Advertisement

ಏಕತೆಯಿಂದ ಕಾಯಕದಲ್ಲಿ ಸಾಧನೆ: ಡಾ|ಅಶೋಕ ದಳವಾಯಿ

04:47 PM Jun 13, 2022 | Team Udayavani |

ಕೊಪ್ಪಳ: ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ನಾವು ನಮ್ಮ ಕೆಲಸದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಜಿಲ್ಲೆಯಲ್ಲಿ ಒಟ್ಟಾರೆ ಹನ್ನೊಂದು ರೈತ ಉತ್ಪಾದಕರ ಸಂಸ್ಥೆಗಳು ಈಗಾಗಲೇ ಸ್ಥಾಪನೆಯಾಗಿರುವುದು ಅತ್ಯಂತ ಶ್ಲಾಘನೀಯ ಎಂದು ರಾಷ್ಟ್ರೀಯ ಮಳೆಯಾಶ್ರಿತ ಕೃಷಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಅಶೋಕ ದಳವಾಯಿ ಅವರು ಹೇಳಿದರು.

Advertisement

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ತಂತ್ರಜ್ಞರ ಸಂಸ್ಥೆ, ಗವಿ ಗ್ರೀನ್‌ ಎಪ್‌ಪಿಸಿಎಲ್‌ ಸಹಯೋಗದಲ್ಲಿ ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ನಡೆದ ಉದ್ಯಮ ಕೃಷಿಯಲ್ಲಿ ರೈತ ಉತ್ಪಾದಕರ ಸಂಸ್ಥೆಯ ಪಾತ್ರ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಎಲ್ಲ ಸಂಸ್ಥೆಗಳು ಅಭಿವೃದ್ಧಿ ಕಾಣಬೇಕಾದರೆ ತಾವೆಲ್ಲರೂ ಏಕತೆಯಿಂದ ಕಾಯಕದಲ್ಲಿ ತೊಡಗಿಕೊಳ್ಳಬೇಕು. ನಾವು ಆ ವರ್ಗದವರು, ನಾವು ಈ ಧರ್ಮದವರು, ನಾವು ಈ ಜಾತಿಯವರು, ನಾವು ಆ ಜಾತಿಯವರು ಎನ್ನುವ ಭಿನ್ನ-ಭಾವಗಳು ಬಿಡಬೇಕು. ಏಕತೆಯಿಂದ ಕೆಲಸ ಮಾಡಿದರೆ ಸಂಸ್ಥೆ ಬೆಳೆಯುವುದಕ್ಕೆ ಸಾಧ್ಯವಿದೆ. ವಿದೇಶದಲ್ಲಿ ಹತ್ತು ಜನ ಸೇರಿ ಹತ್ತು ಸಾವಿರ ಹಸುಗಳನ್ನು ಸಾಕಿ, ಹತ್ತು ಮಿಲಿಯನ್‌ ನಷ್ಟು ಹಾಲು ಉತ್ಪಾದನೆ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಇಂತಹ ಕಾಯಕದ ಸನ್ನಿವೇಶಗಳು ಎಲ್ಲಿಯೂ ಕಾಣಲ್ಲ. ಆದರೂ ನಮ್ಮ ದೇಶ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯ ಎಂದರು.

ನಮ್ಮ ದೇಶದಲ್ಲಿ ನಮ್ಮ ರೈತರ ತಲಾ ಆದಾಯ ಅಂದಾಜು ಸರಾಸರಿ 10,500 ರೂಪಾಯಿಗಳಷ್ಟಿದೆ. ಇದು ಯಾವ ಮೂಲೆಯ ಖರ್ಚಿಗೂ ಸಾಲುವುದಿಲ್ಲ. ಇದರಿಂದ ದೇಶದ ರೈತರು ಆರ್ಥಿಕವಾಗಿ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ. ಇಂತಹ ದುಸ್ಥಿತಿಗಳು ಮರುಕಳಿಸಬಾರದು ಎಂದು ದೇಶದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಕೇಂದ್ರ ಸರಕಾರ ಸ್ಥಾಪಿಸಿದೆ. ರೈತರು ದುಡಿದ ಮುಕ್ಕಾಲು ಭಾಗದಷ್ಟು ಲಾಭ ಮಧ್ಯವರ್ತಿಗಳಿಗೆ ದೊರೆಯುತ್ತದೆ. ಇದೇ ಲಾಭವನ್ನು ರೈತ ಉತ್ಪಾದಕರ ಸಂಸ್ಥೆಗಳಿಂದ ರೈತರ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡಿದರೆ ಶೇ. ಮುಕ್ಕಾಲು ಭಾಗದಷ್ಟು ಲಾಭ ರೈತರಿಗೆ ದೊರಕುತ್ತದೆ. ರೈತರ ಲಾಭ ದ್ವಿಗುಣ ಉಳಿಸಬೇಕಾದರೆ ಇಂತಹ ರೈತ ಉತ್ಪಾದಕರ ಸಂಸ್ಥೆಗಳು ಬಹಳ ಸಹಕಾರಿಯಾಗುತ್ತದೆ. ರೈತ ಉತ್ಪಾದಕರ ಸಂಸ್ಥೆ ಎಂದರೆ ಇದೊಂದು ರೈತರ ಕಂಪನಿಯಾಗಿದೆ. ಇದು ರೈತರಿಗೋಸ್ಕರ ರೈತರಿಗಾಗಿ ರೈತರ ಏಳ್ಗೆಗಾಗಿ ರೈತರ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮುಂದಿನ ದಿನಮಾನಗಳಲ್ಲಿ ರೈತರ ಬಾಳಿಗೆ ಬೆಳಕಾಗುವುದೇ ರೈತ ಉತ್ಪಾದಕರ ಸಂಘಗಳಾಗಿವೆ ಎಂದರು.

ಕೃಷಿ ಇಲಾಖೆ ಕೃಷಿ ನಿರ್ದೇಶಕಿ ಡಾ| ನಂದಿನಿ ಕುಮಾರಿ ಮಾತನಾಡಿ, ಕೃಷಿ ಉತ್ಪಾದಕರ ಸಂಸ್ಥೆಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಸಮಸ್ಯೆಗಳು ಬರಬಾರದು. ಅಂತಹ ಸಮಸ್ಯೆ, ತೊಂದರೆಗಳು ಬಂದಾಗ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮಗೆ ಆತ್ಮ ಬಲವನ್ನು ತುಂಬುವ ಕೆಲಸ ಮಾಡುತ್ತದೆ. ಗೊಬ್ಬರದ ಸಮಸ್ಯೆಗಳು ಯಾವುದೇ ಸಂಸ್ಥೆಗೆ ಇದ್ದರೆ ತಕ್ಷಣವೇ ಅದನ್ನು ಇಫ್ರೋ ಕಂಪೆನಿಯಿಂದ ಬಗೆಹರಿಸಲಾಗುವುದು. ನಾವು ಮೊದಲು ಕೃಷಿ ಇಲಾಖೆ ಕೃಷಿ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸುವ ವೇಳೆ ಸಾಕಷ್ಟು ಪಾಲಿಸಿ ಮೇಕಿಂಗ್‌ ಮಾಡಿ ಅದರಲ್ಲಿ ಭಾಗಿಯಾಗಿ ಕೃಷಿ ಉತ್ಪಾದಕರ ಸಂಸ್ಥೆಗಳನ್ನು ಹೇಗೆ ಸ್ಥಾಪಿಸುವುದು? ಹೇಗೆ ಜನರನ್ನು ಒಂದುಗೂಡಿಸುವುದು? ಎಂಬ ಕಾಯಕದಲ್ಲಿ ತೊಡಗಿದ್ದೇವು. ಈಗ ಸಂಸ್ಥೆಗಳು ಬೆಳೆದು ನಿಂತಿವೆ. ನೂರು ಜನ ರೈತ ಉತ್ಪಾದಕರ ಸಂಸ್ಥೆಯ ಎಲ್ಲ ಕಾರ್ಯನಿರ್ವಾಹಕಾಧಿಕಾರಿಗಳು ಎಲ್ಲಾ ನಾಮನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನಾನು ನೋಡಿ ತುಂಬಾ ಖುಷಿಯಾಯಿತು. ನಾವು ಕೃಷಿ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ತುಂಬ ಶ್ರಮಿಸಿದ್ದೇವೆ ಎಂದರು.

Advertisement

ವೀರಣ್ಣ ಕಮತರ್‌ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ರೈತ ಉತ್ಪಾದಕರ ಸಂಘದ ಸಿಇಒಗಳು, ಪದಾ ಧಿಕಾರಿಗಳು, ನಾಮನಿರ್ದೇಶಕರು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಾಕಷ್ಟು ಶ್ರಮಪಟ್ಟು ಈ ಕೊಪ್ಪಳ ಜಿಲ್ಲೆಯನ್ನು ರಾಷ್ಟ್ರದಲ್ಲಿ ಮೊಟ್ಟ ಮೊದಲ ಸ್ಥಾನಕ್ಕೆ ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಸದಾಶಿವ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಅಧಿಕಾರಿಗಳಾದ ಶರಣಪ್ಪ ಮುದುಗಲ್‌, ರೂಪಾ ಬೆಂಗಳೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ| ಎಂ.ಬಿ. ಪಾಟೀಲ ಉಪಸ್ಥಿತರಿದ್ದರು. ಡಾ| ನಾಗೇಶ ಬಸಪ್ಪ ಜಾನೇಕಲ್‌ ನಿರೂಪಿಸಿದರು. ಸಹದೇವ ಜಾಗೋಪಲ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next