ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ! ಆಕೆಯ ಬಗ್ಗೆ ಬರೆಯುವುದಕ್ಕೆ ಹೋದರೆ ಪದಗಳು ಸಾಲದು ಎನಿಸುತ್ತದೆ. ಯಾವುದೇ ಪದಗಳಲ್ಲಿ ಅವಳನ್ನು ವರ್ಣಿಸುವುದಕ್ಕೆ ಹೋದರೂ, ಆಕೆಯ ಪಾತ್ರದೆದುರು ಆ ಪದವೇ ಸೋತುಬಿಡುತ್ತದೆ! ಒಂದು ಪದದಲ್ಲಿ, ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ವ್ಯಕ್ತಿತ್ವ ಅಮ್ಮನದು.
ಅಮ್ಮ,
ನಾ ಹುಟ್ಟಿದ ಮೇಲಲ್ಲವೇ ನೀನು ನಿನಗಾಗಿ ಬದುಕುವುದನ್ನು ಮರೆತದ್ದು. ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು, ಎಂತಹ ಅನುಬಂಧವಿದು ಸೃಷ್ಟಿಕರ್ತನ ನಿಷ್ಕಲ್ಮಶ ಸಂಬಂಧವಿದು. ನಾ ಗರ್ಭದಲ್ಲಿರುವಾಗಲೇ ನನ್ನ ಮೇಲೆ ಕಟ್ಟತೊಡಗಿದ ಕನಸುಗಳನೆಲ್ಲಾ ಎಲ್ಲರೊಡನೆ ವಿವರಿಸುತ್ತಿದ್ದೆ. ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ. ಅತ್ತರೆ ಹಸಿವೆಂದು ಮೊದಲು ಎದೆಹಾಲ ಉಣಿಸಿ, ನನ್ನ ಸಂತೋಷಕ್ಕೆಂದು ಅಪ್ಪನಿಂದ ಏನೆಲ್ಲಾ ಆಟದ ಸಾಮಾನುಗಳನ್ನು ತರಿಸಿ, ನನ್ನ ನಗುವ ನೀ ನೋಡುತ್ತಿದ್ದೆ.
ತುತ್ತು ತಿನ್ನಲು ಹಟತೊಟ್ಟರೆ ಮುತ್ತು ನೀಡುತ್ತಾ, ಅಪ್ಪನನ್ನೇ ಆನೆ ಮಾಡಿ ನನ್ನ ಅಂಬಾರಿಯಂತೆ ಕೂರಿಸಿ ಏನೆಲ್ಲಾ ಆಟ ಆಡಿಸುತ್ತಿದ್ದೆ. ಚಂದಮಾಮನ ಕೊಡಿಸೋ ಆಸೆ ತೋರಿಸಿ, ನನ್ನ ಕಿಲ ಕಿಲ ನಗುವಲ್ಲಿ ಆ ನಗುವ ನಡುವಲ್ಲಿ, ತುತ್ತು ತಿನ್ನಿಸಿ ಏನೆಲ್ಲಾ ಸಂತಸವ ಕಾಣುತ್ತಿದ್ದೆ. ನೀನು ನಿನಗೋಸ್ಕರ ಖುಷಿಪಟ್ಟ ದಿನ ನಾ ನೋಡಲೇ ಇಲ್ಲವಲ್ಲ !. ನನ್ನ ಕಣ್ಣಲೊಂದು ಹನಿ ಬಿದ್ದರೆ ಅಂದು ಮರುಗುವವಳು ನೀನು. ನಿನ್ನ ಋಣ ಹೇಗೆ ತೀರಿಸಲಿ ? ಮರು ಜನ್ಮದಲ್ಲಾದರೂ ನನಗೆ ನಿನ್ನ ಸ್ಥಾನವ ಕರುಣಿಸುವೆಯಾ ?
– ನಿನ್ನ ಪ್ರೀತಿಯ ಮಗಳು
ತಾಯಿ ಸಂತೋಷವಾಗಿದ್ದರೆ ಕುಟುಂಬ ಸಮೃದ್ಧವಾಗಿರುತ್ತದೆ. ಕುಟುಂಬ ಸಂತೋಷವಾಗಿದ್ದರೇ ದೇಶ ಅಭಿವೃದ್ಧಿಯಾಗುತ್ತದೆ. ಅಂದರೆ ಇಡೀ ದೇಶದ ಸಂತೋಷ ತಾಯಿಯ ಮೇಲೆ ನಿಂತಿದೆ ಎಂಬ ಭಾರತದ ಹೆಮ್ಮೆ, ರಾಷ್ಟ್ರಪತಿಯಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾತಲ್ಲಿ ‘ತಾಯಿಗಿಂತ ದೊಡ್ಡದು ಇನ್ನೇನು ಇಲ್ಲ ಎಂಬ ಭಾವ ವ್ಯಕ್ತವಾಗಿದೆ. ಅಮ್ಮನನ್ನು, ಆಕೆ ಮಕ್ಕಳ ಮೇಲೆ ತೋರುವ ಪ್ರೀತಿಯನ್ನು, ಜೀವನದುದ್ದಕ್ಕೂ ಮಾಡಿದ ತ್ಯಾಗವನ್ನು, ಸಾಕು ಸಾಕೆನಿಸುವಷ್ಟು ಸುರಿಯುವ ವಾತ್ಸಲ್ಯವನ್ನು ಕೆಲವೇ ಪದಗಳಲ್ಲಿ ಹಿಡಿದಿಡುವುದು ಯಾರಿಂದಲೂ ಸಾಧ್ಯವಿಲ್ಲ. ಎಲ್ಲರಿಗೂ ಅವರ ತಾಯಿ ನಾಯಕಿಯೇ, ಆದರ್ಶವೇ. ಬದುಕಿನ ಪುಟಗಳೇ ಹಾಗೆ, ತಿರುವಿಹಾಕಿದಷ್ಟು ಮುಗಿಯದ ಹೊತ್ತಿಗೆ…. ಬಾಲ್ಯದ ಅಮ್ಮ ಕೊನೆವರೆಗೂ ಅಮ್ಮನೇ…
-ಸಾನಿಯಾ. ಅರ್
ಶಿವಮೊಗ್ಗ