Advertisement

ಶೀಘ್ರವೇ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಮಹಿಳಾ ದರ್ಬಾರ್‌?

12:19 PM Sep 20, 2017 | |

ಬೆಂಗಳೂರು: ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಇತಿಹಾಸಕ್ಕೊಂದು ಭಾರೀ ತಿರುವು ಸಿಕ್ಕಿದೆ. ಮುಂದಿನ ಕೆಎಸ್‌ಸಿಎ ಚುನಾವಣೆಯಲ್ಲಿ ರಾಜ್ಯದ ಮಾಜಿ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರು ಸ್ಪರ್ಧಿಸಲಿದ್ದಾರೆ. ಇದು ಸಾಕಾರಗೊಂಡರೆ ಇದೇ ಮೊದಲ ಬಾರಿಗೆ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಡಳಿತ ವಿಭಾಗಕ್ಕೆ ಮಹಿಳೆಯರು ಪ್ರವೇಶಿಸಿದಂತಾಗುತ್ತದೆ. ಹೀಗೆಂದು ಸ್ವತಃ ಕೆಎಸ್‌ಸಿಎ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.

Advertisement

ರೇಸ್‌ನಲ್ಲಿದ್ದಾರೆ ಶಾಂತಾ, ಕಲ್ಪನಾ: ಅಧಿಕಾರ ಚುಕ್ಕಾಣಿ ಹಿಡಿಯಲಿರುವ ಸಂಭಾವ್ಯರ ಪಟ್ಟಿಯಲ್ಲಿ ಮಾಜಿ ಆಟಗಾರ್ತಿಯರಾದ ಶಾಂತ ರಂಗಸ್ವಾಮಿ, ಕಲ್ಪನಾ ವೆಂಕಟಾಚಾರ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅಲ್ಲದೆ ಮಾಜಿ ಆಟಗಾರ್ತಿಯರಾದ ಪ್ರಮೀಳಾ ಭಟ್‌, ಮಮತಾ ಮದೆನ್‌, ಮಾಲಾ, ಸುಜಾತ ಶ್ರೀಧರ್‌ ಮತ್ತಿತರರ ಮಾಜಿ ಆಟಗಾರ್ತಿಯರ ಹೆಸರು ಕೂಡ ಇದೆ ಎನ್ನಲಾಗಿದೆ.

ಲೋಧಾ ಶಿಫಾರಸು ಪ್ರಕಾರ ಮಹಿಳೆಗೆ ಅವಕಾಶ: ನಿವೃತ್ತ ನ್ಯಾಯಮೂರ್ತಿ ಲೋಧಾ ಸಮಿತಿ ಸುಪ್ರೀಂ ಕೋರ್ಟ್‌ಗೆ ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತ ತರುವುದಕ್ಕಾಗಿ ಕೆಲವೊಂದು ಶಿಫಾರಸು ಮಾಡಿತ್ತು. ಇದರಲ್ಲಿ ಪ್ರತಿ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಇಬ್ಬರು ಮಹಿಳೆಯರಿಗೂ ಅಧಿಕಾರ ನೀಡಬೇಕು ಎನ್ನುವುದು ಕೂಡ ಪ್ರಮುಖವಾಗಿತ್ತು. ಇದೇ ನಿಯಮ ಬಿಸಿಸಿಐ ಅಡಿ ಬರುವ ಎಲ್ಲ ರಾಜ್ಯಕ್ಕೂ ಅನ್ವಯಿ 
ಸುವುದರಿಂದ ಕರ್ನಾಟಕ ಮಹಿಳಾ ಮಾಜಿ ಆಟಗಾರ್ತಿಯರ ಮುಖದಲ್ಲಿ ನಗು ಮೂಡಿಸಿದೆ.

ಹಿರಿತನದ ಪ್ರಕಾರ ಹುದ್ಧೆ ಸಿಗುವ ಸಾಧ್ಯತೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಆಡಿ. ರಾಜ್ಯದ ಹೆಸರನ್ನು ಬೆಳಗಿದವರಲ್ಲಿ ಅಗ್ರಸ್ಥಾನ ಶಾಂತ ರಂಗಸ್ವಾಮಿ ಹಾಗೂ ಕಲ್ಪನಾ ಅವರಿಗೆ ಸಲ್ಲುತ್ತದೆ. ಇವರ ಬಳಿಕ ಅನೇಕ ಕ್ರಿಕೆಟಿಗರು ಇದ್ದಾರೆ. ಹಿರಿತನ, ಅನುಭವದ ಪ್ರಕಾರ ಕೆಎಸ್‌
ಸಿಎ ಅವಕಾಶ ಕೊಡುವುದಿದ್ದರೆ ಮೊದಲಿಗೆ ಶಾಂತ ಹಾಗೂ ಕಲ್ಪನಾ ಹೆಸರು ಕಾಣುತ್ತದೆ. 

ಇನ್ನು 6 ತಿಂಗಳೊಳಗೆ ನಿರ್ಧಾರ: ಒಟ್ಟಾರೆ ಇದೆಲ್ಲ ಸಾಕಾರಗೊಳ್ಳಲು, ರಾಜ್ಯದಲ್ಲಿ ಮಹಿಳಾ ದರ್ಬಾರ್‌ ಕಾಣಲು ಇನ್ನೂ ಆರು ತಿಂಗಳು
ಬೇಕು. ಇದಕ್ಕೆ ಕಾರಣ ಸುಪ್ರೀಂ ಕೋರ್ಟ್‌ ಆದೇಶ. ಹೌದು, ಸದ್ಯ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಚುನಾವಣೆಗೆ ಸುಪ್ರೀಂ ತಡೆ ನೀಡಿದೆ. ಎಲ್ಲ
ರಾಜ್ಯಗಳು ಸುಪ್ರೀಂ ಆದೇಶ ಬಂದ ಬಳಿಕವಷ್ಟೇ ದೇಶದಾದ್ಯಂತ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೂ ಚುನಾವಣೆ ನಡೆಸಲಿವೆ. 

Advertisement

ಇದೊಂದು ಸ್ವಾಗತಾರ್ಹ ನಿರ್ಧಾರ. ಲೋಧಾ ಶಿಫಾರಸು ಗೌರವಿಸುತ್ತೇನೆ. ಅವಕಾಶ ಸಿಕ್ಕರೆ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ನಾನು ಸಿದ್ಧವಾಗಿದ್ದೇನೆ. 
ಶಾಂತಾ ರಂಗಸ್ವಾಮಿ, ಮಾಜಿ ಕ್ರಿಕೆಟ್‌ ಆಟಗಾರ್ತಿ

ರಾಜ್ಯದ ಮಹಿಳಾ ಕ್ರಿಕೆಟ್‌ಗೆ ಹೊಸ ಆಯಾಮ ನೀಡಲು ಉತ್ಸುಕಳಾಗಿದ್ದೇನೆ. ಈ ನಿಟ್ಟಿನಲ್ಲಿ ಅವಕಾಶ ಎದುರಿಗೆ ಬಂದರೆ ಕೈ ಚಾಚಿ ಅಪ್ಪಿಕೊಳ್ಳುತ್ತೇನೆ.
ಕಲ್ಪನಾ ವೆಂಕಟಾಚಾರ್‌, ಮಾಜಿ ಕ್ರಿಕೆಟ್‌ ಆಟಗಾರ್ತಿ 

ಕೆಎಸ್‌ಸಿಎನಲ್ಲಿ ಅವಕಾಶ ಪಡೆಯಲು ಪ್ರತಿ ಮಹಿಳಾ ಆಟಗಾರ್ತಿಯರಿಗೂ ಹಕ್ಕಿದೆ. ಸುಪ್ರೀಂ ಸೂಚಿಸಿದಂತೆ ಲೋಧಾ ಶಿಫಾರಸು ಪಾಲಿಸುವುದು ಕಡ್ಡಾಯ. 
ವಿನಯ್‌ ಮೃತ್ಯುಂಜಯ, ಕೆಎಸ್‌ಸಿಎ ಮಾಧ್ಯಮ ವಕ್ತಾರ

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next