Advertisement

ಪಪಂ ಆಡಳಿತ ವ್ಯವಸ್ಥೆ ವಿರುದ್ಧ ಮಹಿಳೆಯರ ಪ್ರತಿಭಟನೆ

03:19 PM Nov 14, 2020 | Suhan S |

ಬೀಳಗಿ: ಕುಡಿಯುವ ನೀರಿನ ಅವ್ಯವಸ್ಥೆ, ಸರಿಯಾದ ನಿರ್ವಹಣೆಯಿಲ್ಲದೆ ಇದ್ದು ಇಲ್ಲದಂತಿರುವ ಮಹಿಳಾ ಶೌಚಾಲಯಗಳ ಹದಗೆಟ್ಟ ವ್ಯವಸ್ಥೆ ಮತ್ತು ಕಸಗೂಡಿಸದೆ ಅಶುಚಿತ್ವ ರಸ್ತೆಗಳ ದುಸ್ಥಿತಿ ಖಂಡಿಸಿ ಪಟ್ಟಣದ ಕಾಟಕರ ಓಣಿಯ ಮಹಿಳೆಯರು ಸ್ಥಳೀಯ ಪಪಂ ಆಡಳಿತ ವ್ಯವಸ್ಥೆಯ ವಿರುದ್ಧ ಶುಕ್ರವಾರ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಾಟಕರ ಓಣಿಯ ಕೌಲಗಿಯವರ ಹಿಟ್ಟಿನ ಗಿರಣಿ ಹತ್ತಿರದ ಅವ್ಯವಸ್ಥೆಯ ಆಗರವಾಗಿರುವ ಮಹಿಳೆಯರ ಶೌಚಾಲಯ ಎದುರು ಕೆಲಕಾಲ ಪ್ರತಿಭಟಿಸಿದ ಮಹಿಳೆಯರು, 24 ಆಸನಗಳಮತ್ತು 10 ಆಸನಗಳ ಪ್ರತ್ಯೇಕ ಎರಡುಶೌಚಾಲಯ ಕಟ್ಟಡಗಳಿವೆ. ನೂತನವಾಗಿ ನಿರ್ಮಿಸಿದ 10 ಆಸನಗಳ ಶೌಚಾಲಯ ಅನುದಾನ ಬಳಕೆ ಮಾಡಲು ಮಾತ್ರ ಸೀಮಿತವಾಗಿದೆ. ಕಟ್ಟಡ ಕಟ್ಟಿದ ನಂತರ ಒಂದೇ ಒಂದು ದಿವಸ ಉಪಯೋಗಿಸಿಲ್ಲ. ಇಲ್ಲಿ ನೀರಿನ,ದೀಪದ ವ್ಯವಸ್ಥೆಯಿಲ್ಲ. ಹೊಸ ಶೌಚಾಲಯ ಕಟ್ಟಡ ನಿರುಪಯುಕ್ತವಾದ ಪರಿಣಾಮ, ಶೌಚಾಲಯದ ಸಂಪರ್ಕ ಪೈಪ್‌ಗ್ಳು ಕೂಡ ಕಿತ್ತು ಹೋಗಿವೆ.

ಅಲ್ಲದೆ, ಈಗಾಗಲೆ ಬಳಕೆಯಲ್ಲಿರುವ 24 ಆಸನಗಳ ಶೌಚಾಲಯದ ಅನೇಕ ಕೋಣೆಗಳ ಬಾಗಿಲುಗಳು ಕಿತ್ತಿಹೋಗಿವೆ. ನೀರಿನಸರಬರಾಜು ನಿರ್ವಹಣೆಯಿಲ್ಲ. ಶೌಚಲಯದ ನಳಗಳಿಗೆ ಚಾವಿಯಿಲ್ಲ. ಶುಚಿತ್ವ ಗಗನ ಕುಸುಮವಾಗಿದೆ. ಶೌಚಾಲಯ ಪ್ರವೇಶಿಸದಷ್ಟು ಗಬ್ಬು ನಾರುತ್ತಿದೆ. ವೃದ್ಧರಿಗೆಂದು ಅಳವಡಿಸಿದ ಎರಡು ಕಮೋಡ್‌ ವ್ಯವಸ್ಥೆಯ ಶೌಚಾಲಯ ನೀರಿನ ಸಂಪರ್ಕವಿಲ್ಲದೆ ಹಾಳಾಗುತ್ತಿವೆ. ಇನ್ನು, ಕುಡಿಯುವ ನೀರಿನ ತೊಂದರೆಯಂತು ದೇವರೇ ಬಲ್ಲ. ಹೇಳುವುದು ಎರಡು ದಿನಕ್ಕೊಮ್ಮೆ, ವಾಸ್ತವವಾಗಿ ನೀರು ಬಿಡುವುದು ಐದಾರು ದಿನಕ್ಕೊಮ್ಮೆ. ಕೇಳಿದರೆ ದಿನಕ್ಕೊಂದು ಸಬೂಬು. ಪರಿಣಾಮ, ನೀರಿಗಾಗಿ ಪರಿತಪಿಸುವಂತಾಗಿದೆ.

ನೀರು ಬಿಡುವ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪಪಂ ಅಧಿ ಕಾರಿಗಳು ತಿರುಗಿ ನೋಡುತ್ತಿಲ್ಲ. ಸ್ಥಳಿಯ ಸದಸ್ಯರು ಕೂಡ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ರಸ್ತೆಯಲ್ಲಿ ಹದಿನೈದು ದಿನಗಳವರೆಗೆ ಕಸ ಬಿದ್ದರೂ ಕೇಳುವರಿಲ್ಲ ಎಂದು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೆ ನೀರು, ಶೌಚಾಲಯ, ಶುಚಿತ್ವದ ಕುರಿತು ಪಪಂ ಅಧಿಕಾರಿಗಳು ಗಮನಹರಿಸಬೇಕು. ಇಲ್ಲದಿದ್ದರೆ ಪಪಂ ಎದುರು ಧರಣಿ ಕುಳಿತು ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಶಾವಂತ್ರೆವ್ವ ಕುರಿ, ದುಂಡವ್ವ ಹೆಳವರ, ಶೋಭಾ ಬೀಳಗಿ, ಈರವ್ವ ಮಾತಿವಡ್ಡರ, ಚೌಡವ್ವ ಬಂಡಿವಡ್ಡರ, ರೇಣವ್ವ ಹೆಳವರ, ಸಾಬವ್ವ ಮಮದಾಪುರ ಇತರರು ಇದ್ದರು.

Advertisement

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವೆ.ಶೌಚಾಲಯ ಅವ್ಯವಸ್ಥೆ ಸರಿಪಡಿಸಲು ಹಾಗೂ ನೀರಿನ ಸಂಪರ್ಕ ಕೊಡಲು ಕ್ರಮ ಕೈಗೊಳ್ಳಲಾಗಿದೆ. ಕುಡಿವ ನೀರಿನ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿಯೂ ಶೀಘ್ರ ಕ್ರಮ ಕೈಗೊಳ್ಳುವೆ.ಐ.ಕೆ.ಗುಡದಾರಿ, ಮುಖ್ಯಾಧಿಕಾರಿಗಳು, ಬೀಳಗಿ

Advertisement

Udayavani is now on Telegram. Click here to join our channel and stay updated with the latest news.

Next