Advertisement

ನೀರೆಯ ಕಣ್ಮನ ಸೆಳೆಯುವ ವುಡನ್‌ ಇಯರಿಂಗ್‌

04:21 PM Oct 15, 2020 | Sriram |

ನಮ್ಮ ಪ್ರಾಚೀನ ಆಭರಣಗಳಲ್ಲಿ ಮರದ ಬಳಕೆ ಸಾಕಷ್ಟಿತ್ತು. ಮರದ ಕಿವಿಯೋಲೆಗಳು ಆಗಲೂ ಜನಪ್ರಿಯ. ಈಗ ಇತಿಹಾಸ ಮರುಕಳಿಸುವಂತೆ ಈಗ ಮತ್ತೆ ಮರದ ಕಿವಿಯೋಲೆಗಳು ಮುನ್ನೆಲೆಗೆ ಬಂದಿವೆ ಎನ್ನುತ್ತಾರೆ ರಾಧಿಕಾ.

Advertisement

ಕಾಲಲ್ಲಿ ಕಾಲ್ಗೆಜ್ಜೆ, ಕಣ್ಮನ ಸೆಳೆಯುವ ಕಿವಿಯೋಲೆ, ಗುಣು ಗುಣಿಸುವ ಕೈಬಳೆ, ಒಪ್ಪುವ ಮೂಗುತಿ- ಆಕೆಯ ರೂಪವರ್ಣನೆಗೆ ಪಾರವಿಲ್ಲ. ಇವೆಲ್ಲವೂ ಹೆಣ್ಣಿಗೆ ಮೆರುಗು ಸೊಬಗು. ನೀರೆಗೆ, ಸೀರೆಗೆ ಎಲ್ಲಕ್ಕೂ ಅಂದ ಕೊಡುವ ಈ ಕಿವಿಯೋಲೆ ನಮ್ಮೆಲ್ಲರ ನೆಚ್ಚಿನ ಸಂಗಾತಿಯಂತೆ. ಹಳೆಕಾಲದ ಆಭರಣ ಅಲ್ಪಸ್ವಲ್ಪ ಬದಲಾವಣೆ ಇಂದಿನ ನೂತನ ಟ್ರೆಂಡ್‌ ಆಗುತ್ತಿರುವುದು ಕಿವಿಯೋಲೆ ವಿಷಯದಲ್ಲಿಯೂ ನಿಜ. ಇಂದು ಚಿನ್ನ , ಬೆಳ್ಳಿ, ಮಣಿ, ಅಷ್ಟೇ ಯಾಕೆ ಕಬ್ಬಿಣ, ತಾಮ್ರದಂತಹ ಲೋಹಗಳ ಕಿವಿಯೋಲೆಗಳಿಗೂ ಬೇಡಿಕೆ ಸಿಕ್ಕಾಪಟ್ಟೆ ಇದೆ.

ಮರದಿಂದ ವಿವಿಧ ರೀತಿಯ ಆಭರಣಗಳನ್ನು ತಯಾರಿಸು ವುದು ಪ್ರಾಚೀನ ಕಲೆ. ರಬ್ಬರ್‌, ಪ್ಲಾಸ್ಟಿಕ್‌ ಇತ್ಯಾದಿಗಳನ್ನು ತಯಾರಿಯ ಪೂರ್ವದಲ್ಲಿ ಮರದ ವಸ್ತುಗಳೇ ಎಲ್ಲೆಂದರಲ್ಲಿ ಆಭರಣದ ರೂಪದಲ್ಲಿ ಬಳಸಲಾಗುತ್ತಿತ್ತು. ಲೋಹಗಳು ಜನಸಾಮಾನ್ಯರ ಕೈಗೆಟಕುವ ಕಾಲದಲ್ಲಿ ಮರಗಳ ಗೊಂಬೆ, ಆಭರಣಗಳು ಕಲಾತ್ಮಕವಾಗಿ ಸಿದ್ಧವಾಗುತ್ತಿದ್ದವು. ತನ್ನ ಸ್ನಿಗ್ಧ ಸೌಂದರ್ಯ ಮತ್ತು ಕಡಿಮೆ ಬೆಲೆಯ ಕಾರಣಕ್ಕೆ ಮತ್ತೆ ಮತ್ತೆ ಗಮನಸೆಳೆಯುತ್ತಿರುವುದು ಮರದ ಕಿವಿಯೋಲೆ. ಮರದ ಕಿವಿಯೋಲೆಗಳನ್ನು ಯುಕ್ತವಾಗಿ ಪೋಣಿಸಿ ಅಚ್ಚುಕಟ್ಟಾದ ಬಣ್ಣಗಳಿಂದ ಶೃಂಗರಿಸುವುದರಿಂದ ಸಾಂಪ್ರದಾಯಿಕ ದಿರಿಸಿನಿಂದ ಆಧುನಿಕ ವಿನ್ಯಾಸದ ದಿರಿಸಿನವರೆಗೂ ಎಲ್ಲಕ್ಕೂ ಇವು ಒಪ್ಪುತ್ತವೆ.

ಏನಿದರ ವೈಶಿಷ್ಟ್ಯ
ಈ ಕಿವಿಯೋಲೆ ಕಡಿಮೆ ತೂಕ ಹೊಂದಿದ್ದು ನೂಲು, ಮಣಿ, ಹ್ಯಾಂಗಿಂಗ್‌ ಒಳಗೊಂಡಂತೆ ತೀರ ವಿಭಿನ್ನ ಮಾದರಿಯಲ್ಲಿ ರಚಿಸಲಾಗಿದೆ. ಚಿಕ್ಕ ಮರದ ತುಂಡಿನಲ್ಲಿ ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಆಭರಣ ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಭಾರದ ಕಿವಿಯೋಲೆ ತೊಟ್ಟು ಕಿವಿ ನೋವಾದೀತೆಂಬ ಭಯವಿರುವವರು ಗಾತ್ರದಲ್ಲಿ ದೊಡ್ಡದಾಗಿ ಕಾಣುವ ಲಘುವಾಗಿರುವ ಈ ಕಿವಿಯೋಲೆಯನ್ನು ಒಮ್ಮೆ ಪ್ರಯತ್ನಿಸಿ.

ಯಾವುದಕ್ಕೆ ಸೂಕ್ತ
ಈ ಮರದ ಕಿವಿಯೋಲೆ ಕೆಲವೊಂದು ನಿರ್ದಿಷ್ಟವಾದ ಮ್ಯಾಚಿಂಗ್‌ ಹೊಂದಿದ್ದರೆ ಮಾತ್ರ ಸೊಗಸಾಗಿ ಕಾಣುತ್ತದೆ. ಹತ್ತಿಯ, ಕೈ ಮಗ್ಗದ ಸಾಂಪ್ರದಾಯಿಕ ಕುರ್ತಿಯೊಂದಿಗೆ ರೈನ್‌ ಡ್ರಾಪ್‌ ಮಾದರಿಯ ಕಿವಿಯೋಲೆ, ಜೀನ್ಸ್‌ ಟಾಪ್‌ನಲ್ಲಿ ರೌಂಡ್‌ ವುಡನ್‌ ಕಿವಿಯೋಲೆ ಹೊಂದಬಹುದು. ಇನ್ನು ದಿರಿಸಿನ ಬಣ್ಣ ಹೊಂದಿಕೆ ವಿಷಯದಲ್ಲಿ ಕಡು ಕಂದು, ಕಡುನೇರಳೆ, ಬಿಳಿ ಹಾಗೂ ತಿಳಿನೀಲಿ ಟಾಪ್‌ಗೆ ಹೋಲುತ್ತದೆ.

Advertisement

ಮುಖಕ್ಕೆ ಹೊಂದಿಕೊಳ್ಳುವಂತಿರಲಿ
ದಿರಿಸಿರಲಿ, ಕಿವಿಯೋಲೆ ಇರಲಿ. ಎಷ್ಟೇ ದುಬಾರಿಯಾದರೂ ಅದು ನಿಮಗೆ ಹೊಂದುವಂತಿದ್ದರೆ ಮತ್ತೆ ತೆಗೆದುಕೊಳ್ಳಿ, ಇಲ್ಲದಿದ್ದರೆ ವ್ಯರ್ಥ. ಅದಕ್ಕಾಗಿ ಮೊದಲೇ ಸೂಕ್ತ ರೀತಿಯಲ್ಲಿ ಆಯ್ದುಕೊಳ್ಳಬೇಕು. ಮೊದಲು ನಿಮ್ಮ ಮುಖದ ಆಕಾರ ಯಾವುದೆಂದು ತಿಳಿಯಿರಿ. ಚಿಕ್ಕ ಮುಖವುಳ್ಳವರಿಗೆ ಚಿಕ್ಕ ಕಿವಿಯೋಲೆ ಸೂಕ್ತ, ಉದ್ದ ಮುಖವುಳ್ಳವರು ದುಂಡಗಿರುವ ಕಿವಿಯೋಲೆ ಬಳಸಿದರೆ ಒಳ್ಳೆಯದು. ಯಾವುದೇ ಕಿವಿಯೋಲೆ ಚೆನ್ನಾಗಿದೆ ಎಂದು ಕೊಳ್ಳುವ ಮೊದಲು ನಿಮಗೆ ಹೊಂದುತ್ತದೋ, ಇಲ್ಲವೋ ಎಂದು ಎರಡು ಬಾರಿ ಪರಿಶೀಲಿಸಿಕೊಳ್ಳಿ.

ಮಾರುಕಟ್ಟೆ ಹವಾ
ಇಂದಿನ ಆನ್‌ಲೈನ್‌ ಶಾಪಿಂಗ್‌ ಈ ಮಾದರಿಯ ಕಿವಿಯೋಲೆಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದೆ. ಅದರಲ್ಲೂ ವುಡನ್‌ ಹ್ಯಾಂಗ್‌ ರೌಂಡ್‌ನ‌ಲ್ಲಿ ಬಹುವಿನ್ಯಾಸಗಳಿದ್ದು ಇಂದಿನ ಮಾದರಿಗೆ ಸೇರಿದೆ ಎನ್ನಬಹುದು. ಸುಮಾರು ನೂರು ರೂಪಾಯಿಗಳಿಂದ ಆರಂಭವಾಗಿ, ವಿನ್ಯಾಸ ಅಧರಿಸಿ ಬೆಲೆ ನಿಗದಿಗೊಂಡಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next