Advertisement

Womenವಿವಸ್ತ್ರ ಪ್ರಕರಣ:ಮೂಕಪ್ರೇಕ್ಷಕರಾಗಿದ್ದ ಗ್ರಾಮಸ್ಥರಿಗೂ ದಂಡ ವಿಧಿಸಲು ಹೈಕೋರ್ಟ್‌ ಸಲಹೆ

11:21 PM Dec 18, 2023 | Team Udayavani |

ಬೆಂಗಳೂರು: ಅಮಾನವೀಯ ಕೃತ್ಯ ನಡೆಯುತ್ತಿದ್ದರೂ ಅದನ್ನು ತಡೆಯದೆ ಮೂಕ ಪ್ರೇಕ್ಷಕರಾಗಿದ್ದ ಗ್ರಾಮಸ್ಥರ ಮೇಲೆ ಸಾಮೂಹಿಕ ಜವಾಬ್ದಾರಿ ನಿಗದಿ ಪಡಿಸಿ ದಂಡ ವಿಧಿಸಬಹುದಾದ ಮಾದರಿಯಲ್ಲಿ ಯೋಜನೆ ರೂಪಿಸಲು ಹೈಕೋರ್ಟ್‌ ಸರಕಾರಕ್ಕೆ ಮೌಖಿಕ ಸಲಹೆ ನೀಡಿದೆ.

Advertisement

ಬೆಳಗಾವಿ ತಾಲೂಕಿನ ಹೊಸ ವಂಟಮೂರಿಯಲ್ಲಿ ನಡೆದ ಮಹಿಳೆಯ ವಿವಸ್ತ್ರಗೊಳಿಸಿ ಮೆರವಣಿಗೆ ಮತ್ತು ಹಲ್ಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ಪ್ರಸನ್ನ ಬಿ.ವರಾಲೆ ಮತ್ತು ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಈ ಸಲಹೆ ನೀಡಿತು.

ವಿಚಾರಣೆ ವೇಳೆ ನ್ಯಾಯಪೀಠ, ಬ್ರಿಟಿಷ್‌ ಆಡಳಿತದಲ್ಲಿ ಗವರ್ನರ್‌ ಜನರಲ್‌ ಆಗಿದ್ದ ವಿಲಿಯಂ ಬೆಂಟಿಂಕ್‌ ಎಂಬವರು ಕಳ್ಳತನ ಮಾಡುವವರಿದ್ದ ಗ್ರಾಮಕ್ಕೆ ಪುಂಡಗಂದಾಯ ಎಂಬ ತೆರಿಗೆ ವಿಧಿಸುತ್ತಿದ್ದರು. ತಪ್ಪು ನಡೆಯುತ್ತಿದ್ದರೂ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಸಾರ್ವಜನಿಕರಿಗೂ ಅದೇ ರೀತಿಯಲ್ಲಿ ತೆರಿಗೆ ವಿಧಿಸಲು ಮುಂದಾದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಇಂತಹ ಘಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೌನವಾಗಿರದೆ ಕನಿಷ್ಠ ರಕ್ಷಣ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ನ್ಯಾಯ ಪೀಠ ತಿಳಿಸಿತು.

ರಾಜ್ಯದ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಎಂಟು ಸಾವಿರ ಜನರಿರುವ ಗ್ರಾಮದಲ್ಲಿ 50-60 ಮಂದಿ ಘಟನಾ ಸ್ಥಳದಲ್ಲಿ ನೆರೆದಿದ್ದರು. 13 ಮಂದಿ ಹಲ್ಲೆ ಮಾಡುತ್ತಿದ್ದರು. ಜಹಾಂಗೀರ್‌ ಎಂಬ ಏಕೈಕ ವ್ಯಕ್ತಿ ದಾಳಿಕೋರರಿಂದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಪಟ್ಟಿದ್ದ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನು ಆಲಿಸಿದ ನ್ಯಾಯಪೀಠ, ದಾಳಿಕೋರರ ಕ್ರಿಯೆಗಿಂತಲೂ ಸ್ಥಳದಲ್ಲಿ ನಿಂತಿದ್ದವರ ನಿಷ್ಕ್ರಿಯತೆ ಹೆಚ್ಚು ಅಪಾಯಕಾರಿ. ಘಟನೆಯನ್ನು ವೀಕ್ಷಿಸುತ್ತಿದ್ದವರು ದುಷ್ಕರ್ಮಿಗಳನ್ನು ಹೀರೋಗಳನ್ನಾಗಿಸುತ್ತಾರೆ. ಇದು ಗ್ರಾಮಸ್ಥರ ಹೇಡಿತನ ಮತ್ತು ಬೇಜವಾಬ್ದಾರಿ ಎಂದು ಬೇಸರ ವ್ಯಕ್ತಪಡಿಸಿತು.

Advertisement

ಜನವರಿ ಮೂರನೇ ವಾರಕ್ಕೆ ಮುಂದೂಡಿಕೆ
ಘಟನೆ ನಡೆಯುತ್ತಿದ್ದಾಗ ಇಡೀ ಗ್ರಾಮದಲ್ಲಿ ಯಾರೂ ಯಾಕೆ ಮುಂದೆ ಬರಲಿಲ್ಲ ಎಂಬ ಬಗ್ಗೆ ಮಾಹಿತಿ ಪಡೆಡು ಕಾನೂನು ಆಯೋಗಕ್ಕೆ ತಿಳಿಸಬೇಕು ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಜನವರಿ ತಿಂಗಳ ಮೂರನೇ ವಾರಕ್ಕೆ ಮುಂದೂಡಿತು.

ಗಂಡು ಮಕ್ಕಳಿಗೆ ಶಿಕ್ಷಣ ಅಗತ್ಯ
ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಪುರುಷರಿಗೆ ಕಲಿಸಬೇಕಾಗಿದೆ. ಇದು ಬೇಟಿ ಬಚಾವೋ, ಬೇಟಿ ಪಡಾವೋ ಅಲ್ಲದೆ, ಹೆಣ್ಣು ಮಗುವನ್ನು ರಕ್ಷಿಸ‌ಲು ಬೇಟಾ ಪಡಾವೋ ಆಗಬೇಕು. ಮಹಿಳೆಯರೊಂದಿಗೆ ಗೌರವಯುತವಾಗಿ ವರ್ತಿಸುವ ಕುರಿತು ಗಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನ್ಯಾಯಪೀಠ ಇದೇ ವೇಳೆ ತಿಳಿಸಿತು.

ಮಹಿಳೆ ವಿವಸ್ತ್ರ ಪ್ರಕರಣ: ಸಿಐಡಿ ತನಿಖೆ ಚುರುಕು
ಬೆಳಗಾವಿ: ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ತನಿಖೆ ಚುರುಕುಗೊಂಡಿದ್ದು, ಸೋಮವಾರ ಬೆಳಗಾವಿಗೆ ಭೇಟಿ ನೀಡಿ ಪೊಲೀಸರಿಂದ ಸಂಪೂರ್ಣ ವಿವರ ಪಡೆದುಕೊಂಡರು.

ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಸಿಐಡಿ ಡಿಐಜಿ ಸುಧಿಧೀರಕುಮಾರ್‌ ರೆಡ್ಡಿ ನೇತೃತ್ವದ ತಂಡದಲ್ಲಿ ಇಬ್ಬರು ಎಸ್‌ಪಿ, ಡಿವೈಎಸ್‌ಪಿ ಇದ್ದು, ಪೊಲೀಸರಿಂದ ಮಾಹಿತಿ ಕಲೆ ಹಾಕಿದರು. ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಿಐಡಿ ತನಿಖಾ ತಂಡ ಕಾಕತಿ ಠಾಣೆ ಪಿಎಸ್‌ಐ ಮಂಜುನಾಥ ಹುಲಕುಂದ ಹಾಗೂ ಸಿಬಂದಿಯಿಂದ ಘಟನಾ ವಳಿಯ ವಿವರ ಪಡೆದರು.

ಘಟನೆ ನಡೆದಾಗ ಮೊದಲು ಪಿಎಸ್‌ಐ ಸ್ಥಳಕ್ಕೆ ಹೋಗಿದ್ದರು. ಬಳಿಕ ಸಂತ್ರಸ್ತೆಯನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು. ಸಂತ್ರಸ್ತೆಯ ಮನೆಗೂ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next