ನವೀ ಮುಂಬಯಿ: ಜೆಮಿಮಾ ರಾಡ್ರಿಗಸ್ ಮತ್ತು ಸ್ಮತಿ ಮಂಧನಾ ಅವರ ಆಕರ್ಷಕ ಅರ್ಧಶತಕದಿಂದಾಗಿ ಭಾರತೀಯ ವನಿತಾ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ತಂಡದೆದುರಿನ ಮೊದಲ ಟಿ20 ಪಂದ್ಯದಲ್ಲಿ 49 ರನ್ನುಗಳಿಂದ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ಭರ್ಜರಿ ಆಟದ ಪ್ರದರ್ಶನ ನೀಡಿ ನಾಲ್ಕು ವಿಕೆಟಿಗೆ 195 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಡೀಂಡ್ರ ಡೊಟಿನ್ ಮತ್ತು ಕಿಯಾನಾ ಜೊಸೆಫ್ ಅವರ ಉತ್ತಮ ಬ್ಯಾಟಿಂಗ್‌ನ ಹೊರತಾಗಿಯೂ ವೆಸ್ಟ್‌ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 146 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಡೊಟಿನ್ 52 ಮತ್ತು ಜೊಸೆಫ್ 49 ರನ್ ಹೊಡೆದರು. ಈ ಗೆಲುವಿನಿಂದ ಭಾರತ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ದ್ವಿತೀಯ ಪಂದ್ಯ ಡಿ. 17ರಂದು ನಡೆಯಲಿದೆ. ಈ ಸರಣಿ ಬಳಿಕ ಉಭಯ ತಂಡಗಳ ನಡುವೆ ಏಕದಿನ ಸರಣಿ ಜರಗಲಿದೆ.
ಆಸ್ಟ್ರೇಲಿಯ ಪ್ರವಾಸದ ವೇಳೆ ತನ್ನ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸಿದ್ದ ಮಂಧನಾ ಈ ಪಂದ್ಯದಲ್ಲಿಯೂ ಅಮೋಘವಾಗಿ ಆಡಿ ಗಮನ ಸೆಳೆದರು. 33 ಎಸೆತ ಎದುರಿಸಿದ ಅವರು 53 ರನ್ ಗಳಿಸಿದರು. ಇದು ಅವರ 28ನೇ ಅರ್ಧಶತಕವಾಗಿದೆ. ಇನ್ನೊಂದು ಕಡೆ ರಾಡ್ರಿಗಸ್ ಕೂಡ ಭರ್ಜರಿಯಾಗಿ ಆಡಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. 35 ಎಸೆತಗಳಿಂದ 73 ರನ್ ಸಿಡಿಸಿದರು. 9 ಬೌಂಡರಿ ಮತ್ತು 2 ಸಿಕ್ಸರ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರು: ಭಾರತ 4 ವಿಕೆಟಿಗೆ 195 (ಸ್ಮತಿ ಮಂಧನಾ 53, ಜೆಮಿಮಾ ರಾಡ್ರಿಗಸ್ 73, ಕರಿಷ್ಮಾ ರಾಮ್‌ಹರಾಕ್ 18ಕ್ಕೆ 2); ವೆಸ್ಟ್‌ಇಂಡೀಸ್ 7 ವಿಕೆಟಿಗೆ 146 (ಕಿಯಾನಾ ಜೊಸೆಫ್ 49, ಡೀಂಡ್ರ ಡೊಟಿನ್ 52, ಟಿಟಾಸ್ ಸಾಧು 37ಕ್ಕೆ 3, ದೀಪ್ತಿ ಶರ್ಮ 21ಕ್ಕೆ 2, ರಾಧಾ ಯಾದವ್ 28ಕ್ಕೆ 2).