ಮಂಗಳೂರು: ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಸಾಧನೆಯ ಮೂಲಕ ಶ್ರೇಯಸ್ಸುಕಾಣುತ್ತಿದ್ದಾರೆ. ಕಾರು, ಜೀಪು, ಬಸ್ಸು ಬಿಡುತ್ತಿದ್ದ ಮಹಿಳೆಯರು ವಿಮಾನಗಳಲ್ಲಿ ಪೈಲಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಇದಕ್ಕೆ ಸೇರ್ಪಡೆ ಎಂಬಂತೆ ರೈಲನ್ನು ಕೂಡ ಬಿಡುವ ಮೂಲಕ ಕರಾವಳಿ ಮೂಲದ ಮಹಿಳೆಯೊಬ್ಬರು ರೈಲ್ವೇ ಇಲಾಖೆಯಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ದ.ಕ. ಜಿಲ್ಲೆಯವಿಟ್ಲ ನಿವಾಸಿ ವನಿತಾಶ್ರೀ ಕರಾವಳಿ ಕರ್ನಾಟಕದ “ಏಕೈಕ ಮಹಿಳಾ ಲೋಕೋ ಪೈಲಟ್’ (ರೈಲು ಚಲಾಯಿಸುವವರು) ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಸ್ತುತ ಅವರು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ “ಶಂಟಿಂಗ್’ ಹುದ್ದೆ ನಿರ್ವಹಿಸುತ್ತಿದ್ದಾರೆ.
ನಿರ್ದಿಷ್ಟ ನಿಲ್ದಾಣ ವ್ಯಾಪ್ತಿಯಲ್ಲಿ ರೈಲುಗಳನ್ನು ಚಲಾಯಿಸುವುದು, ಎಂಜಿನ್ ಅಥವಾ ಬೋಗಿಗಳನ್ನು ಬದಲಾಯಿಸುವುದು, ತಂಗುವ ಅಥವಾ ತಡವಾಗಿ ಹೊರಡುವ ರೈಲುಗಳನ್ನು ಪ್ರತ್ಯೇಕ ಹಳಿಯಲ್ಲಿ ತಂದು ನಿಲ್ಲಿಸುವುದು ಮುಂತಾದ ಕೆಲಸಗಳನ್ನು “ಶಂಟಿಂಗ್’ ವೃತ್ತಿಯಲ್ಲಿ ಇರುವವರು ನಿಭಾಯಿಸುತ್ತಾರೆ. ಈ ವಿಭಾಗದ ಸಿಬಂದಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ರೈಲು ಚಲಾಯಿಸುವುದಿಲ್ಲ. ಸದ್ಯ ವನಿತಾಶ್ರೀ ಇದೇ ಕೆಲಸ ನಿರ್ವ ಹಿಸುತ್ತಿದ್ದಾರೆ. ವನಿತಾಶ್ರೀ “ಲೋಕೋ ಪೈಲಟ್’ ಆಗಿದ್ದರೂ ಇಬ್ಬರು ಚಿಕ್ಕ ಮಕ್ಕಳು ಇರುವ ಕಾರಣದಿಂದ ದೂರದ ಊರುಗಳಿಗೆ ರೈಲು ಚಲಾಯಿಸಲು ಅವಕಾಶ ಬೇಡ ಎಂದು ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ದೂರದ ರೈಲು ಓಡಾಟ ನಡೆಸುತ್ತಿಲ್ಲ.
ಡಿಪ್ಲೊಮಾ ಪದವಿ
ಮಂಗಳೂರು ಕೆಪಿಟಿಯಲ್ಲಿ ಅಟೋಮೊಬೈಲ್ ಡಿಪ್ಲೊಮಾ ಮುಗಿಸಿದ ಸಂದರ್ಭ ರೈಲ್ವೇ ಇಲಾಖೆಯಲ್ಲಿ ಉದ್ಯೋಗ ಅವಕಾಶ ಇರುವ ಬಗ್ಗೆ ತಿಳಿದಿದ್ದರು. ಆ ಬಳಿಕ ಪರೀಕ್ಷೆ ಬರೆದು, ವನಿತಾಶ್ರೀ 2006ರಲ್ಲಿ ಚೆನ್ನೈಯಲ್ಲಿ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.ವನಿತಾಶ್ರೀ ಪತಿ ಸತೀಶ್ ಪೊಲೀಸ್ ಇಲಾಖೆ ಉದ್ಯೋಗಿ. ಇಬ್ಬರು ಗಂಡುಮಕ್ಕಳಿದ್ದು, ಓರ್ವ ಐದನೇ ತರಗತಿ. ಇನ್ನೋರ್ವ ಒಂದನೇ ತರಗತಿ. ತಂದೆ ವಿಟ್ಲ ನಾರಾಯಣ ನಾಯ್ಕ ಪಶುಸಂಗೋಪನೆ ಇಲಾಖೆಯಲ್ಲಿ ನಿವೃತ್ತ ಕಾಂಪೌಂಡರ್. ತಾಯಿ ಜಯಶ್ರೀ ಮಂಗಳೂರು ಭವಿಷ್ಯ ನಿಧಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಬೆಂಗಳೂರು ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.