Advertisement

ಮಹಿಳಾ ಪೊಲೀಸ್‌ ಸಿಬ್ಬಂದಿಗೇ ಭದ್ರತೆ ಇಲ್ಲ!

12:37 PM Dec 06, 2017 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಹಿಳೆಯರಿಗೆ ಸರಿಯಾದ ರಕ್ಷಣೆಯಿಲ್ಲ, ನಿರ್ಭೀತಿಯಿಂದ ಓಡಾಡಲು ಸಾಧ್ಯವಿಲ್ಲ ಎಂಬ ಕೂಗು ಆಗಾಗ್ಗೆ ಕೇಳಿಬರುತ್ತಿದೆ. ಆದರೆ, ಇದೀಗ ಆ ಮಹಿಳೆಯರ ರಕ್ಷಣೆಗೆ ನೇಮಕಗೊಂಡಿರುವ ಮಹಿಳಾ ಪೊಲೀಸ್‌ ಸಿಬ್ಬಂದಿಯೇ ಕಿಡಿಗೇಡಿಗಳಿಂದಾಗಿ ನಿರ್ಭೀತಿಯಿಂದ ಕೆಲಸ ಮಾಡಲು ಕಷ್ಟ ಪಡುವಂತಾಗಿದೆ.

Advertisement

ಮಹಿಳೆಯರ ರಕ್ಷಣೆಗೆಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಪಿಂಕ್‌ ಹೊಯ್ಸಳ’ದ ಮಹಿಳಾ ಸಿಬ್ಬಂದಿ ಜತೆ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿದ್ದಲ್ಲದೆ ಲೈಂಗಿಕ ಕಿರುಕುಳವನ್ನೂ ನೀಡಿದ್ದಾರೆ.

ಕುಡಿದ ಅಮಲಿನಲ್ಲಿ ಪಿಂಕ್‌ ಹೊಯ್ಸಳದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತಿಕೆರೆ ನಿವಾಸಿ, ಖಾಸಗಿ ಸಂಸ್ಥೆಯೊಂದರ ಮಾರಾಟ ಪ್ರತಿನಿಧಿ ರೋಹಿತ್‌(24) ಯಶವಂತಪುರದ ಚೌಡೇಶ್ವರಿ ನಗರ ನಿವಾಸಿ, ಎಂಜಿನ್‌ ಆಯಿಲ್‌ ಶಾಪ್‌ ನಡೆಸುವ ವೈಭವ್‌(26) ಎಂಬುವರು ಇದೀಗ ವೈಯಾಲಿಕಾವಲ್‌ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾರೆ.

ಈ ಇಬ್ಬರು ಆರೋಪಿಗಳು ವೈಯಾಲಿಕಾವಲ್‌ ಠಾಣಾ ವ್ಯಾಪ್ತಿಯಲ್ಲಿರುವ ವಿನಾಯಕ ವೃತ್ತದ ಬಳಿಯ ಬಾರ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಪಿಂಕ್‌ ಹೊಯ್ಸಳದಲ್ಲಿ ಕುಳಿತಿದ್ದ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳಾ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮಹಿಳಾ ಸಿಬ್ಬಂದಿಯ ಮಾನಹಾನಿ, ಅವಾಚ್ಯ ಶಬ್ಧಗಳಿಂದ ನಿಂದನೆ, ಪ್ರಾಣ ಬೆದರಿಕೆ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?

Advertisement

ಸೋಮವಾರ ರಾತ್ರಿ ವೈಯಾಲಿಕಾವಾಲ್‌ ಠಾಣೆಗೆ ಸೇರಿದ ಪಿಂಕ್‌ ಹೊಯ್ಸಳಕ್ಕೆ ಒಬ್ಬರು ಮಹಿಳಾ ಕಾನ್‌ಸ್ಟೆàಬಲ್‌ ಮತ್ತು ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಹಾಗೂ ವಾಹನ ಚಾಲಕರಾಗಿ ಮುಖ್ಯಪೇದೆ ಮಂಜುನಾಥ್‌ ಅವರನ್ನು ನಿಯೋಜಿಸಲಾಗಿತ್ತು.

ತಡರಾತ್ರಿ 1 ಗಂಂಟೆ ಸುಮಾರಿಗೆ ವೈಯಾಲಿಕಾವಲ್‌ನ ವಿನಾಯಕ ವೃತ್ತದಲ್ಲಿ ವಾಹನ ಗಸ್ತು ತಿರುಗುತ್ತಿತ್ತು. ಈ ವೇಳೆ ಆರೋಪಿಗಳಾದ ರೋಹಿತ್‌ ಮತ್ತು ವೈಭವ್‌ ಕಂಠಪೂರ್ತಿ ಮದ್ಯ ಸೇವಿಸಿ ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಇದನ್ನು ಗಮನಿಸಿದ ಚಾಲಕ ಮಂಜುನಾಥ್‌, ಮನೆಗೆ ಹೋಗುವಂತೆ ಅವರಿಬ್ಬರಿಗೆ ಸೂಚಿಸಿದ್ದರು. ಆದರೆ, ಆರೋಪಿಗಳು ಪಿಂಕ್‌ ಹೋಯ್ಸಳ ಬಳಿ ಬಂದು ಚಾಲಕನನ್ನು ಬೆದರಿಸಿ ಬಲವಂತದಿಂದ ವಾಹನದ ಗಾಜು ಇಳಿಸಿದ್ದಾರೆ.

ನಂತರ ವಾಹನದ ಮುಂದಿನ ಸೀಟ್‌ನಲ್ಲಿ ಮಹಿಳಾ ಸಿಬ್ಬಂದಿ ಕುಳಿತಿರುವುದನ್ನು ಗಮನಿಸಿದ ಆರೋಪಿ ರೋಹಿತ್‌, ಒಳಗೆ ಕೈಹಾಕಿ ಮಹಿಳಾ ಸಿಬ್ಬಂದಿಯ ಮೈ ಮುಟ್ಟಿದ್ದಲ್ಲದೆ, “ಹಾಯ್‌ ಡಾರ್ಲಿಂಗ್‌’ ಎಂದು ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳಾ ಸಿಬ್ಬಂದಿ ಆತನನ್ನು ದೂರ ತಳ್ಳಿದ್ದಾರೆ. ಇದೇ ವೇಳೆ ಮತ್ತೂಬ್ಬ ಆರೋಪಿ ವೈಭವ್‌ ಕಾರಿನ ಹಿಂಬದಿ ಬಾಗಿಲು ತೆಗೆದು ಒಳಗೆ ಕುಳಿತಿದ್ದ ಗೃಹ ರಕ್ಷಕದ ಮಹಿಳಾ ಸಿಬ್ಬಂದಿ ಪಕ್ಕ ಕುಳಿತುಕೊಳ್ಳಲು ಯತ್ನಿಸಿದ್ದ.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಅವರ ಕೈ ಹಿಡಿದು ಎಳೆದಾಡಿದ್ದ. ಈ ವೇಳೆ ಪಿಂಕ್‌ ಹೊಯ್ಸಳ ಚಾಲಕ ಮಂಜುನಾಥ್‌ ಮಧ್ಯಪ್ರವೇಶಿಸಿ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸದಂತೆ ಎಚ್ಚರಿಸಿದಾಗ ಆರೋಪಿಗಳು ಆತನ ಮೇಲೂ ಹಲ್ಲೆಗೆ ಯತ್ನಿಸಿದ್ದರು.

ಈ ವೇಳೆ ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿಕೊಂಡರು. ಅಷ್ಟರಲ್ಲಿ ವಿನಾಯಕ ವೃತ್ತದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಪ್ರೇಮಚಂದ್ರಯ್ಯ ಮತ್ತು ಚಂದ್ರಪ್ಪ ಅವರು ಸ್ಥಳಕ್ಕೆ ಧಾವಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಅಷ್ಟಕ್ಕೂ ಸುಮ್ಮನಾಗದ ಆರೋಪಿಗಳು, ಠಾಣೆಯಲ್ಲಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಜಗ್ಗದ ಪೊಲೀಸರು ಪ್ರಕರಣ ದಾಖಲಿದ್ದಾರೆ.

ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿರುವ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯ ನಡೆದ ಒಂದು ಗಂಟೆಯೊಳಗೆ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ಇದೀಗ ವಿಚಾರಣೆಗೆ ಒಳಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಚಂದ್ರಗುಪ್ತ, ಕೇಂದ್ರ ವಲಯದ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next