Advertisement

ಪಡೆಯುವ ಸಂಬಳಕ್ಕೆ ನಿಯತ್ತಾಗಿ ಕೆಲಸ ಮಾಡಿ

06:00 AM Jun 25, 2018 | Team Udayavani |

ಬೆಂಗಳೂರು : ಸರ್ಕಾರಿ ಶಾಲಾ -ಕಾಲೇಜುಗಳ ಶಿಕ್ಷಕರು-ಉಪನ್ಯಾಸಕರು ಹಾಗೂ  ಪ್ರಾಂಶುಪಾಲರು ರಾಜಕೀಯ ನಾಯಕರ ಹಾಗೂ ಜನಪ್ರತಿನಿಧಿಗಳ ಹಿಂದೆಯೇ ಸುತ್ತುವುದನ್ನು ಬಿಟ್ಟು, ಸರ್ಕಾರ ನೀಡುವ ವೇತನಕ್ಕೆ ಸರಿಯಾಗಿ ಕೆಲಸ ಮಾಡಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಾಕೀತು ಮಾಡಿದ್ದಾರೆ.

Advertisement

ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘ(ಕೆಜಿಸಿಟಿಎ), ಅಖೀಲ ಭಾರತ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರ ಸಂಘಗಳ ಒಕ್ಕೂಟದಿಂದ (ಎಐಎಫ್‌ಯುಸಿಟಿಒ)ಭಾನುವಾರ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್‌ ಸದಸ್ಯರ ಹಿಂದೆಯೇ ಶಿಕ್ಷಕರು- ಉಪನ್ಯಾಸಕರು ಹಾಗೂ ಪ್ರಾಂಶುಪಾಲರು  ಸದಾ ಸುತ್ತುತ್ತಿರುತ್ತಾರೆ. ಇದು ಸರಿಯಲ್ಲ. ಗುರುಗಳ ಬಗ್ಗೆ ಜನ ಸಾಮಾನ್ಯರಿಗೆ ಸಾಕಷ್ಟು ಗೌರವ ಇದ್ದು, ಅದನ್ನು ಉಳಿಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅತಿ ದೊಡ್ಡ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಎಂದು ಸಲಹೆ ನೀಡಿದರು.

ನಿಮಗೆ ಶಿಕ್ಷಣ ಕಲಿಸಿದ ಉಪಾಧ್ಯಾಯರಿಗೆ ನಿಮ್ಮನ್ನು ಹೋಲಿಸಿಕೊಳ್ಳಿ, ಯಾವುದೇ ಸೌಲಭ್ಯ ಇಲ್ಲದ ಸಂದರ್ಭ ಹಾಗೂ ಎಲ್ಲ ವ್ಯವಸ್ಥೆ  ಇರುವ ಈಗಿನ ಪರಿಸ್ಥಿತಿಯನ್ನು ನಿಮ್ಮೊಳಗೆ ಅವಲೋಕಿಸಿಕೊಳ್ಳಿ. ಈಗಿನ  ಶಿಕ್ಷಣ ವ್ಯವಸ್ಥೆಗೆ ನಿಮ್ಮ ಕೊಡುಗೆ ಮತ್ತು ಅಂದು ನಿಮ್ಮ ಗುರುಗಳು ನೀಡಿದ ಕೊಡುಗೆಯನ್ನು ತುಲನಾತ್ಮಕವಾಗಿ ಆತ್ಮಾವಲೋಕಿಸಿಕೊಳ್ಳಿ ಎಂದು ಸೂಕ್ಷ್ಮವಾಗಿ ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಹಾಗೂ ಸರ್ಕಾರಿ ಕಾಲೇಜಿನ ಉಪನ್ಯಾಸಕರ ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಖಾಸಗಿ ಸಂಸ್ಥೆಗಳು ನೀಡುವ ಕಡಿಮೆ ವೇತನಕ್ಕೆ ಉಪನ್ಯಾಸಕರು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಿ, ಆ ಕಾಲೇಜು  ಪ್ರಥಮ ಸ್ಥಾನಕ್ಕೆ ತರುತ್ತಾರೆ. ಆದರೆ, ಸರ್ಕಾರದಿಂದ ಎಲ್ಲ ಸೌಲಭ್ಯ ಪಡೆಯುವ ಉಪನ್ಯಾಸಕರಿಗೆ ಸರ್ಕಾರಿ ಕಾಲೇಜು ನಂಬರ್‌ ಒನ್‌ ಸ್ಥಾನಕ್ಕೆ ತರಲು ಸಾಧ್ಯವಾಗುವುದಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ವೇತನ ಉಪನ್ಯಾಸಕರ ಊಟಕ್ಕೂ ಸಾಲಲ್ಲ. ಹೀಗಿದ್ದರೂ ಸರ್ಕಾರಿ ಕಾಲೇಜುಗಳನ್ನು ಮೀರಿದ ಫ‌ಲಿತಾಂಶ ಪಡೆಯುತ್ತಾರೆ.  ಅವರಿಗೆ ನಿವೃತ್ತಿ ನಂತರ ಬಿಡಿಗಾಸು ಸಿಗುವುದಿಲ್ಲ, ಆದರೆ ಸರ್ಕಾರಿ ಶಾಲಾ ಕಾಲೇಜಿನ ಶಿಕ್ಷಕ, ಉಪನ್ಯಾಸಕರಿಗೆ ಸಾಯುವವರೆಗೂ ಪಿಂಚಣಿ ಬರುತ್ತದೆ. ಆದರೆ, ಫ‌ಲಿತಾಂಶದಲ್ಲಿ ನಾವು ತಲೆತಗ್ಗಿಸಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಸಹಕಾರಿಯಾಗುವಂತೆ ವಿವಿಗಳಲ್ಲಿ ಉಪನ್ಯಾಸಕರನ್ನು, ಕುಲಪತಿಗಳನ್ನು ನೇಮಕ ಮಾಡಲಾಗಿದೆ. ಆದರೆ, ವಿಶ್ವವಿದ್ಯಾಲಯಗಳ ಸದ್ಯದ ಪರಿಸ್ಥಿತಿ ವಿಭಿನ್ನವಾಗಿದೆ.  ಉಪನ್ಯಾಸಕ, ಪ್ರಾಧ್ಯಾಪಕರ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಸರ್ಕಾರಿ ಶಾಲಾ ಕಾಲೇಜಿನ ಶಿಕ್ಷಕ, ಉಪನ್ಯಾಸಕರು ವಿದ್ಯಾರ್ಥಿಗಳ ಫ‌ಲಿತಾಂಶದಲ್ಲಿ ತಮ್ಮ ಸಾಧನೆಯನ್ನು ತೋರಿಸಬೇಕು ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್‌.ಮಂಜುಳಾ, ಕೆಜಿಸಿಟಿಎಯ  ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್‌, ಜಂಟಿ ಕಾರ್ಯಾದರ್ಶಿ ಡಾ.ಸಿ.ಶೋಭಾ, ಎಫ್‌ಯುಸಿಟಿಎಕೆ ಅಧ್ಯಕ್ಷ ಡಾ.ಎನ್‌.ಬಿ.ಸಂಗಾಪುರ್‌, ಎಐಎಫ್‌ಯುಸಿಟಿಒ ಅಧ್ಯಕ್ಷ ಕೇಶವ್‌ ಭಟ್ಟಾಚಾರ್ಯ ಉಪಸ್ಥಿತರಿದ್ದರು.

ಉನ್ನತ ಶಿಕ್ಷಣ ಸಚಿವ ಇಂಗ್ಲಿಷ್‌ ಭಾಷಣ:
ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ಜಿ.ಟಿ.ದೇವೇಗೌಡ ಅವರು ತಮ್ಮ ಮೊದಲ ಸಭೆಯಲ್ಲಿ ಇಂಗ್ಲಿಷ್‌ನಲ್ಲೇ ಭಾಷಣ ಆರಂಭಿಸುವ ಮೂಲಕ ತಮಗೆ ಇಂಗ್ಲೀಷ್‌ ಬರದು ಎಂಬ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಪ್ರೌಢಶಾಲೆಯ ಮೆಟ್ಟಿಲೇರದ ನನಗೆ ಉನ್ನತ ಶಿಕ್ಷಣ ಇಲಾಖೆ ನೀಡಿದ್ದಾರೆ. ಐಎಎಸ್‌ ಅಧಿಕಾರಿಗಳು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ  ಎಂದು ಅನೇಕರು ಲೇವಡಿ ಮಾಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲೇ ಇದ್ದುಕೊಂಡು ಕಲಿಯುತ್ತೇನೆ. ಐಐಎಸ್‌ ಅಧಿಕಾರಿಗಳಿಗೂ ನಮ್ಮ ಬದುಕನ್ನು ತಿಳಿಸುತ್ತೇನೆ. ಉಪನ್ಯಾಸಕರಿಂದಲೂ ಕಲಿಯುತ್ತೇನೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೆ ಮಂತ್ರಿ ಮಾಡಿದ ಸಂದರ್ಭದಲ್ಲಿ ನನ್ನ ವಿದ್ಯಾಭ್ಯಾಸದ ಬಗ್ಗೆ ತಿಳಿಸಿದ್ದೆ. ನಾನು ರೈತರ ಜತೆಗಿರುವವನು, ರೈತರ ಸಮಸ್ಯೆ ಬಗೆಹರಿಸಲು ಕಂದಾಯ ಖಾತೆ ಕೊಡಿ ಎಂದಿದ್ದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಚ್‌.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉನ್ನತ ಶಿಕ್ಷಣ ಮಂತ್ರಿ ಮಾಡಿದ್ದಾರೆ. ಸಂತೋಷದಿಂದ ಇಲಾಖೆ ಜವಾಬ್ದಾರಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.

ಪದವಿ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ನಿಯಮ ತಿದ್ದುಪಡಿ ಮಾಡಲಿದ್ದೇವೆ. ಉಪನ್ಯಾಸಕರ ಸ್ನೇಹಿ ವರ್ಗಾವಣೆ ನೀತಿ ರೂಪಿಸಲಿದ್ದೇವೆ.
– ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ಸರ್ಕಾರಿ ಪದವಿ ಕಾಲೇಜಿನ ದಾಖಲಾತಿ ಪ್ರಮಾಣ ಹೆಚ್ಚುವ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಶೇ.44ರಷ್ಟು, ರಾಷ್ಟ್ರಮಟ್ಟದಲ್ಲಿ ಶೇ.26ರಷ್ಟಿದೆ. ರಾಜ್ಯದಲ್ಲಿ ಈ ಪ್ರಮಾಣ ಇನ್ನು ಕಡಿಮೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯೂ ಹೆಚ್ಚಾಗಬೇಕು.
– ಡಾ.ಎನ್‌.ಮಂಜುಳಾ, ಆಯುಕ್ತೆ, ಕಾಲೇಜು ಶಿಕ್ಷಣ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next