“ಗೃಹಿಣಿ’
“ಹಾಗಾದರೆ, ಎಲ್ಲಿಯೂ ಕೆಲಸ ಮಾಡುತ್ತಿಲ್ಲ’
“ಗೃಹಿಣಿಯಾಗಿಯೇ ಇದ್ದುಕೊಂಡು ಉದ್ಯೋಗಸ್ಥೆಯಾಗಿರ ಬಾರದೆಂದು ಯಾರು ಹೇಳಿದವರು? ’
Advertisement
ನಾವು ಸಣ್ಣವರಿದ್ದಾಗ ಶಾಲೆಯಲ್ಲಿ ನಮ್ಮ ಅಧ್ಯಾಪಕರು, “ಮಕ್ಕಳೇ ನೀವು ಮುಂದೆ ಏನಾಗಬೇಕು ಅಂತ ಇದ್ದೀರಿ?” ಎಂದು ಕೇಳುತ್ತಿದ್ದರು. ಆಗ ನಮ್ಮ ತರಗತಿಯಲ್ಲಿ ಕೆಲವರು, “ಸಾರ್, ನಾನು ಡಾಕ್ಟರ್ ಆಗುತ್ತೇನೆ’, “ಸರ್, ನಾನು ಇಂಜಿನಿಯರ್ ಆಗುತ್ತೇನೆ”, “ಸಾರ್, ನಾನು ಪೈಲಟ್ ಆಗುತ್ತೇನೆ” ಎಂದು ದೊಡ್ಡ ದೊಡ್ಡ ಉದ್ಯೋಗದ ಹೆಸರನ್ನು ಹೇಳುತ್ತಿದ್ದರು. ಆದರೆ, ನಾವು ಹುಡುಗಿಯರಲ್ಲಿ ಹೆಚ್ಚಿನವರು, “ಸಾರ್ ನಾನು ಟೀಚರ್ ಆಗುತ್ತೇನೆ”, “ಸಾರ್, ನಾನು ನರ್ಸ್ ಆಗುತ್ತೇನೆ”, “ನಾನು ಬ್ಯಾಂಕ್ ಕೆಲಸಕ್ಕೆ ಹೋಗುತ್ತೇನೆ” ಎಂದೇ ಹೇಳುತ್ತಿದ್ದರು.
Related Articles
Advertisement
ನನ್ನಮ್ಮ, ನಮ್ಮಜ್ಜಿಯಂತೆ ಕೃಷಿ, ಹೈನುಗಾರಿಕೆಯ ಮೂಲಕವೇ ಅದೆಷ್ಟೋ ಮಹಿಳೆಯರು ಸ್ವಾವಲಂಬನೆಯ ಬದುಕನ್ನು ಬಾಳುತ್ತಿದ್ದರು. ಕೃಷಿ ಇಲ್ಲದ ಮನೆಯ ಗೃಹಿಣಿಯರು ಗಂಡ ದುಡಿದು ತಂದದ್ದನ್ನು ಚೊಕ್ಕವಾಗಿ ಸಂಭಾಳಿಸಿ ಮನೆ ನಡೆಸುವುದರ ಜತೆಗೆ ಮನೆಯಲ್ಲೇ ಬೀಡಿ ಕಟ್ಟುವುದು, ತಿಂಡಿ ಮಾಡಿ ಮಾರುವುದು, ಕಾರ್ಖಾನೆಯಿಂದ ಗೇರುಬೀಜ ತಂದು ಸುಳಿಯುವುದು, ಬಟ್ಟೆ ಹೊಲಿಯುವುದು, ಹೂ ಮಾರುವುದು, ದನ-ಕೋಳಿ ಸಾಕುವುದು- ಹೀಗೆ ಒಂದಲ್ಲ ಒಂದು ಕಸುಬು ಅವರಿಗೆ ಆದಾಯ ಗಳಿಸಲು ಪೂರಕವಾಗುತ್ತಿತ್ತು. ಆ ಮೂಲಕ ಸ್ವಂತ ದುಡಿಮೆಯಿಂದ ಗೌರವಯುತ ಜೀವನ ನಡೆಸುತ್ತಿದ್ದರು.
ಅಂದಿನ ಗೃಹಿಣಿಯರ ಸ್ವಾವಲಂಬನೆಯ ಬದುಕಿನ ಚಿತ್ರಣ ಈ ರೀತಿ ಇದ್ದರೆ, ಇಂದಿನ ಗೃಹಿಣಿಯರ ಚಿತ್ರಣ ಬದಲಾಗಿದೆ. ಕಳೆದ ನೂರು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿಹೋಗಿರುವುದರಿಂದ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾವಣೆಗೆ ಅವರೂ ಸ್ಪಂದಿಸುತ್ತಾ ಬಂದಿದ್ದಾರೆ..
ನನ್ನ ನೆರೆಮನೆಯಾಕೆ ವೀಣಾ. ಅವಳು ಗೃಹಿಣಿ. ಮನೆಯಲ್ಲಿ ಟೈಲರಿಂಗ್ ಮಾಡುತ್ತಾಳೆ. ಚೂಡಿದಾರ, ಸೀರೆ ಬ್ಲೌಸ್ ತುಂಬಾ ಚೆನ್ನಾಗಿ ಹೊಲಿಯುತ್ತಾಳೆ. ನಾನು ಮತ್ತು ನಮ್ಮ ಅಕ್ಕಪಕ್ಕದವರೆಲ್ಲ ಅವಳಲ್ಲೇ ಬಟ್ಟೆ ಹೊಲಿಸಿಕೊಳ್ಳುತ್ತೇವೆ. ರೇಟೂ ಕಡಿಮೆ. ಪೇಟೆಯ ಟೈಲರ್‌ಗಳಷ್ಟು ದುಬಾರಿಯಲ್ಲ. ಮೊದಮೊದಲು ಬರೇ ಸ್ಟಿಚ್ಚಿಂಗ್ ಮಾತ್ರ ಮಾಡುತ್ತಿದ್ದ ಅವಳು ಈಗ ಸೀರೆಗೆ ಕುಚ್ಚು , ಎಂಬ್ರಾಯಿಡರಿ ಮಾಡುತ್ತಾಳೆ. ಅವಳತ್ತೆ ಅವಳಿಗೆ ಸೀರೆ ಪಾಲ್ಸ್, ಗುಬ್ಬಿ ಹಾಕಲು ನೆರವಾಗುತ್ತಾರೆ. ಮದುವೆ ಸೀಸನ್, ಹಬ್ಬ-ಹರಿದಿನಗಳಲ್ಲಿ ಅವಳು ತುಂಬಾ ಬ್ಯುಸಿ. ಈಗ ಅವಳು ವಿದ್ಯುತ್‌ಚಾಲಿತ ಹೊಲಿಗೆ ಮೆಶಿನ್ ಕೊಂಡಿದ್ದಾಳೆ. “ಮೊದಲಿನ ಹಾಗೆ ಮೆಶಿನ್ ತುಳಿಯುವ ಕಷ್ಟವಿಲ್ಲ” ಎಂದು ಹೇಳುವಾಗ ಅವಳ ಮುಖದಲ್ಲಿ ಸ್ವಂತ ದುಡಿಮೆಯ ಬಗ್ಗೆ ಅಭಿಮಾನ ಕಾಣಿಸುತ್ತದೆ.
.
ನನ್ನ ಚಿಕ್ಕಮ್ಮ ಸುಮತಿ ಪೋಸ್ಟಲ್ ಆರ್‌ಡಿ ಏಜನ್ಸಿ ತಗೊಂಡಿದ್ದಾರೆ. ಅವರು ಬಹಳ ಚುರುಕು ಸ್ವಭಾವದವರು. ಅರಳು ಹುರಿದಂತೆ ಮಾತನಾಡುತ್ತಾರೆ. ತಮ್ಮ ಬಂಧುಬಳಗದವರಲ್ಲಿ, ಗೆಳೆಯ-ಗೆಳತಿಯರು, ನೆರೆಹೊರೆಯವರಲ್ಲಿ ಉಳಿತಾಯ ಯೋಜನೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿ ಅವರಿಂದ ಆರ್‌ಡಿ ಖಾತೆ ತೆರೆಸಿ ಹಣ ಸಂಗ್ರಹಿಸು ತ್ತಾರೆ. ಮನೆಗೆಲಸವೆಲ್ಲ ಮುಗಿದ ಮೇಲೆ ಮಳೆಯಿರಲಿ, ಬಿಸಿಲಿರಲಿ ಯಾವುದನ್ನೂ ಲೆಕ್ಕಿಸದೆ ಮನೆ ಮನೆಗೆ ಆರ್‌ಡಿ ಕಲೆಕ್ಷನ್‌ಗೆ ತೆರಳುತ್ತಾರೆ. ಆಗಾಗ ಪೋಸ್ಪಾಫೀಸು-ಮನೆ ಅಂತ ಓಡಾಡುತ್ತಿರುತ್ತಾರೆ. ಅವರು ಸಂಗ್ರಹಿಸಿದ ಹಣದ ಮೊತ್ತದ ಮೇಲೆ ಕಮಿಷನ್ ಬರುತ್ತದೆ. ಇದರಿಂದ ಅವರು ಸ್ವಾವಲಂಬಿಯಾಗಿದ್ದಲ್ಲದೆ, ಅವರ ಈ ಪುಟ್ಟ ಸಂಪಾದನೆ ಚಿಕ್ಕಪ್ಪನ ವರಿಗೂ ಸಂಸಾರವನ್ನು ತೂಗಿಸಿಕೊಂಡು ಹೋಗಲು ಸಹಾಯಕವಾಗಿದೆ.
.
ನನ್ನ ಗೆಳತಿ ಮಾಲತಿ. ಅವಳೂ ಗೃಹಿಣಿ. ಮನೆಯಲ್ಲೇ ಒಂದು ಕೋಣೆಯನ್ನು ಪಾರ್ಲರ್ ಆಗಿ ಪರಿವರ್ತಿಸಿ ಬ್ಯೂಟಿಷಿಯನ್ ಕೆಲಸ ಮಾಡುತ್ತಾಳೆ. ಐಬ್ರೋ, ಹೇರ್‌ಕಟ್, ಫೇಶಿಯಲ್ ಮಾಡುತ್ತಾಳೆ. ಮದುವೆ, ನಿಶ್ಚಿತಾರ್ಥದಂಥ ಸಮಾರಂಭಗಳಲ್ಲಿ ಮನೆಗೂ ಹೋಗಿ ಮದುಮಕ್ಕಳಿಗೆ, ಮನೆಮಂದಿಗೆ ಮೇಕಪ್ ಮಾಡುತ್ತಾಳೆ. ಪೇಟೆಯ ಪಾರ್ಲರ್‌ಗಳ ಬ್ಯೂಟಿಷಿಯನ್ಸ್‌ಗಳನ್ನು ಕರೆಸಿದರೆ ಸಿಕ್ಕಾಪಟ್ಟೆ ದುಬಾರಿ. ಹಾಗಾಗಿ ಹತ್ತಿರದ ಬ್ಯೂಟಿಷಿಯನ್‌ಗಳಿಗೆ ಬೇಡಿಕೆ ಹೆಚ್ಚು. ಮನೆಯಲ್ಲೇ ಕಮ್ಮಿ ಕಮ್ಮಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಾಳೆ.
.
ನನ್ನ ನಾದಿನಿ ಪ್ರೇಮಾ ಮನೆಯಲ್ಲಿಯೇ ಇರುವವಳು. ಪದವೀಧರೆ. ಮನೆಗೆಲಸದಲ್ಲೂ ತುಂಬಾ ಜಾಣೆ. ಅವರ ಮನೆಗೆ ಹೋದರೆ ಏನೋ ಒಂಥರಾ ಖುಶಿಯಾಗುತ್ತದೆ. ಯಾಕೆಂದರೆ, ಅವಳು ನೀಟಾಗಿ ಇರುತ್ತಾಳೆ. ಜತೆಗೆ ಮನೆಯನ್ನೂ ಅಂದವಾಗಿ ಓಪ್ಪ-ಓರಣವಾಗಿ ಇಡುತ್ತಾಳೆ. ಸಾಮಾನ್ಯವಾಗಿ ಮನೆಯಲ್ಲಿ ಇರುವ ಹೆಣ್ಣುಮಕ್ಕಳು “ನಮಗೇನು ಆಗಬೇಕು, ನಾವು ಮನೆಯಲ್ಲಿ ಇರುವವರಲ್ಲ” ಎಂದು ಉದಾಸೀನತೆ ತೋರುತ್ತಾರೆ. ಆದರೆ, ಇವಳು ಹಾಗಲ್ಲ. ಮನೆಗೆಲಸ, ಮಕ್ಕಳ ಲಾಲನೆ-ಪಾಲನೆಯೊಂದಿಗೆ ಸಂಜೆ ಶಾಲೆಯಿಂದ ಬರುವ ಮಕ್ಕಳಿಗೆ ಟ್ಯೂಷನ್ ಕೊಡುತ್ತಾಳೆ. ಅವಳು ಹೇಳುತ್ತಾಳೆ, “”ನನಗೇನಾದರೂ ಬೇಕೆನಿಸಿದರೆ ನಾನೇ ಕೊಂಡುಕೊಳ್ಳುತ್ತೇನೆ. ಗಂಡನೆದುರು ಕೈಚಾಚುವುದಿಲ್ಲ” ಎಂದು ಹೆಮ್ಮೆಯಿಂದ ಹೇಳುತ್ತಿರುತ್ತಾಳೆ.
.
ಮನೆಯಲ್ಲಿಯೇ ಅಡುಗೆ-ಗೃಹಕೃತ್ಯ ಮಾಡಿಕೊಂಡು ಇರಬೇಕಾಗಿದ್ದ ಮಹಿಳೆ ಇಂದು ಕಲಿತು ಉದ್ಯೋಗಕ್ಕೆ ಹೋಗಿ ದುಡಿದು ಸ್ವಾವಲಂಬಿಯಾಗಿದ್ದಾಳೆ. ಆದರೆ, ವಿದ್ಯೆ ಕಲಿತು ಕೆಲಸ ಸಿಕ್ಕದೆಯೋ ಅಥವಾ ಅನಿವಾರ್ಯ ಕಾರಣಗಳಿಂದ ಕೆಲಸಕ್ಕೆ ಹೋಗಲು ಆಗದೆ ಮನೆಯಲ್ಲೇ ಉಳಿಯಬೇಕಾದ ಸಂದರ್ಭ ಬಂದರೂ ತಮ್ಮ ಪ್ರತಿಭೆ-ಕೌಶಲ, ಬುದ್ಧಿವಂತಿಕೆಯ ಮೂಲಕವೇ ದುಡಿಯುವ ಸಾಮರ್ಥ್ಯ ಅವರಲ್ಲಿದೆ. ಮನೆಯಲ್ಲೇ ತಮಗೆ ಬೇಕಾದ ವಾತಾವರಣವನ್ನು ಸೃಷ್ಟಿ ಮಾಡಿಕೊಂಡು ಆ ಮೂಲಕ ತಮ್ಮ ಸ್ವಂತದ ಖರ್ಚಿಗೆ ಆಗುವಷ್ಟು ಮಾತ್ರವಲ್ಲದೆ, ಕುಟುಂಬದ ಅಗತ್ಯಗಳನ್ನೂ ಪೂರೈಸುವಷ್ಟು ಆದಾಯ ಗಳಿಸುವಲ್ಲಿಯೂ ಸಶಕ್ತರಾಗಿದ್ದಾರೆ. ಟೈಲರಿಂಗ್‌ನಿಂದ ಹಿಡಿದು ಬ್ಯೂಟಿಷಿಯನ್, ಟ್ಯೂಷನ್ ಕ್ಲಾಸ್, ಆರ್‌ಡಿ, ಜೀವವಿಮೆ, ಫ್ಯಾಷನ್ ಡಿಸೈನಿಂಗ್, ಕೆಟರಿಂಗ್, ಡ್ಯಾ®Õ…, ಸಂಗೀತ, ಪೈಂಟಿಂಗ್, ಬರವಣಿಗೆ- ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವ ಮಹಿಳೆಯರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಮನೆಯಲ್ಲಿಯೇ ಕುಳಿತು ಪಾಠ ಓದುವುದು, ಮನೆಯಲ್ಲಿಯೇ ಡಿಗ್ರಿ ಪಡೆಯುವುದು. ಕಂಪ್ಯೂಟರ್, ಇಂಟರ್‌ನೆಟ್ ಬಳಸಿ ಮನೆಯಿಂದಲೇ “ವರ್ಕ್ ಫ್ರಂ ಹೋಮ್’ ಮಾಡುವವರೂ ಸಾಕಷ್ಟು ಮಂದಿ ಇದ್ದಾರೆ. ಗೃಹಿಣಿಯರು ಇಂದು ಈ ಮಟ್ಟಿಗೆ ಬೆಳೆದಿರುವ ಪರಿಯಂತೂ ಅದ್ಭುತ! ಒಟ್ಟಿನಲ್ಲಿ ಹೇಳುವುದಾದರೆ, ಒಂದು ಸಂಸಾರದ ಯಶಸ್ಸಿನಲ್ಲಿ ಮಹಿಳೆ ಗಂಡನಷ್ಟೇ ಮಹತ್ವದ ಪಾತ್ರ ವಹಿಸಿದ್ದಾಳೆ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. -ಸ್ವಾತಿ ಎನ್.