ತಿ.ನರಸೀಪುರ: ವಿವಿಧ ಮೋರ್ಚಾಗಳ ಎಂಟು ತಂಡಗಳನ್ನು ರಚನೆ ಮಾಡಿಕೊಂಡು ನಿತ್ಯವೂ ಒಂದೊಂದು ಊರಿಗೆ ಒಂದೊಂದು ತಂಡ ಭೇಟಿ ಕೊಟ್ಟು ಐವರನ್ನು ಬಿಜೆಪಿಗೆ ಮತ ನೀಡುವಂತೆ ಮನವೊಲಿಸಬೇಕು. ದಿನಕ್ಕೆ ಕನಿಷ್ಠ 1 ಸಾವಿರ ಬಿಜೆಪಿ ನೋಂದಾಯಿತ ಸದಸ್ಯರಿಗೆ ಮೊಬೈಲ್ ಕರೆ ಮಾಡಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗೆಲ್ಲಲು ಕಾರ್ಯತಂತ್ರವನ್ನು ರೂಪಿಸಬೇಕೆಂದು ದೆಹಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಚುನಾವಣಾ ವೀಕ್ಷಕ ಸತೀಶ್ ಉಪಾಧ್ಯಾಯ ಹೇಳಿದರು.
ಪಟ್ಟಣದ ವಿವೇಕಾನಂದ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿ, ಒಂದೊಂದು ಮೋರ್ಚಾದ ತಂಡವೂ ಒಂದೂಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಚುನಾವಣೆ ಕ್ಯಾಂಪೇನ್ ನಡೆಸಬೇಕು. ಮಿಸ್ಡ್ ಕಾಲ್‌ನಿಂದ ನೋಂದಾಯಿತ ಬಿಜೆಪಿ ಸದಸ್ಯರನ್ನು ಮೊಬೈಲ್ ಕರೆ ಮೂಲಕ ಮತದಾನಕ್ಕೆ ಮನವೊಲಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಅಭ್ಯರ್ಥಿಯ ವಿವರವನ್ನು ಜೊತೆಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನದಟ್ಟು ಮಾಡಿಕೊಡಬೇಕು. ರಾಜ್ಯ ಸರ್ಕಾರದ ಲೋಪಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಾಡಳಿತವನ್ನು ಜನರಿಗೆ ತಿಳಿಸಬೇಕು. ಪಕ್ಷದ ಮುಂದಿನ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುವ ಮೂಲಕ ಮತದಾರರನ್ನು ಪಕ್ಷದತ್ತ ಸೆಳೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಶಿವಣ್ಣ ಮಾತನಾಡಿ, ರಾಜ್ಯದ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಜಿಲ್ಲೆಯಲ್ಲೂ ಕನಿಷ್ಠ 8 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ದೆಸೆಯಲ್ಲಿ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲನೆ ಮಾಡಲಿಕ್ಕೆ ಅಮಿತ್ ಶಾ ಅವರು ವೀಕ್ಷಕರನ್ನಾಗಿ ಸತೀಶ್ ಉಪಾಧ್ಯಾಯ ಅವರನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಕ್ಷೇತ್ರಾಧ್ಯಕ್ಷ ಎಚ್.ಎಂ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಬಸವರಾಜು, ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ರಾಮಕೃಷ್ಣಪ್ಪ, ಹಿಂ.ವರ್ಗಗಳ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ, ಅಧ್ಯಕ್ಷ ಗಿರೀಶ್, ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್, ತಾಪಂ ಸದಸ್ಯ ರತ್ನರಾಜ್, ಮುಖಂಡರಾದ ಬಿ.ಪಿ.ಪರಶಿವಮೂರ್ತಿ, ಚಿದರಂಬರಂ, ಟಿ.ಆರ್.ಶ್ರೀನಿವಾಸ್‌ರಾವ್, ನಾಗೇಂದ್ರ, ಕಾಳೇಗೌಡ ಹಾಗೂ ಇನ್ನಿತರರು ಹಾಜರಿದ್ದರು.