Advertisement

ನಾಮಫಲಕಗಳಲ್ಲಿ ಪದಗಳ ದೋಷ !: “ಬಸ್‌” ಬದಲಾಗಿ “ಬಸು” ಎಂದು ಗೀಚಿ ಅಪಹಾಸ್ಯ

10:51 AM Jun 12, 2022 | Team Udayavani |

ವಾಡಿ: ಚಿತ್ತಾಪುರ ತಾಲೂಕಿನ ಸಿಮೆಂಟ್‌ ನಗರಿ ವಾಡಿ, ನಾಲವಾರ ವಲಯದ ವಿವಿಧ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಕನ್ನಡಾಕ್ಷರಗಳ ನಾಮಫಲಕಗಳಲ್ಲಿ ಪದಗಳ ದೋಷಗಳು ಕಂಡು ಬಂದಿವೆ.

Advertisement

ಕೊಲ್ಲೂರು ಗ್ರಾಮದ ಡಾ|ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿರುವ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಕ್ಕೆ ಸೂಕ್ತ ನಾಮಫಲ ಅಳವಡಿಸಲು ಸಾರಿಗೆ ಸಂಸ್ಥೆಗೆ ಆಸಕ್ತಿಯಿಲ್ಲ ಎಂಬುದು ಸಾಬೀತಾಗಿದೆ.

ಯಾವುದೋ ಕಂಪನಿಗಳು ಗ್ರಾಮೀಣ ಪ್ರದೇಶಕ್ಕೆ ಕಾಲಿಡುವ ಮೂಲಕ ಎಲ್ಲ ಬಸ್‌ ನಿಲ್ದಾಣಗಳಿಗೂ ಬಣ್ಣ ಬಳಿದು ತಮ್ಮ ಕಂಪನಿಯ ಜಾಹೀರಾತು ಪ್ರಕಟಿಸಿವೆ. ಬಸ್‌ ನಿಲ್ದಾಣದ ನಾಮಫಲಕವನ್ನು ಅವರಸರದಲ್ಲಿ ಇವರೇ ಬರೆದು ಹೋಗಿದ್ದರಿಂದ “ಬಸ್‌’ ಬದಲಾಗಿ “ಬಸು’ ಎಂದು ಗೀಚಿ ಅಪಹಾಸ್ಯ ಮಾಡಿದ್ದಾರೆ.

ಜಾಹೀರಾತು ಕಂಪನಿಗಳ ಹಾವಳಿಗೆ ಸಿಕ್ಕು ನಲುಗುತ್ತಿರುವ ಗ್ರಾಮೀಣ ಭಾಗದ ಬಸ್‌ ನಿಲ್ದಾಣಗಳು ತಮ್ಮ ಸೌಂದರ್ಯ ಕಳೆದುಕೊಂಡಿವೆ. ಸುಣ್ಣಬಣ್ಣ ಮಾಡಲು ಸಾಧ್ಯವಾಗದೇ ಸಾರಿಗೆ ಇಲಾಖೆ ಕೈಕಟ್ಟಿ ಕುಳಿತದ್ದೇ ಈ ಕಂಪನಿಗಳ ಜಾಹೀರಾತಿಗೆ ಲಾಭ ತಂದು ಕೊಡುತ್ತಿವೆ. ಇದಲ್ಲದೇ ವಿವಿಧ ಗ್ರಾಮಗಳ ಸರ್ಕಾರಿ ನಾಮಫಲಕಗಳಲ್ಲೂ ಸಾಕಷ್ಟು ಕನ್ನಡ ಅಕ್ಷರಗಳ ಪದ ದೋಷ ಎದ್ದು ಕಾಣುತ್ತಿವೆ. ಪ್ರಥಮ-ಪ್ರದಮ, ಶಾಸಕ ಪ್ರಿಯಾಂಕ್‌ -ಪ್ರಿಯಾಂಕ, ಅಣೆಕಟ್ಟು-ಅಣಿಕಟ್‌, ಹಳಕರ್ಟಿ- ಹಲಕಟ್ಟಿ-ಹಲಕಟ್ಟಾ? ಹೀಗೆ ವಿವಿಧ ರೀತಿಯ ನಾಮಫಲಕಗಳು ಕನ್ನಡವನ್ನು ಅಣಕಿಸುತ್ತಿವೆ.

ಇದನ್ನೂ ಓದಿ:ಮೋದಿ ಭದ್ರತೆಗೆ ತೆರಳಿದ್ದ ಯೋಧನ ದೇಹದಲ್ಲಿ 30ಕ್ಕೂ ಹೆಚ್ಚು ಗ್ರೆನೇಡ್‌ ಚೂರುಗಳು

Advertisement

ಕನ್ನಡಕ್ಕೆ ಆದ್ಯತೆ ನೀಡುವಲ್ಲಿ ಅಂಗಡಿ ಮಾಲೀಕರ ನಿರ್ಲಕ್ಷ್ಯ

ಹೆದ್ದಾರಿ ಸಂಪರ್ಕ ಹೊಂದಿರುವ ಸಿಮೆಂಟ್‌ ನಗರಿ ವಾಡಿ ಪಟ್ಟಣ ಸೇರಿದಂತೆ ನಾಲವಾರ, ಕುಂಬಾರಹಳ್ಳಿ, ಕೊಲ್ಲೂರ, ರಾವೂರ, ಇಂಗಳಗಿ, ಕಮರವಾಡಿ, ಹಳಕರ್ಟಿ, ಲಾಡ್ಲಾಪುರ ಹಾಗೂ ಇನ್ನಿತರ ಪ್ರದೇಶಗಳಲ್ಲಿನ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಲ್ಲಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲವೂ ಇಂಗ್ಲಿಷ್‌ ಮತ್ತು ಹಿಂದಿಮಯವಾಗಿದ್ದು ಕನ್ನಡ ಮೂರನೇ ದರ್ಜೆಗೆ ಜಾರಿದೆ. ಕೆಲವರು ನಾಮಫಲಕದ ಮೊದಲಿಗೆ ಕನ್ನಡದಲ್ಲಿ ಬರೆಯಿಸಿದ್ದಾರೆಯಾದರೂ ಅದು ಆಂಗ್ಲ ಅಕ್ಷರಗಳಿಗಿಂತ ತೀರಾ ಚಿಕ್ಕದಾಗಿವೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರದ ಆದೇಶವಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲವಾಗಿದೆ.

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next