Advertisement

ದೇಶದ ಒಳಿತಿಗೆ ಫಲಾಪೇಕ್ಷವಿಲ್ಲದೆ ಶ್ರಮಿಸಿ: ಉದಾಸಿ

05:21 PM Aug 07, 2019 | Suhan S |

ಹಾನಗಲ್ಲ: ಶೈಕ್ಷಣಿಕ, ಔದ್ಯೋಗಿಕ ಪೈಪೋಟಿಯಲ್ಲಿ ಜಗತ್ತು ಮುನ್ನಡೆಯುತ್ತಿರುವಾಗ ಪ್ರಯತ್ನದಿಂದ ಮಾತ್ರ ಫಲ ಎಂಬ ಸತ್ಯವನ್ನು ಅರಿತು ಕಷ್ಟ ಸಹಿಷ್ಣುಗಳಾಗಿ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಶಾಸಕ ಸಿ.ಎಂ.ಉದಾಸಿ ಕರೆ ನೀಡಿದರು.

Advertisement

ಮಂಗಳವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಕಾಲೇಜು ಒಕ್ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧಿಧೀಜಿ ಅವರ ಕನಸು ನನಸಾಗಬೇಕು. ಇಡೀ ಜಗತ್ತಿನಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಭಾರತದ ಹಿರಿಮೆಗೆ ಎಲ್ಲರೂ ತಮ್ಮ ಶಕ್ತಿ ವಿನಿಯೋಗಿಸುವಂತಾಗಬೇಕು. ದೇಶ ಮೊದಲು ಎಂಬ ಭಾವ ಎಲ್ಲರದಾಗಲಿ. ಜಮ್ಮು ಕಾಶ್ಮೀರದ ವಿಷಯದಲ್ಲಿ ಭಾರತ ಸರಕಾರ ಕೈಗೊಂಡ ಕ್ರಮ ಇಡೀ ದೇಶದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತದ ಕನಸು ನನಸಾಗಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ದೇಶದ ಒಳಿತಿಗೆ ಫಲಾಪೇಕ್ಷೆಯ ಲೆಕ್ಕಾಚಾರವಿಲ್ಲದೆ ಮುಂದಾಗಬೇಕಾಗಿದೆ. ಬದ್ಧತೆಯ ಬದುಕಿನಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂದರು.

ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ| ಸಿ.ಮಂಜುನಾಥ ಕಾಲೇಜು ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಶಿಕ್ಷಣ ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ಮನುಷ್ಯನಿಗೆ ಮೊದಲು ತನ್ನ ಶಕ್ತಿಯ ಅರಿವು ಆಗಬೇಕು. ಜೀವನ ಕೌಶಲ್ಯವೂ ಬೇಕು. ಸಕಾರಾತ್ಮಕ ಚಿಂತನೆ ಮೊದಲನೆಯದಾಗಬೇಕು. ಧನಾತ್ಮಕ ಆಲೋಚನೆಗಳು ಕಳೆಗಟ್ಟಬೇಕು. ವಿದ್ಯಾರ್ಥಿ ಜೀವನವೆಂದರೆ ಕಳೆದು ಹೋಗುವುದಲ್ಲ. ಬದುಕನ್ನು ಕಟ್ಟಿಕೊಳ್ಳುವುದು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ.ಪೀರಜಾದೆ ಅಧ್ಯಕ್ಷತೆ ವಹಿಸಿ ಮಾತನಾಡಿ, 3ಜಿ-4ಜಿ ಗಳ ಒತ್ತಡದ ಜೀವನದಲ್ಲಿರುವ ವಿದ್ಯಾರ್ಥಿಗಳಿಗೆ ಗುರೂಜಿ ಎಂಬ ಪದದ ಹಾಗೂ ವಾಸ್ತವದ ಅರಿವು ದೂರವಾಗುತ್ತಿರುವುದುದೇ ದುರಂತವಾಗಿದೆ. ಲೇಝಿ ನಮ್ಮ ವಿದ್ಯಾರ್ಥಿಗಳಿಂದ ದೂರವಾಗಿ ಬ್ಯೂಜಿಯಾಗಿ ಓದುವುದೇ ನಮ್ಮ ವಿದ್ಯಾರ್ಥಿಗಳ ಆದ್ಯತೆಯಾಗಬೇಕು. ಕಾಲ ಹರಣ ಮಾಡಿಕೊಂಡು ಪರೀಕ್ಷಾ ಭಯಕ್ಕೆ ತುತ್ತಾಗಿ ಫಲಿತಾಂಶದ ಅಪ ಯಶಸ್ಸಿಗೆ ಆತ್ಮಹತ್ಯೆಯಂತಹ ದುರ್ಮರಣದ ಅಗತ್ಯವಿಲ್ಲ. ಕಾಲೇಜು ಜೀವನವನ್ನು ಸಾಕಾರಗೊಳಿಸಿಕೊಳ್ಳಿ. ಎಂಥ ಸಂದರ್ಭದಲ್ಲಿಯೂ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂದು ಎಚ್ಚರಿಸಿದರು.

ಪ್ರಾಚಾರ್ಯ ಪ್ರೊ| ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಪ್ರೊ| ಎಸ್‌.ಎಸ್‌.ನಿಸ್ಸೀಗೌಡರ, ಕಾರ್ಯದರ್ಶಿ ಪ್ರಕಾಶ ಬಾರ್ಕಿ ಅತಿಥಿಗಳಾಗಿದ್ದರು. ಎನ್‌ಎಸ್‌ಎಸ್‌ ಅಧಿಕಾರಿ ಪ್ರೊ| ಎಚ್.ಎಸ್‌.ಬಾರ್ಕಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ| ವೀಣಾ ದೇವರಗುಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next