ಮುಂಬೈ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಚಾಲ್ತಿಯಲ್ಲಿರುವ ಅಶಾಂತಿಯ ಕಾರಣದಿಂದ ಮಹಿಳಾ ಟಿ20 ವಿಶ್ವಕಪ್ ಕೂಟವನ್ನು (T20 World Cup) ಸ್ಥಳಾಂತರಿಸಲಾಗಿದೆ.
ಈ ಹಿಂದೆ ಟಿ20 ವಿಶ್ವಕಪ್ ಕೂಟವನ್ನು ಬಾಂಗ್ಲಾದೇಶದಲ್ಲಿ ನಡೆಸಲು ಯೋಜಿಸಲಾಗಿತ್ತು. ಇದೀಗ ಅಲ್ಲಿಂದ ಸ್ಥಳಾಂತರವಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಸಲಾಗುವುದು ಎಂದು ಐಸಿಸಿ ಮಂಗಳವಾರ ಹೇಳಿದೆ.
ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿರುವ ಕಾರ್ಯಕ್ರಮವು ಈಗ ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ.
“ಬಾಂಗ್ಲಾದೇಶದಲ್ಲಿ ಮಹಿಳಾ ಟಿ 20 ವಿಶ್ವಕಪ್ ಅನ್ನು ಆಯೋಜಿಸದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಜೆಫ್ ಅಲ್ಲಾರ್ಡಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದೇಶದ ಅರಾಜಕತೆಯ ಕಾರಣದಿಂದ ಟಿ20 ವಿಶ್ವಕಪ್ ಆಯೋಜನೆಗೆ ಐಸಿಸಿ ಈ ಹಿಂದೆ ಬಿಸಿಸಿಐ ಬಳಿ ಕೇಳಿಕೊಂಡಿತ್ತು. ಆದರೆ ಬಿಸಿಸಿಐ ನಿರಾಕರಿಸಿತ್ತು. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.