Advertisement

ವನಿತಾ ಟಿ20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾವನ್ನು ಕೆಡವಿದ ಭಾರತ

11:34 PM Jan 20, 2023 | Team Udayavani |

ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ವನಿತಾ ಟಿ20 ತ್ರಿಕೋನ ಕ್ರಿಕೆಟ್‌ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ 27 ರನ್ನುಗಳ ಆಘಾತವಿಕ್ಕಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 12ನೇ ಓವರ್‌ ವೇಳೆ 69ಕ್ಕೆ 5 ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿ ಯಲ್ಲಿತ್ತು. ಆದರೆ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದ ಅಮನ್‌ಜೋತ್‌ ಕೌರ್‌ ಮತ್ತು ದೀಪ್ತಿ ಶರ್ಮ ನೀಡಿದ ತಿರುಗೇಟಿನಿಂದ 6 ವಿಕೆಟಿಗೆ 147 ರನ್‌ ಗಳಿಸಲು ಯಶಸ್ವಿ ಯಾಯಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 9 ವಿಕೆಟಿಗೆ 120 ರನ್‌ ಮಾಡಿ ಶರಣಾಯಿತು.

ಭಾರತದ ಅಗ್ರ ಕ್ರಮಾಂಕದಲ್ಲಿ ಮಿಂಚಿದ್ದು ಓಪನರ್‌ ಯಾಸ್ತಿಕಾ ಭಾಟಿಯಾ ಮಾತ್ರ. ಅವರು 34 ಎಸೆತಗಳಿಂದ 35 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಶಫಾಲಿ ವರ್ಮ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡುತ್ತಿರುವು ದರಿಂದ ಯಾಸ್ತಿಕಾ ಇನ್ನಿಂಗ್ಸ್‌ ಆರಂಭಿ ಸಲಿಳಿದರು. ಉಸ್ತುವಾರಿ ನಾಯಕಿ ಸ್ಮತಿ ಮಂಧನಾ (7), ಹಲೀìನ್‌ ದೇವಲ್‌ (8), ಜೆಮಿಮಾ ರೋಡ್ರಿಗಸ್‌ (ಗೋಲ್ಡನ್‌ ಡಕ್‌), ದೇವಿಕಾ ವೈದ್ಯ (9) ಕ್ಲಿಕ್‌ ಆಗಲಿಲ್ಲ. ಅನಾರೋಗ್ಯದಿಂದಾಗಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಈ ಪಂದ್ಯದಿಂದ ಹೊರಗುಳಿಯ ಬೇಕಾಯಿತು.

ದೀಪ್ತಿ ಶರ್ಮ-ಅಮನ್‌ಜೋತ್‌ ಸೇರಿಕೊಂಡು ಭಾರತದ ರಕ್ಷಣೆಗೆ ನಿಂತರು. 7ನೇ ವಿಕೆಟಿಗೆ 50 ಎಸೆತ ಗಳಿಂದ 76 ರನ್‌ ಪೇರಿಸುವ ಮೂಲಕ ತಂಡವನ್ನು ಹೋರಾಟಕ್ಕೆ ಅಣಿಗೊಳಿಸಿದರು. ಅಮನ್‌ಜೋತ್‌ 30 ಎಸೆತಗಳಿಂದ ಅಜೇಯ 41 ರನ್‌ ಸಿಡಿಸಿದರು (7 ಬೌಂಡರಿ). ದೀಪ್ತಿ ಕೊಡುಗೆ 23 ಎಸೆತಗಳಿಂದ 33 ರನ್‌ (1 ಬೌಂಡರಿ, 1 ಸಿಕ್ಸರ್‌). ಮೊಹಾಲಿಯ ಬಡಗಿಯೊಬ್ಬರ ಮಗಳಾಗಿರುವ ಅಮನ್‌ಜೋತ್‌ ತಮ್ಮ ಅಮೋಘ ಬ್ಯಾಟಿಂಗ್‌ ಸಾಹಸಕ್ಕಾಗಿ ಪದಾರ್ಪಣ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಹಿರಿಯ ಆಫ್ಸ್ಪಿನ್ನರ್‌ ದೀಪ್ತಿ ಶರ್ಮ ಬೌಲಿಂಗ್‌ನಲ್ಲೂ ಮಿಂಚಿ 3 ವಿಕೆಟ್‌ ಕೆಡವಿದರು. ದೇವಿಕಾ ವೈದ್ಯ ಇಬ್ಬರನ್ನು ಪೆವಿಲಿಯನ್ನಿಗೆ ಅಟ್ಟಿದರು. ರಾಜೇಶ್ವರಿ ಗಾಯಕ್ವಾಡ್‌, ಸ್ನೇಹ್‌ ರಾಣಾ, ರಾಧಾ ಯಾದವ್‌ ಒಂದೊಂದು ವಿಕೆಟ್‌ ಉರುಳಿಸಿದರು.

Advertisement

ಭಾರತವಿನ್ನು ಸೋಮವಾರ ವೆಸ್ಟ್‌ ಇಂಡೀಸ್‌ ವಿರುದ್ಧ ಆಡಲಿದ್ದು, ರಾತ್ರಿ 10.30ಕ್ಕೆ ಪಂದ್ಯ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ-6 ವಿಕೆಟಿಗೆ 147 (ಅಮನ್‌ಜೋತ್‌ ಔಟಾಗದೆ 41, ಯಾಸ್ತಿಕಾ 35, ದೀಪ್ತಿ 33, ಎಂಲಬಾ 15ಕ್ಕೆ 2). ದಕ್ಷಿಣ ಆಫ್ರಿಕಾ-9 ವಿಕೆಟಿಗೆ 120 (ಲುಸ್‌ 29, ಟ್ರಯಾನ್‌ 26, ಕಾಪ್‌ 22, ದೀಪ್ತಿ 30ಕ್ಕೆ 3, ದೇವಿಕಾ 19ಕ್ಕೆ 2).

ಪಂದ್ಯಶ್ರೇಷ್ಠ: ಅಮನ್‌ಜೋತ್‌ ಕೌರ್‌.

Advertisement

Udayavani is now on Telegram. Click here to join our channel and stay updated with the latest news.

Next