Advertisement

ವಾರದಲ್ಲಿ ಐದು ದಿನ ಕೆಲಸ, ಒಂದು ತಾಸು ಅವಧಿ ಹೆಚ್ಚಳ

11:25 PM Feb 11, 2023 | Team Udayavani |

ಬೆಂಗಳೂರು: ವಾರದಲ್ಲಿ ಐದು ದಿನ ಮಾತ್ರ ರಾಜ್ಯ ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಬೇಕು, ಕಚೇರಿಯ ಕೆಲಸದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಬೇಕು, ಸರಕಾರದ ನಾನಾ ಇಲಾಖೆಗಳಿಗೆ ಒಟ್ಟು ಎರಡೂವರೆ ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರಕಾರಿ ನೌಕರರ ಸಂಘವು ಏಳನೇ ವೇತನ ಆಯೋಗಕ್ಕೆ ಮನವಿ ಮಾಡಿದೆ.

Advertisement

ಈಗಾಗಲೇ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಾಜ್ಯ ಸರಕಾರಿ ನೌಕರರಿಗೆ ರಜೆ ಇದ್ದು, ಇದನ್ನು ತಿಂಗಳ ಮೊದಲ ಮತ್ತು ಮೂರನೇ ಶನಿವಾರಕ್ಕೂ ವಿಸ್ತರಿಸಬೇಕು. ವಾರದ ಐದು ದಿನ ಮಾತ್ರ ಕರ್ತವ್ಯದ ದಿನವೆಂದು ನಿಗದಿಪಡಿಸಬೇಕು. ಕೆಲಸದ ಅವಧಿಯನ್ನು ಬೆಳಗ್ಗೆ 10 ಗಂಟೆ ಬದಲಿಗೆ 9.30ಕ್ಕೆ ಮತ್ತು ಸಂಜೆ 5.30ರ ಬದಲಿಗೆ 6 ಗಂಟೆ ತನಕ ವಿಸ್ತರಿಸಬೇಕು ಎಂದು ಸಂಘ ಕೋರಿಕೆ ಸಲ್ಲಿಸಿದೆ.

ಸರಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ನೌಕರರ ಮೇಲಿರುವ ಕೆಲಸದ ಒತ್ತಡ ತಗ್ಗಿ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ , ಹೊಣೆಗಾರಿಕೆ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನೆರೆ ರಾಜ್ಯಗಳು ಮತ್ತು ಕೇಂದ್ರ ಸರಕಾರದ ವೇತನ, ಭತ್ತೆಗಳನ್ನು ತುಲನೆ ಮಾಡಿ ಹೊದ ವೇತನ ಶ್ರೇಣಿ ರಚನೆ ಮಾಡುವಂತೆ ಸಂಘ ಕೋರಿಕೆ ಸಲ್ಲಿಸಿದೆ.

ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್‌ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗ ರಚನೆಯಾಗಿದ್ದು, ಕಳೆದ ಜ. 17ರಂದು ಪ್ರಶ್ನಾವಳಿ ಬಿಡುಗಡೆ ಮಾಡಿತ್ತು. ಈ ಪ್ರಶ್ನಾವಳಿಗೆ ಸಂಘವು 65 ಪುಟಗಳ ಉತ್ತರ ನೀಡಿದೆ.

ನಿವೃತ್ತಿ ವೇತನಕ್ಕಾಗಿ ಕನಿಷ್ಠ ಸೇವಾವಧಿಯನ್ನು ಸದ್ಯದ 30 ವರ್ಷದಿಂದ 25 ವರ್ಷಕ್ಕೆ ಇಳಿಸಬೇಕು. ಸ್ವಯಂ ನಿವೃತ್ತಿಗೆ 15 ವರ್ಷಗಳ ಕನಿಷ್ಠ ಸೇವೆ ಅಥವಾ 50 ವರ್ಷ ವಯಸ್ಸಿನ ಮಿತಿ ಬದಲಿಸಿ, 12 ವರ್ಷಗಳ ಸೇವಾ ಅವಧಿ ಅಥವಾ 45 ವರ್ಷ ವಯಸ್ಸಾಗಿರಬೇಕು ಎಂದು ತಿದ್ದುಪಡಿ ಮಾಡಬೇಕು. ಸೇವಾವಧಿಯಲ್ಲಿ ಕನಿಷ್ಠ 3ರಿಂದ 4 ಮುಂಭಡ್ತಿ ಅವಕಾಶ ಸಿಗಬೇಕು. ಪರಿಷ್ಕರಣೆ ಆಗಲಿರುವ ವೇತನ ಶ್ರೇಣಿಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ವೇತನದ ನಡುವಿನ ಅನುಪಾತವನ್ನು ಈಗಿನ 1:5:20 ಬದಲಿಗೆ 1:8:86ಕ್ಕೆ ನಿಗದಿಪಡಿಸಬೇಕು. ಕೇಂದ್ರ ಸರಕಾರದ ಮಾದರಿಯಲ್ಲಿ ಶೈಕ್ಷಣಿಕ ಭತ್ತೆ ಜಾರಿ ಮಾಡಬೇಕೆಂದು ಮನವಿ ಮಾಡಲಾಗಿದೆ.

Advertisement

ಎಟಿಎ ಮಾದರಿ ತರಬೇತಿ ನೀಡಿ
“ಡಿ’ ಗುಂಪಿನ ಕನಿಷ್ಠ ಮೂಲ ವೇತನವನ್ನು 31 ಸಾವಿರ ರೂ. ಗಳಿಗೆ ನಿಗದಿಪಡಿಸಬೇಕು, ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ, ಹೆರಿಗೆ ರಜೆ ಮಂಜೂರು ಮಾಡಬೇಕು. ಎನ್‌ಪಿಎಸ್‌ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು 2006ರ ಎ. 1ರಿಂದ ಪೂರ್ವಾನ್ವಯವಾಗಿ ಮರು ಜಾರಿಗೊಳಿಸಬೇಕು. ಮೂಲ ವೇತನಕ್ಕೆ ಹಾಲಿ ಇರುವ ಶೇ. 31 ತುಟ್ಟಿಭತ್ತೆ ವಿಲೀನಗೊಳಿಸಿ ಶೇ. 40 ಫಿಟ್‌ಮೆಂಟ್‌ ಸೌಲಭ್ಯವನ್ನು 2022ರ ಜುಲೈ 1ರಿಂದ ಪೂರ್ವಾನ್ವಯಗೊಳಿಸಿ ಜಾರಿ ಮಾಡಬೇಕು. ನೌಕರರಲ್ಲಿ ದಕ್ಷತೆ, ನೈಪುಣ್ಯ ಮತ್ತು ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಎ ಮಾದರಿ ತರಬೇತಿ ನೀಡುವಂತೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಲು ಸಂಘ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next