ಉಡುಪಿ: ಯಾವ ಮನೆಯಲ್ಲಿ ನಿತ್ಯವೂ ಹೊಸ್ತಿಲು ಪೂಜಿಸಿ, ರಂಗೋಲಿ ಬರೆದು, ತುಳಸಿಗೆ ದೀಪ ಹಚ್ಚಿ ಆರಾಧನೆ ಮಾಡಿ, ನಿತ್ಯ ಭಜನೆ ನೆರವೇರುತ್ತದೋ ಅಲ್ಲಿ ಸಾಕ್ಷಾತ್ ಭಗವಂತನ ಸನ್ನಿಧಾನ ತನ್ನಿಂತಾನೇ ಬಂದು ನೆಲೆಯಾಗುತ್ತದೆ. ಆಧುನಿಕತೆಯ ಸೋಗಿನಲ್ಲಿ ಹಿರಿಯರಿಂದ ಪರಂಪರಾಗತವಾಗಿ ಆಚರಿಸಿ ಕೊಂಡು ಬಂದಿರುವ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ವಿಸ್ತರಿಸುವಲ್ಲಿ ಮಹಿಳೆಯರ ಪಾತ್ರ ಹಿರಿದಾದುದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸತøಜೆಗಳನ್ನಾಗಿ ಬೆಳೆಸಿದಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ನುಡಿದರು.
ಮೂಡುತೋನ್ಸೆಯಲ್ಲಿ ರವಿವಾರ ನಡೆದ ಬ್ರಹ್ಮಮಂಡಲೋತ್ಸವ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದ ಶ್ರೀಪಾದರು, ಇಂತಹ ಪರಂಪರಾಗತ ಆಚರಣೆಗಳಿಂದ ಕುಟುಂಬವೊಂದು ಒಂದೇ ಸೂರಿನಡಿ ಸೇರಲು ಉತ್ತಮ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಆಶೀರ್ವಚನ ನೀಡಿದರು.
ತೋನ್ಸೆ ಸಾಲ್ಯಾನ್ ಕುಟುಂಬಸ್ಥರ ನಾಗಬ್ರಹ್ಮ ಮೂಲಸ್ಥಾನ ಸಮಿತಿ ಅಧ್ಯಕ್ಷ ಕೆ. ಕೃಷ್ಣ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಮಂಡಲೋತ್ಸವ ರೂವಾರಿ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಬ್ರಹ್ಮಮಂಡಲೋತ್ಸವ ಯಶಸ್ಸಿಗೆ ಸಹಕಾರ ನೀಡಿದ ಸರ್ವರನ್ನು ಸ್ಮರಿಸಿದರು.
ಕೆ.ಎಲ್. ಕುಂಡಂತಾಯ ಧಾರ್ಮಿಕ ಪ್ರವಚನ ನೀಡಿ, ಧಾರ್ಮಿಕ ಆಚರಣೆಗಳು ವೈಭವೀಕರಣದತ್ತ ಸಾಗದೆ ಸಹಜತೆಯಿಂದ ಕೂಡಿರಬೇಕೆಂದರು.
ನಾಗಪಾತ್ರಿ ಕಲ್ಲಂಗಳ ರಾಮಚಂದ್ರ ಕುಂಜತ್ತಾಯ, ವೇ| ಮೂ| ಕೃಷ್ಣಮೂರ್ತಿ ತಂತ್ರಿ, ತೋನ್ಸೆ ಸಾಲ್ಯಾನ್ ಕುಟುಂಬಸ್ಥರ ನಾಗಬ್ರಹ್ಮ ಮೂಲಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಬ್ರಹ್ಮಮಂಡಲೋತ್ಸವದ ಯಶಸ್ಸಿಗೆ ಸಹಕರಿಸಿದ ತೋನ್ಸೆ ಸಾಲ್ಯಾನ್ ಮೂಲಸ್ಥಾನ ಸಮಿತಿ ಕಾರ್ಯದರ್ಶಿ ನವೀಶ್ ನವೀನ್ ಚಂದ್ರ ಸಾಲ್ಯಾನ್, ಶಂಭು ಶಂಕರ ಸಾಲ್ಯಾನ್, ಕೃಷ್ಣ ಸಾಲ್ಯಾನ್, ಆನಂದ್ ಬಾಯರಿ, ದೊಡ್ಡಣಗುಡ್ಡೆ ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್, ಸ್ಥಳದಾನಿಗಳಾದ ಶೇಖರ್ ಶೆಟ್ಟಿ, ದಿನೇಶ್ ಕರ್ಕೇರ ಹಾಗೂ ಸ್ಥಳೀಯರನ್ನು ಸುಬ್ರಹ್ಮಣ್ಯ ಶ್ರೀಪಾದರು ಸಮ್ಮಾನಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದ ಪ್ರಶಂಸಾ ತಂಡದ ಕಲಾವಿದರನ್ನು ಪ್ರಜ್ಞಾ ಇಂಟರ್‌ನ್ಯಾಶನಲ್ ಶಾಲಾ ಪ್ರಾಂಶುಪಾಲೆ ಉಷಾ ರಮಾನಂದ ಸಮ್ಮಾನಿಸಿದರು. ಸತೀಶ್ ಶೆಟ್ಟಿ ನಿರೂಪಿಸಿ, ವಂದಿಸಿದರು.