ಮೈಸೂರು: ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)ಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ಚಿಕ್ಕಗಡಿಯಾರ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದ ಸಂಘಟನೆ, ವರದಕ್ಷಿಣೆಗಾಗಿ ಕೊಲೆ, ಮರ್ಯಾದೆ ಹತ್ಯೆಗಳು, ಆಸಿಡ್ ದಾಳಿ, ಸಾಮೂಹಿತ ಅತ್ಯಾಚಾರ… ಹೀಗೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಅನಾದಾರ, ಅಗೌರವ, ಕ್ರೌರ್ಯಗಳಿಗೆ ಮಹಿಳೆ ತುತ್ತಾಗುತ್ತಿದ್ದಾಳೆ. ಹಸುಗೂಸಿನಿಂದ ಹಿಡಿದು ಎಲ್ಲಾ ವಯೋಮಾನದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 2022ರ ವರದಿಯ ಪ್ರಕಾರ ರಾಜ್ಯದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ.
ಇನ್ನೂ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಪ್ರಕಾರ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಮಹಿಳೆಯರ ಮೇಲೆ ಮೃಗೀಯ ದಾಳಿಗಳು ಮುಂದುವರೆಯಲು ಕಾರಣ ಪುರುಷ ಪ್ರಧಾನ ಧೋರಣೆ. ಜೊತೆಯಲ್ಲಿ ಅಶ್ಲೀಲತೆ, ಕ್ರೌರ್ಯದ ಪ್ರಸಾರ ಮತ್ತು ಮದ್ಯ, ಮಾದಕ ವಸ್ತುಗಳ ಹಾವಳಿಗಳಿಂದ ವಿಕೃತ ಲೈಂಗಿಕತೆಗಳೂ ಬೆಳೆಯುತ್ತಿದ್ದು, ಪಾತಕಿ ಆಯಾಮವನ್ನೂ ತಳೆಯುತ್ತಿವೆ ಎಂದು ಆರೋಪಿಸಿದರು.
ಇದೇ ವೇಳೆ ಯೋಜಿಸಿದ್ದ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಎಐಎಂಎಸ್ಎಸ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ಶಾಂತ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಎಐಎಂಎಸ್ ಎಸ್ ಜಿಲ್ಲಾ ಕಾರ್ಯದರ್ಶಿ ಜಿ.ಎಸ್. ಸೀಮಾ, ಮುಖಂಡರಾದ ನಳಿನ, ಅಭಿಲಾಷ, ಪುಟ್ಟರಾಜು, ಬಸವರಾಜು ಇದ್ದರು.