ವಡೋದರಾ: ಸ್ವಯಂ ವಿವಾಹ ಮಾಡಿಕೊಳ್ಳುವುದಾಗಿ ಘೋಷಿಸಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗುಜರಾತ್ ನ ಕ್ಷಮಾ ಬಿಂದು ಮದುವೆಗೆ ಇದೀಗ ಅಡ್ಡಿ ಎದುರಾಗಿದೆ. ವಡೋದರಾದ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ಅವರು ಕ್ಷಮಾ ಬಿಂದು ತನ್ನನ್ನು ಮದುವೆಯಾಗುವ ನಿರ್ಧಾರಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಎಎನ್ ಐ ಗೆ ಮಾತನಾಡಿದ ಸುನೀತಾ ಶುಕ್ಲಾ, “ಒಂದು ವೇಳೆ ಕ್ಷಮಾ ಬಿಂದು ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದರೆ, ನಾವು ಅವಳನ್ನು ಹಾಗೆ ಮಾಡಲು ಬಿಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ” ಎಂದಿದ್ದಾರೆ.
ಬಿಂದು ಮಾನಸಿಕ ಅಸ್ವಸ್ಥೆ ಎಂದು ಸುನೀತಾ ಶುಕ್ಲಾ ಹೇಳಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲಿಯೂ ಹುಡುಗ ಹುಡುಗನನ್ನು ಮದುವೆಯಾಗಬಹುದು ಅಥವಾ ಹುಡುಗಿ ಹುಡುಗಿಯನ್ನು ಮದುವೆಯಾಗಬಹುದು ಎಂದು ಬರೆಯಲಾಗಿಲ್ಲ ಎಂದು ಅವರು ಹೇಳಿದರು.
“ನಾನು ಸ್ಥಳದ ಆಯ್ಕೆಯನ್ನು ವಿರೋಧಿಸುತ್ತೇನೆ, ಆಕೆ ಯಾವುದೇ ದೇವಸ್ಥಾನದಲ್ಲಿ ಈ ರೀತಿ ಮದುವೆಯಾಗಲು ನಾವು ಬಿಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ. ಇದರಿಂದ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತದೆ” ಎಂದು ಬಿಜೆಪಿ ನಾಯಕಿ ಸುನೀತಾ ಶುಕ್ಲಾ ಹೇಳಿದರು.
ಇದನ್ನೂ ಓದಿ:ಏನಿದು ಸ್ವಯಂ ಮದುವೆ? ಹೊರದೇಶಗಳಲ್ಲಿ ಈ ಟ್ರೆಂಡ್ ಹೇಗಿದೆ?
ಕೆಲ ದಿನಗಳ ಹಿಂದೆ 24 ವರ್ಷದ ಕ್ಷಮಾ ಬಿಂದು ಸ್ವಯಂ ವಿವಾಹದ ಬಗ್ಗೆ ಹೇಳಿಕೊಂಡಿದ್ದರು. ಜೂನ್ 11ರಂದು ತಾನು ಸಂಪ್ರದಾಯಗಳನ್ನು ಪಾಲಿಸಿ ಸ್ವಯಂ ವಿವಾಹ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ಕ್ಷಮಾ ಬಿಂದು ಅವರು ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಂದೆ ತಾಯಿ ಇಬ್ಬರೂ ಇಂಜಿನಿಯರ್‌ಗಳು. ಆಕೆಯ ತಂದೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ ಮತ್ತು ತಾಯಿ ಅಹಮದಾಬಾದ್ ನಲ್ಲಿದ್ದಾರೆ.