ರತಿ ಚುನಾವಣೆಯಲ್ಲೂ ನಾವು ಪಕ್ಷದ ಅಭ್ಯರ್ಥಿಯ ಪರವಾಗಿ ನಮ್ಮ ಹಣ ಹಾಕಿಕೊಂಡು ಕೆಲಸ ಮಾಡಿದ್ದೇವೆ ಎಂದು ಮಲ್ಲೇಶ್‌ ಹೇಳಿದರು. ಜನರು ಬದಲಾವಣೆ ಬಯಸಿದ್ದಾರೆ: ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಜನರ ಸಮಸ್ಯೆಗೆ ಸ್ಪಂದನೆಯಿಲ್ಲ ಎಂಬ ನೋವಿದೆ. ಹಾಗಾಗಿ ಈ ಬಾರಿ ಬದಲಾವಣೆ ಬಯಸಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಜನರಿಗೆ ತಿಳಿಸುವುದಕ್ಕಾಗೇ ಈ ಸುದ್ದಿಗೋಷ್ಠಿ ಕರೆದಿದ್ದೇವೆ ಎಂದು ಕಾಡಾ ಅಧ್ಯಕ್ಷ ನಿಜಗುಣರಾಜು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next