ಆ ದಿನ ಕ್ಲಾಸ್‌ಗೆ ಬರುವಾಗ ಕಣ್ಣಿಗೆ ಬಿದ್ದದ್ದು ಬ್ಲ್ಯಾಕ್‌ಬೋರ್ಡ್ ಮೇಲೆ ಬರೆಯಲಾದ ಹ್ಯಾಪಿ ಬರ್ತ್‌ಡೇ ಅನ್ನೋ ಬರಹ. ಗೆಳತಿ ಸಮೀಕ್ಷಾ , “ಇವತ್ತು ಶರತ್‌ನ ಬರ್ತ್‌ಡೇ. ನೀನು ವಿಶ್ ಮಾಡಿದ್ಯಾ?’ ಅಂತ ಕೇಳಿದಳು. ಕೊನೆಗೂ ಒಂದು ವಿಶ್ ಹೇಳಿಯೇಬಿಟ್ಟೆ. ಈಗೆಲ್ಲ ಪಾರ್ಟಿ ಕೇಳುವ ಹುಚ್ಚು ನೋಡಿ, ಹೀಗಾಗಿ ನಾವೆಲ್ಲರೂ ಅವನೊಂದಿಗೆ ಪಾರ್ಟಿ ಕೊಡಬೇಕು ಅಂತ ವಾದಿಸುತ್ತಿದ್ದೆವು.
ಅಷ್ಟರಲ್ಲೇ ನಮ್ಮ ಐಟಿ ಸರ್ ಕ್ಲಾಸ್‌ಗೆ ಪ್ರವೇಶಗೈದರು. ಬ್ಲ್ಯಾಕ್ ಬೋರ್ಡ್ ನೋಡುತ್ತಲೇ ಅವನಿಗೊಂದು ವಿಶ್ ಮಾಡಿದರು. ಮತೊಮ್ಮೆ ನಾವೆಲ್ಲರೂ ಒಟ್ಟಾಗಿ, “ಹ್ಯಾಪಿ ಬರ್ತ್‌ಡೇ ಶರತ್’ ಎಂದು ಕಿರುಚಿಬಿಟ್ಟೆವು.
ಆ ದಿನದ ಫಸ್ಟ್ ಅವರ್ ಸಾಗುತ್ತಲೇ ಇತ್ತು. ಆದರೆ, ನನ್ನಲ್ಲಿ ಬರ್ತ್ ಡೇಯ ಬಗ್ಗೆ ತುಂಬಾ ಕುತೂಹಲ ಮೂಡುತ್ತಿತ್ತು. ನಾನು ಕ್ಲಾಸ್‌ನಲ್ಲಿದ್ದರೂ ನನ್ನ ಮನಸ್ಸು ಬರ್ತ್ ಡೇ ಎಂಬ ಕೌತುಕ ಲೋಕದಲ್ಲಿತ್ತು. ಯಾಕೆಂದರೆ, ಇನ್ನೆರಡು ವಾರ ಕಳೆದರೆ ನನ್ನ ಬರ್ತ್‌ಡೇ ಬರುವುದಲ್ಲ ಎಂಬ ಖುಷಿ!
ಹೌದು, ಬರ್ತ್‌ಡೇ ಎಂದರೆ ಅದೊಂದು ಸಂಭ್ರಮದ ದಿನ. ಗಂಟೆ ಹನ್ನೆರಡಾಯಿತೆಂದರೆ ಸಾಕು ಯಾರದಾದ್ರೂ ಬರ್ತ್‌ಡೇ ಹಾರೈಕೆ ಇದೆಯಾ ಎಂದು ಮೊಬೈಲ್‌ನತ್ತ ಕಣ್ಣು ಹಾಯಿಸುವುದು ಉಂಟು. ಬೆಳಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಮತ್ತೆ ಮನೆಗೆ ಬರುವಷ್ಟರಲ್ಲಿ ದಾರಿಯಲ್ಲಿ ಯಾರಾದರೂ ಪರಿಚಯಸ್ಥರು ಸಿಕ್ಕಿ, “ಈ ದಿನ ಏನು ದೇವಸ್ಥಾನಕ್ಕೆ ಬಂದೆ, ಇವತ್ತು ನಿನ್ನ ಬರ್ತ್‌ಡೇನಾ?’ ಅಂತ ಕೇಳಿದರೆ ಸಾಕು, ಆಕಾಶದಲ್ಲಿ ಹಾರಾಡುವಂತೆ “ಹೌದೌದು’ ಎನ್ನುವ ಸಂತೋಷದ ಮಾತು. ಮನೆಗೆ ಬಂದ ಕೂಡಲೇ ಮೊಬೈಲ್ ಡಾಟಾ ಆನ್ ಮಾಡಿ, ಯಾರದ್ದೆಲ್ಲ ವಿಶಶ್ ಇದೆ, ಯಾರೆಲ್ಲಾ ನನ್ನ ಫೋಟೊವನ್ನು ಸ್ಟೇಟಸ್‌ಗೆ ಹಾಕಿದ್ದಾರೆ ಅಂತಾ ನೋಡುವ ಕುತೂಹಲ. ಐದಾರು ಕರೆಗಳು, ಮತ್ತೆರಡು ವಿಡಿಯೋ ಕಾಲ್‌ಗಳು. ಅಷ್ಟರಲ್ಲೇ ಗಂಟೆ ಏಳಾಗುತ್ತಲೇ ಅಮ್ಮಾ, “ಇವತ್ತೇನು ಕಾಲೇಜಿಗೆ ಹೋಗುವ ಸುದ್ದಿಯಿಲ್ಲ’ ಎಂದಾಗ ಗಡಿಬಿಡಿಯಲ್ಲಿ ಮೊಬೈಲು ಬದಿಗಿಟ್ಟು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಬರಲು ಸಿದ್ಧರಾದಾಗ ನಮ್ಮ ಹಳೆ ಗೆಳೆಯರು ಎಲ್ಲಿಯಾದರೂ ಸಿಕ್ಕಿಬಿಟ್ಟರೆ ಅವರ ಬರ್ತ್‌ಡೇ ವಿಶ್‌ಗಳು.
ಕೆಲವೊಮ್ಮೆ ವಿಶ್ ಮಾಡಲು ಮರೆತುಹೋದರೂ ಪಾರ್ಟಿ ಕೇಳ್ಳೋದು ಮಾತ್ರ ಮರೆಯೋಲ್ಲ. ಅದರಲ್ಲೂ ನನ್ನ ಗೆಳತಿ ವೈಷ್ಣವಿ, ಬರ್ತ್ ಡೇ ಇಲ್ಲದಿದ್ದರೂ ತಿಂಗಳಲ್ಲಿ ಎರಡು ದಿನ ಪಾರ್ಟಿ ಕೊಡುವುದು ಮಾತ್ರ ತಪ್ಪೋದಿಲ್ಲ. ಹೀಗಾಗಿ ಅವಳೊಂದಿಗೆ ನಿನ್ನ ಬರ್ತ್‌ಡೇ ಪಾರ್ಟಿ ಯಾವಾಗ ಅಂತ ಕೇಳ್ಳೋದೇ ಇಲ್ಲ. ಬರ್ತ್‌ಡೇ ಆಚರಣೆ ಅಂದಾಗ ನೆನಪಾಯಿತು, ಈ ಹುಡುಗರ ಬರ್ತ್‌ಡೇ ಆಚರಣೆಗೂ, ಹುಡುಗೀರ ಬರ್ತ್‌ಡೇ ಆಚರಣೆಗೂ ವ್ಯತ್ಯಾಸ ಇದೆ. ಹುಡುಗಿಯರಾದ್ರೆ ಏನಾದ್ರೂ ಗಿಫ್ಟ್ ಕೊಟ್ಟು ಪಾರ್ಟಿ ತಗೋಳ್ತಾರೆ. ಹುಡುಗರಾದ್ರೆ ಏನೂ ಕೊಡದೆ ಪಾರ್ಟಿ ತಗೋಳ್ತಾರೆ ಅಂತ. ಎರಡರಲ್ಲೂ ಪಾರ್ಟಿ ಖಾಯಂ ಬಿಡಿ!
ಮತ್ತೆ ಸಂಜೆಯಾಗುತ್ತಲೇ ಮನೆಕಡೆ ಬಂದಾಗ ಅಡುಗೆ ಕೋಣೆ ತುಂಬೆಲ್ಲಾ ಅಮ್ಮನ ಓಡಾಟ. ಯಾಕಂತ ಕೇಳಿದರೆ ಒಂದೇ ಮಾತು, “ಇವತ್ತು ನಿನ್ನ ಬರ್ತ್‌ಡೇ ಅಲ್ವಾ? ಹಾಗಾಗಿ ಏನಾದರೂ ಸ್ಪೆಷಲ್ ಆಗಿ ಅಡುಗೆ ಮಾಡೋಣ’ ಅಂತ. ಹಾಗಾದರೆ ಆ ದಿನವಿಡೀ ನಮಗಾಗಿ ಮೀಸಲು ಅನ್ನೋದು ನನ್ನ ಅಭಿಪ್ರಾಯ. ರಾತ್ರಿ ಆಗುತ್ತಲೇ ಕೇಕ್ ಕಟ್ಟಿಂಗ್, ಯಾರಾದರೂ ಸಂಬಂಧಿಕರು ಇದ್ದರೆ ಒಂದೆರಡು ಗಿಫ್ಟ್ಗಳು ಇರಬಹುದು.
ಮರುದಿನ ಬೆಳಗಾಗುತ್ತಲೆ ಮೊಬೈಲ್ ಡಾಟಾ ಆನ್ ಮಾಡಿದರೆ ಮತ್ತದೇ ಬರ್ತ್‌ಡೇ ಕ್ಯಾಪ್ಶನ್ಸ್ , ಹ್ಯಾಪಿ ಬರ್ತ್‌ಡೇ ಅಂತೆಲ್ಲಾ “ನಿನ್ನ ಪಾರ್ಟಿ ಬಾಕಿ ಉಂಟು’ ಅಂತ! ಹೀಗೆ ಕಿಟಕಿಯತ್ತ ನೋಡುತ್ತ, ನಗುತ್ತಿದ್ದ ನಾನು ಫಸ್ಟ್ ಅವರ್‌ನ ಬೆಲ್ ಹೊಡೆದಾಗಲೇ ವಾಸ್ತುಸ್ಥಿತಿಗೆ ಬರಬೇಕಾಯಿತು.
ನೀತಾ ಆರ್.ಕೆ.
ದ್ವಿತೀಯ ಕಲಾ ವಿಭಾಗ, ವಿವೇಕಾನಂದ ಪಿಯು ಕಾಲೇಜು, ಪುತ್ತೂರು