ಕೊಲಂಬೊ: ಐಸಿಸಿ ವನಿತಾ ವಿಶ್ವಕಪ್ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಆತಿಥೇಯ ಶ್ರೀಲಂಕಾ ವಿರುದ್ಧ 114 ರನ್ನುಗಳ ಭರ್ಜರಿ ಜಯ ಸಾಧಿಸಿದೆ. ಮಂಗಳವಾರ ಕೊಲಂಬೋದ “ಪಿ. ಸಾರಾ ಓವಲ್’ನಲ್ಲಿ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ನಾಲ್ಕೇ ವಿಕೆಟಿಗೆ 259 ರನ್ ಪೇರಿಸಿದರೆ, ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 145 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೂವರ ಅರ್ಧ ಶತಕ
ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮೂವರಿಂದ ಅಮೋಘ ಆಟ ದಾಖಲಾಯಿತು. ದೇವಿಕಾ ವೈದ್ಯ 89 ರನ್ (103 ಎಸೆತ, 11 ಬೌಂಡರಿ), ನಾಯಕಿ ಮಿಥಾಲಿ ರಾಜ್ ಔಟಾಗದೆ 70 ರನ್ (62 ಎಸೆತ, 8 ಬೌಂಡರಿ) ಮತ್ತು ಆರಂಭಿಕ ಆಟಗಾರ್ತಿ ದೀಪ್ತಿ ಶರ್ಮ 54 ರನ್ (96 ಎಸೆತ, 4 ಬೌಂಡರಿ, 1 ಸಿಕ್ಸರ್) ಬಾರಿಸಿದರು.
ಆರಂಭಿಕ ಆಟಗಾರ್ತಿ ಮೋನಾ ಮಿಶ್ರಮ್ (6) ಬೇಗನೇ ಪೆವಿಲಿ ಯನ್ ಸೇರಿಕೊಂಡ ಬಳಿಕ ಜತೆಗೂಡಿದ ದೀಪ್ತಿ-ದೇವಿಕಾ ದ್ವಿತೀಯ ವಿಕೆಟಿಗೆ 123 ರನ್ ಪೇರಿಸಿದರು. ದೇವಿಕಾ-ಮಿಥಾಲಿ ಜೋಡಿಯಿಂದ 3ನೇ ವಿಕೆಟಿಗೆ 49 ರನ್ ಬಂತು. ಬಳಿಕ ಹರ್ಮನ್‌ಪ್ರೀತ್ ಕೌರ್ (20) ಅವರನ್ನು ಕೂಡಿಕೊಂಡ ಮಿಥಾಲಿ 4ನೇ ವಿಕೆಟ್ ಜತೆಯಾಟದಲ್ಲಿ 63 ರನ್ ಪೇರಿಸಿದರು.
ಲಂಕೆಯ ಅಗ್ರ ಕ್ರಮಾಂಕದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದರೂ ಇವರ ಆಟ ನಿಧಾನ ಗತಿಯಿಂದ ಕೂಡಿತ್ತು. ಹೀಗಾಗಿ ಇನೋಕಾ ರಣವೀರ ಬಳಗ ಯಾವ ಹಂತದಲ್ಲೂ ಭಾರತದ ಮೊತ್ತಕ್ಕೆ ಸಾಟಿಯಾಗಲಿಲ್ಲ.
ಇಂದು ಥಾಯ್ಲೆಂಡ್ ಎದುರಾಳಿ
ಭಾರತ ಬುಧವಾರ ಥಾಯ್ಲೆಂಡ್ ವಿರುದ್ಧ ಆಡಲಿದೆ. ಬಳಿಕ ಅಯರ್‌ಲ್ಯಾಂಡ್ (ಫೆ. 10) ಮತ್ತು ಜಿಂಬಾಬ್ವೆಯನ್ನು (ಫೆ. 13) ಎದುರಿಸಲಿದೆ. ಪಂದ್ಯಾವಳಿಯಲ್ಲಿ 10 ತಂಡಗಳು ಪಾಲ್ಗೊಂಡಿವೆ.
ಸಂಕ್ಷಿಪ್ತ ಸ್ಕೋರ್: ಭಾರತ-50 ಓವರ್‌ಗಳಲ್ಲಿ 4 ವಿಕೆಟಿಗೆ 259 (ದೇವಿಕಾ 89, ಮಿಥಾಲಿ ಔಟಾಗದೆ 70, ದೀಪ್ತಿ 54, ಪ್ರಬೋಧನಿ 56ಕ್ಕೆ 2). ಶ್ರೀಲಂಕಾ-50 ಓವರ್‌ಗಳಲ್ಲಿ 8 ವಿಕೆಟಿಗೆ 145 (ಹಸಿನಿ 34, ಜಯಾಂಗನಿ 30, ರಾಜೇಶ್ವರಿ 19ಕ್ಕೆ 2, ಏಕ್ತಾ ಬಿಷ್ಟ್ 27ಕ್ಕೆ 2). ಪಂದ್ಯಶ್ರೇಷ್ಠ: ದೇವಿಕಾ ವೈದ್ಯ.